ಮಂಗಳವಾರ, ಜನವರಿ 28, 2020
29 °C
ದುಂಡು ಮೇಜಿನ ಸಭೆ: ಒಗ್ಗಟ್ಟಿನ ಮಂತ್ರ ಜಪ

ಬಲಾಢ್ಯ ಆರ್‌ಎಸ್‌ಎಸ್‌ ವಿರುದ್ಧ ಒಂದಾಗಿ ಹೋರಾಡಬೇಕಿದೆ: ಹೋರಾಟಗಾರ ಪ.ಮಲ್ಲೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಂಘಟನೆ ಬಲಾಢ್ಯವಾಗಿದೆ. ಇದರ ಜತೆಗೆ ಅಧಿಕಾರವೂ ಅವರ ತೆಕ್ಕೆಯಲ್ಲಿದೆ. ಈ ಬಲಾಢ್ಯರ ವಿರುದ್ಧ ನ್ಯಾಯಕ್ಕಾಗಿ ಹೋರಾಡಬೇಕು ಎಂದರೇ ನೂರಾರು ಸಂಘಟನೆಗಳಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿದರೆ ಮಾತ್ರ ಹೋರಾಟಕ್ಕೆ ಶಕ್ತಿ ಬರಲಿದೆ’ ಎಂದು ಹೋರಾಟಗಾರ ಪ.ಮಲ್ಲೇಶ್‌ ತಿಳಿಸಿದರು.

ನಗರದ ಕುವೆಂಪು ಉದ್ಯಾನದಲ್ಲಿ ಮಂಗಳವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ‘ವಿರೋಧ ಪಕ್ಷಗಳು ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸತ್ತು ಹೋಗಿವೆ. ಯುವ ಸಮೂಹ ಆರ್‌ಎಸ್‌ಎಸ್, ಬಿಜೆಪಿಯತ್ತ ಆಕರ್ಷಿತವಾಗಿದೆ. ದೇಶದಲ್ಲಿ ಅಪಾಯಕಾರಿ ವ್ಯವಸ್ಥೆ ಸೃಷ್ಟಿಯಾಗಿದೆ. ಇದರ ವಿರುದ್ಧ ಹೋರಾಡಲು ಎಲ್ಲರೂ ತಮ್ಮ ಹಣೆಪಟ್ಟಿ ಕಳಚಿ, ಒಂದಾಗಬೇಕಿದೆ’ ಎಂದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದರು.

‘ಪತ್ರಿಕಾ ಪ್ರಚಾರ, ನಮ್ಮ ನಾಯಕತ್ವದ ಅಸ್ತಿತ್ವಕ್ಕಾಗಿ ಸಭೆ ಸೇರಿ ಚರ್ಚಿಸೋದನ್ನು ಬಿಡಬೇಕಿದೆ. ದಲಿತ, ರೈತ ಸಂಘಟನೆ ಬಲಹೀನವಾದ ಸಂದರ್ಭ ಎಲ್ಲರೂ ಒಗ್ಗೂಡಲೇಬೇಕಿದೆ. ಒಕ್ಕೊರಲಿನಿಂದ ಆಡಳಿತಾರೂಢರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕಿದೆ. ಮುಂದೆ ಏನು ಮಾಡಬೇಕು ಎಂಬ ದಿಕ್ಕಿನಲ್ಲಿ ಸಾಗಬೇಕಿದೆ’ ಎಂದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ನಿರ್ಧಾರದ ವಿರುದ್ಧ ಕೇರಳ ಸೆಟೆದು ನಿಂತಿದೆ. ಆದರೆ ಇದರಿಂದ ಏನು ಪ್ರಯೋಜನವಾಗಲ್ಲ. ಭದ್ರ ಬುನಾದಿ ಇಲ್ಲದ ಕನಕಪುರದಲ್ಲಿ ಒಬ್ಬ ವ್ಯಕ್ತಿ ನೀಡಿದ ಕರೆಗೆ ಸಹಸ್ರ, ಸಹಸ್ರ ಸಂಖ್ಯೆಯ ಕೇಸರಿ ಬಾವುಟ ರಾರಾಜಿಸಿದವು. ನಾವು ಕರೆದರೆ ಅವೇ ಮುಖಗಳು. ಸಂಖ್ಯೆ ನೂರು ದಾಟಲ್ಲ. ಪ್ರಧಾನಿ ಮೋದಿಗೂ ಆರ್‌ಎಸ್‌ಎಸ್‌ ನಾಯಕ. ನಮಗೆ ನಾವೇ ನಾಯಕರಾದ ಪರಿಣಾಮವಿದು. ಮುಂದಿನ ಹೆಜ್ಜೆಯನ್ನು ದೃಢ ನಿರ್ಧಾರದೊಂದಿಗಿಡಬೇಕಿದೆ. ಪತ್ರಿಕಾ ಪ್ರಚಾರಕ್ಕಷ್ಟೇ ಸೀಮಿತವಾಗೋದು ಬೇಡ’ ಎಂಬ ಕಿವಿಮಾತನ್ನು ಹೋರಾಟಗಾರರ ಸಮೂಹಕ್ಕೆ ಮಲ್ಲೇಶ್‌ ಹೇಳಿದರು.

‘ಜಾತಿ ಸಂಘಟನೆಗಳ ಬಲ ಹೆಚ್ಚುತ್ತಿದೆ. ಯುವಕರು ಜಾತಿಯ ಬೆನ್ನು ಬಿದ್ದಿದ್ದಾರೆ. ಇಂತಹವರ ಜತೆ ದೇಶ ಕಟ್ಟೋದು ಸಾಧ್ಯವಾ ? ಆರ್‌ಎಸ್‌ಎಸ್‌ ಜತೆ ಹೋದವರು ನಮ್ಮ ಜತೆ ಬರ್ತಾರಾ ? ಪೌರತ್ವ (ತಿದ್ದುಪಡಿ) ಕಾಯ್ದೆ ಮಾಮೂಲಾಯ್ತು. ಅದನ್ನು ಬಿಟ್ಟುಬಿಡಿ. ಕರ್ನಾಟಕದ ಮಟ್ಟಿಗಾದರೂ ಒಂದೇ ಸಂಘಟನೆ ಕಟ್ಟೋಣ. ಯುವಕರ ಒಡನಾಟ ಬೆಳೆಸಿಕೊಳ್ಳೋಣ. ಅವರಲ್ಲಿಗೆ ಹೋಗೋಣ. ಹಿಂದೂ ರಾಷ್ಟ್ರದ ಹುನ್ನಾರದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಮೂಲೆಗುಂಪಾಗ್ತಾರೆ. ಆಗ ರಕ್ತಪಾತವಾಗುತ್ತದೆ. ಬಲಾಢ್ಯ ಸರ್ಕಾರ ಎಲ್ಲವನ್ನೂ ನಿಗ್ರಹಿಸುತ್ತದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಮೈಸೂರಿನಿಂದ ಸಂದೇಶವೊಂದನ್ನು ನೀಡೋಣ. ಎಲ್ಲೆಡೆಯೂ ಸಂಚರಿಸೋಣ’ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಬೆಟ್ಟಯ್ಯಕೋಟೆ, ಕೆ.ಬಸವರಾಜು, ಕಾ.ರಾ.ಗೋಪಾಲಕೃಷ್ಣ, ಪಿ.ರಾಜು, ಶಾಂತರಾಜು, ಪ್ರೊ.ಕೆ.ಎಂ.ಜಯರಾಮಯ್ಯ, ಜಿ.ಪ್ರಕಾಶ್, ರಾಜೇಂದ್ರ, ಕಾಡನಹಳ್ಳಿ ಸ್ವಾಮಿ, ಸುರೇಶ್‌ಬಾಬು, ಪ್ರೊ.ಮಹೇಶ್‌, ಶಬ್ಬೀರ್ ಮುಸ್ತಫಾ ಮತ್ತಿತರರು ದುಂಡು ಮೇಜಿನ ಸಭೆಯಲ್ಲಿ ಭಾಗಿಯಾಗಿದ್ದರು.

ಅಘೋಷಿತ ತುರ್ತು ಪರಿಸ್ಥಿತಿ

‘ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗಲೂ ಇಷ್ಟೊಂದು ಭೀಕರತೆಯಿರಲಿಲ್ಲ. ಘೋಷಿಸದ ತುರ್ತು ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ’ ಎಂದು ರಂಗಕರ್ಮಿ ಜನಾರ್ಧನ ಕಿಡಿಕಾರಿದರು.

‘ಮಾನವತೆಯ ಹಾದಿಗೆ ನಾವು ಮರಳಬೇಕಿದೆ. ನಮಗೆ ನಿಮ್ಮ ಪೌರತ್ವವೇ ಬೇಕಿಲ್ಲ. ಅನ್ನ, ಸೂರು, ಬದುಕು, ಸಮಾನತೆ ಬೇಕಿದೆ. ಮನುಷ್ಯತ್ವವನ್ನೇ ಕೊಲ್ಲುವ ಹುನ್ನಾರ’ ನಡೆದಿದೆ ಎಂದು ಗುಡುಗಿದರು.

‘ಬ್ರಿಟಿಷರ ದೇಶದ್ರೋಹದ ಕಾಯ್ದೆ ನಮಗ್ಯಾಕೆ ಬೇಕಿದೆ. ವೈದಿಕ ಕ್ರೌರ್ಯ ಇಂದಿಗೂ ನಿಲ್ಲದಾಗಿದೆ. ನಮ್ಮ ಮನಸ್ಥಿತಿ ಅರಿತೇ ಅವರು ಇಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು