ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಂದು ಸುತ್ತೂರು ಜಾತ್ರೆ: ಪೂಜೆಗಷ್ಟೇ ಸೀಮಿತ

ರಥೋತ್ಸವ ಸೇರಿದಂತೆ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು: ಆನ್‌ಲೈನ್‌ ನೇರ ಪ್ರಸಾರ
Last Updated 5 ಫೆಬ್ರುವರಿ 2021, 16:06 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌–19 ಸೋಂಕು ಹರಡುವಿಕೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ, ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಈ ಬಾರಿ ಒಂದು ದಿನವಷ್ಟೇ ನಡೆಸಲು ಶ್ರೀಮಠ ಕ್ರಮ ತೆಗೆದುಕೊಂಡಿದೆ.

ಮಠದ ಪರಂಪರೆಯಂತೆ ಜಾತ್ರೆ ಫೆ.8ರಿಂದ 13ರವರೆಗೆ ನಡೆಯಬೇಕಿತ್ತು. ಆದರೆ ಈ ಬಾರಿ ಪುಷ್ಯ ಬಹುಳ ಚತುದರ್ಶಿಯ ಮಾಸ ಶಿವರಾತ್ರಿಯ ದಿನವಷ್ಟೇ (ಫೆ.10) ಪೂಜೆಗೆ ಸೀಮಿತವಾಗಿ ಜಾತ್ರೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಸುತ್ತೂರು ಮಠದ ಜಾತ್ರೆ ಈ ಭಾಗದಲ್ಲಿ ನಡೆಯುವ ಬೃಹತ್‌ ಜಾತ್ರೆಗಳಲ್ಲೊಂದು. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಸಮಾರಂಭ, ಸ್ಪರ್ಧೆ ಆಯೋಜಿಸುತ್ತಿತ್ತು.

ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ವಿವಿಧ ಉತ್ಸವಗಳು, ಲಕ್ಷ ದೀಪೋತ್ಸವ, ಜಂಗಮೋತ್ಸವ, ಗುರು ಬ್ರಹ್ಮೋತ್ಸವ, ವಸ್ತು ಪ್ರದರ್ಶನ, ಕೃಷಿ ಮೇಳ, ದೋಣಿ ವಿಹಾರ, ದೇಸಿ ಆಟಗಳು, ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಮೇಳ, ಧಾರ್ಮಿಕ ಸಭೆ, ಕೃಷಿ ವಿಚಾರ ಸಂಕಿರಣ, ಭಜನಾ ಮೇಳ, ಸಾಮೂಹಿಕ ವಿವಾಹ, ದನಗಳ ಪರಿಷೆ, ಚಿತ್ರಕಲಾ ಸ್ಪರ್ಧೆ, ಚಿತ್ರ ಸಂತೆ, ರಸಪ್ರಶ್ನೆ, ರಂಗೋಲಿ ಸ್ಪರ್ಧೆ, ಸೋಬಾನೆ ಪದ ಸ್ಪರ್ಧೆ, ಗಾಳಿಪಟ ಸ್ಪರ್ಧೆ, ಕಲಾ ತಂಡಗಳ ಪ್ರದರ್ಶನ, ಗ್ರಾಮಾಂತರ ನಾಟಕ, ಬಾಣ–ಬಿರುಸುಗಳ ಪ್ರದರ್ಶನ ಸೇರಿದಂತೆ ಯಾವೊಂದು ಚಟುವಟಿಕೆಯೂ ಈ ಬಾರಿ ನಡೆಯಲ್ಲ ಎಂದು ಶ್ರೀಮಠ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಸಾಮೂಹಿಕ ವಿವಾಹವೂ ಈ ಬಾರಿ ನಡೆಯಲ್ಲ. ಇದರ ಬದಲಾಗಿ ಮುಂದಿನ ಜಾತ್ರೆಯವರೆಗೂ ಪ್ರತಿ ತಿಂಗಳು ಸಾಮೂಹಿಕ ವಿವಾಹವನ್ನು ಶ್ರೀಕ್ಷೇತ್ರದಲ್ಲಿ ನಡೆಸಲಾಗುವುದು. ವಧು–ವರರಿಗೆ ಮಾಂಗಲ್ಯ, ಸೀರೆ, ಕಾಲುಂಗುರ, ಶರ್ಟ್, ಪಂಚೆ ಮತ್ತು ವಲ್ಲಿಗಳನ್ನು ಉಚಿತವಾಗಿ ನೀಡುತ್ತಿದೆ.

ಶಿವದೀಕ್ಷೆ-ಲಿಂಗದೀಕ್ಷೆ ಪಡೆಯಬಯಸುವವರು ಫೆ.9ರ ಸಂಜೆಯೊಳಗಾಗಿ ಶ್ರೀಕ್ಷೇತ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ಜಾತ್ರಾ ಮಹೋತ್ಸವದ ಪೂಜಾ ವಿಧಿ–ವಿಧಾನಗಳನ್ನು ಶ್ರೀಮಠದಿಂದಲೇ ಅಂತರ್ಜಾಲದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಈ ಲಿಂಕ್‌ಮೂಲಕ ವೀಕ್ಷಿಸಬಹುದುhttps://www.youtube.com/c/JSSMahavidyapeethaonline ಎಂದು ಮಠದ ಪ್ರಕಟಣೆ ತಿಳಿಸಿದೆ.

ಪೂಜಾ ಕಾರ್ಯಕ್ರಮದ ವಿವರ

ಫೆ.9ರ ಮಂಗಳವಾರ ಸಂಜೆ 4.45ಕ್ಕೆ ಶ್ರೀಮಠದಿಂದ ಉತ್ಸವಮೂರ್ತಿಯನ್ನು ಕರ್ತೃ ಗದ್ದುಗೆಗೆ ತರಲಾಗುವುದು. ನಂತರ ಜಾತ್ರಾ ಮಹೋತ್ಸವದ ಎಲ್ಲ ಪೂಜಾ ಕೈಂಕರ್ಯಗಳು ನಡೆಯಲಿವೆ.

ಬುಧವಾರ ನಸುಕಿನ 4 ಗಂಟೆಗೆ ಕರ್ತೃ ಗದ್ದುಗೆ, ಗದ್ದುಗೆಗಳು, ನಂಜುಂಡೇಶ್ವರ ದೇವಸ್ಥಾನ (ಕರ್ತೃಗದ್ದುಗೆ ಆವರಣ), ಮಹದೇಶ್ವರ ಸನ್ನಿಧಿ, ಸೋಮೇಶ್ವರ ದೇವಸ್ಥಾನ (ಶ್ರೀಮಠದ ಆವರಣ), ವೀರಭದ್ರೇಶ್ವರ ದೇವಸ್ಥಾನದಲ್ಲಿ (ಗುಡ್ಡ) ಮಹಾರುದ್ರಾಭಿಷೇಕ ನಡೆಯಲಿದೆ.

ಬೆಳಿಗ್ಗೆ 5 ಗಂಟೆಗೆ ಶಿವದೀಕ್ಷೆ-ಲಿಂಗದೀಕ್ಷೆ ಜರುಗಲಿದೆ. 6ಕ್ಕೆ ಸುತ್ತೂರು ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದರೆ, 7.20ಕ್ಕೆ ಷಟ್‍ಸ್ಥಲ ಧ್ವಜಾರೋಹಣ ನೆರವೇರಲಿದೆ.

ಆದಿ ಜಗದ್ಗುರುವಿನ ಉತ್ಸವಮೂರ್ತಿಗೆ ರಾಜೋಪಚಾರ ಬೆಳಿಗ್ಗೆ 7.30ಕ್ಕೆ ನಡೆದರೆ, 10 ಗಂಟೆಗೆ ರಥಗಳಿಗೆ ವಿಶೇಷ ಪೂಜೆ ನೆರವೇರಲಿದೆ. ಮಧ್ಯಾಹ್ನ 2.35ಕ್ಕೆ ಕಪಿಲಾ ನದಿ ತೀರದಲ್ಲಿ (ತೆಪ್ಪದ ಕಡು) ಉತ್ಸವಮೂರ್ತಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಜರುಗಲಿದೆ. ಸಂಜೆ 6.30ಕ್ಕೆ ಉತ್ಸವಮೂರ್ತಿಯನ್ನು ಕರ್ತೃ ಗದ್ದುಗೆಯಿಂದ ಶ್ರೀಮಠಕ್ಕೆ ಕರೆತರಲಾಗುವುದು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT