ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನವರು ಕೊಳಕು ಕೊಳದಲ್ಲಿ ಬಿದ್ದ ಕೋಣದಂತೆ: ಸದಾನಂದಗೌಡ ವ್ಯಂಗ್ಯ

‘ರೈತರ ಹಾದಿ ತಪ್ಪಿಸಿ ಕಾಂಗ್ರೆಸ್‌ನಿಂದ ದೇಶದ್ರೋಹ’
Last Updated 8 ಅಕ್ಟೋಬರ್ 2020, 8:05 IST
ಅಕ್ಷರ ಗಾತ್ರ

ಮೈಸೂರು: ‘60ರ ದಶಕದಲ್ಲಿ ಆಹಾರಕ್ಕಾಗಿ ಬೇರೆ ಬೇರೆ ದೇಶಗಳ ಭಿಕ್ಷೆ ಬೇಡಬೇಕಿತ್ತು. ಈಗ ಇಡೀ ವಿಶ್ವಕ್ಕೆ ಆಹಾರ ಪೂರೈಸುವ ಶಕ್ತಿ ಹೊಂದಿದ್ದೇವೆ. ಆದರೆ, ರೈತರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್‌ನವರು ಮಾತ್ರ ದೇಶದ್ರೋಹದ ಕೆಲಸದಲ್ಲಿ ತೊಡಗಿದ್ದಾರೆ’ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಗುರುವಾರ ಇಲ್ಲಿ ಆರೋಪಿಸಿದರು.

‘ಈ ವಿಚಾರವನ್ನು ಪ್ರತಿ ರೈತನ ಮನೆಗೆ ಹೋಗಿ ಹೇಳುತ್ತೇವೆ. ಕೃಷಿ ಮಸೂದೆಗಳ ಉದ್ದೇಶ ತಿಳಿಸಿಕೊಡುತ್ತೇವೆ. ರೈತ ಮುಖಂಡರು ಮುಂದೆ ಬಂದರೆ ಚರ್ಚಿಸಲು ಸಿದ್ಧ. ಆದರೆ, ರಾಜಕೀಯ ವಿರೋಧಿಗಳ ಜೊತೆ ಮಾತನಾಡುವುದಿಲ್ಲ. ಅವರದ್ದು ಬರೀ ವಿರೋಧದ ಕೆಲಸ. ನಾವು ತಂದಿರುವ ತಿದ್ದುಪಡಿಗಳನ್ನು ಹಿಂದೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದ ಕಾಂಗ್ರೆಸ್‌ನವರು ಈಗ ನಮ್ಮನ್ನು ಟೀಕಿಸುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ 49 ಕಾರ್ಪೊರೇಟ್‌ ಕಂಪನಿಗಳಿಗೆ ವಿವಿಧ ಸ್ವರೂಪದಲ್ಲಿ ಪರವಾನಗಿ ಹಾಗೂ ಅವಕಾಶ ಮಾಡಿಕೊಟ್ಟರು. ಈಗ ನಮ್ಮ ನಿಲುವು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊಳಕು ಕೊಳದಲ್ಲಿ ಮಲಗಿದ ಕೋಣನಿಗೆ ಒಂದು ಏಟು ಬಿದ್ದರೆ ಎಲ್ಲೋ ಏಟು ಬಿದ್ದ ಹಾಗೆ ಕೇಳುತ್ತದೆ. ಎರಡನೇ ಏಟು ಬಿದ್ದಾಗ ಎಲ್ಲೋ ಪಕ್ಕದಲ್ಲಿ, ಮೂರನೇ ಏಟು ಬಿದ್ದಾಗ ಇಲ್ಲೇ ಸನಿಹದಲ್ಲಿ ಶಬ್ದ ಬರುತ್ತಿದೆ ಎನಿಸುತ್ತದೆ. ನಾಲ್ಕನೇ ಏಟು ಬಿದ್ದಾಗ ಹೌದು ತನಗೆ ಬಿದ್ದಿದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್‌ನವರಿಗೆ ಈಗ ನಾಲ್ಕನೇ ಏಟು ಬಿದ್ದಿದ್ದು ಎಚ್ಚೆತ್ತುಕೊಂಡಿದ್ದಾರೆ’ ಎಂದು ವ್ಯಂಗ್ಯ ಮಾಡಿದರು.

‘ಕಾಂಗ್ರೆಸ್‌ವರಿಗೆ ಬೇರೆ ಏನೂ ಕೆಲಸ ಇಲ್ಲವೆಂದರೆ ಮನೆಯಲ್ಲಿ ಕುಳಿತುಕೊಳ್ಳಲಿ. ಈಗ ಕೋವಿಡ್ ಬೇರೆ ಇದೆ. ಹೀಗಾಗಿ, ರೈತರಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು. ಅವರ ಕೆಟ್ಟ ಗಾಳಿ ರೈತರಿಗೆ ತಾಗುವ ಅಪಾಯವಿದೆ. ಮಾಸ್ಕ್‌ ಹಾಕಿಕೊಂಡು ಬಾಯಿ ಮುಚ್ಚಿಕೊಳ್ಳಲಿ. ಆಗಾಗ್ಗೆ ಸ್ಯಾನಿಟೈಸ್‌ ಹಾಕಿಕೊಳ್ಳಲಿ’ ಎಂದು ಟೀಕಿಸಿದರು.

‘ಹಿಂದೆ ನಮಗೆ ಬೇಕಾದ ಆಹಾರ ದೇಶದಲ್ಲಿ ಸಿಗುತ್ತಿರಲಿಲ್ಲ. ಇಷ್ಟಾದರೂ ಕಾಂಗ್ರೆಸ್‌ನವರು ಕಾನೂನು ತಿದ್ದುಪಡಿ ಮಾಡಿರಲಿಲ್ಲ. 1990ರ ದಶಕದಲ್ಲಿ ಜಾರಿಗೆ ತಂದ ಉದಾರೀಕರಣದಲ್ಲೂ ರೈತರಿಗೆ ನೆರವು ಸಿಗಲಿಲ್ಲ. ಹೀಗಾಗಿ, ಕೃಷಿ ಮಸೂದೆಗಳನ್ನು ತಿದ್ದುಪಡಿಸಿ ಮಾಡಿ ರೈತರಿಗೆ ಸ್ವಾಭಿಮಾನ ಹಾಗೂ ಸ್ವತಂತ್ರ ನೀಡುವ ಮಸೂದೆ ತಂದಿದ್ದೇವೆ’ ಎಂದು ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT