ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಛಾಯಾಗ್ರಾಹಣ ದಿನ: ಮಕ್ಕಳಿಗಿಟ್ಟರು ಕ್ಯಾಮೆರಾ ಕಂಪನಿ ಹೆಸರು

ನಗರದಲ್ಲಿ 25 ವರ್ಷಗಳಿಂದ ಕ್ಯಾಮೆರಾ ರಿಪೇರಿ ಮಾಡುತ್ತಿರುವ ವರ್ಗೀಸ್, ಅವರ ಪತ್ನಿ ಬೀನಾ
Last Updated 19 ಆಗಸ್ಟ್ 2020, 2:11 IST
ಅಕ್ಷರ ಗಾತ್ರ

ಮೈಸೂರು: ಕ್ಯಾಮೆರಾ ರಿಪೇರಿ ಮಾಡುತ್ತಲೇ 25 ವರ್ಷಗಳಿಂದ ಬದುಕು ಸಾಗಿಸಿದ ಇಲ್ಲಿನ ಕೆ.ಯು.ವರ್ಗೀಸ್‌ ಅವರ ಕುಟುಂಬ ಇಂದಿಗೂ ಕ್ಯಾಮೆರಾ ರಿಪೇರಿಯನ್ನೇ ತಮ್ಮ ಜೀವನೋಪಾಯಕ್ಕೆ ನೆಚ್ಚಿಕೊಂಡಿದೆ. ವರ್ಗೀಸ್ ಅವರ ಪತ್ನಿ ಬೀನಾ ಅವರು ಮೈಸೂರು ಭಾಗದಲ್ಲಿ ಕ್ಯಾಮೆರಾ ರಿಪೇರಿ ಮಾಡುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ತಮ್ಮ ಬದುಕಿಗೆ ಅನ್ನ ನೀಡಿದ ಕ್ಯಾಮೆರಾಗಳ ಹೆಸರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಒಬ್ಬ ಪುತ್ರನಿಗೆ ಐಸೆಟ್‌ ನಿಕಾನ್ ಎಂದು ಮತ್ತೊಬ್ಬ ಪುತ್ರನಿಗೆ ಪಾಲ್‌ ಕೆನಾನ್ ಎಂದು ಹೆಸರಿಡುವ ಮೂಲಕ ಇವರು ವಿಶಿಷ್ಟತೆಯನ್ನು ಮೆರೆದಿದ್ದಾರೆ.

ಕೊಡಗಿನ ಪಾಲಿಬೆಟ್ಟದ ನಿವಾಸಿ ಯಾದ ವರ್ಗೀಸ್ ಅವರು ಕೇರಳದ ತ್ರಿಶೂರ್ ಜಿಲ್ಲೆಯ ಕುಂನ್ನಂಕುಳಂ ಗ್ರಾಮದ ಬೀನಾ ಎಂಬುವರನ್ನು ವಿವಾಹವಾದ ಬಳಿಕ ಇಲ್ಲಿನ ಕುಂಬಾರ ಕೊಪ್ಪಲಿನಲ್ಲಿ ನೆಲೆ ನಿಂತರು. ಆರಂಭದಲ್ಲಿ ಇವರು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಛಾಯಾ ಚಿತ್ರಗಾರರಾಗಿ ವೃತ್ತಿ ಆರಂಭಿಸಿದರು. ನಂತರ, ಕ್ಯಾಮೆರಾ ರಿಪೇರಿ ಮಾಡಲು ಆರಂಭಿಸಿದರು.

‘ಅಂದು ಏಳೆಂಟು ಮಂದಿ ಕ್ಯಾಮೆರಾ ರಿಪೇರಿ ಮಾಡುತ್ತಿದ್ದೆವು. ಈಗ ಸದ್ಯ, ಮೈಸೂರು ನಗರದಲ್ಲಿ ಮೂವರಷ್ಟೇ ಇದ್ದೇವೆ. ಅದರಲ್ಲಿ ಒಬ್ಬರು ನನ್ನ ಪತ್ನಿ. ಇದುವರೆಗೂ ನಾನು 24 ಸಾವಿರ ಕ್ಯಾಮೆರಾಗಳನ್ನು ರಿಪೇರಿ ಮಾಡಿರುವೆ’ ಎಂದು ವರ್ಗೀಸ್ ಹೇಳುತ್ತಾರೆ.

ಈಗಲೂ ವರ್ಷಕ್ಕೆ ಕನಿಷ್ಠ ಎರಡು– ಮೂರು ಫಿಲ್ಮಂ ಕ್ಯಾಮೆರಾಗಳು ರಿಪೇರಿಗೆ ಬರುತ್ತವೆ. ‘ಕಾವಾ’ದಲ್ಲಿ ಫೋಟೋಗ್ರಫಿಯ ಬೇಸಿಕ್‌ ಕಲಿಸಲು ಇದನ್ನೇ ಬಳಕೆ ಮಾಡುತ್ತಾರೆ. ಉಳಿದಂತೆ, ಬಹುತೇಕ ಮಂದಿ ಡಿಜಿಟಲ್ ಕ್ಯಾಮೆರಾಗಳ ಮೇಲೆಯೇ ಅವಲಂಬಿತರಾಗಿದ್ದಾರೆ ಎಂದು ಅವರು ವಿವರಿಸುತ್ತಾರೆ.

ದೇವರಾಜ ಅರಸು ರಸ್ತೆಯಲ್ಲಿ 25 ವರ್ಷದ ಹಿಂದೆ ಇವರು ಅಂಗಡಿ ತೆರೆದರು. ಲಾಕ್‌ಡೌನ್‌ ನಂತರ ಶಾಂತಲಾ ಚಿತ್ರಮಂದಿರದ ಹಿಂಭಾಗದ ವೀಣೆ ಶೇಷಣ್ಣ ರಸ್ತೆಯ 7ನೇ ಕ್ರಾಸ್‌ನಲ್ಲಿ ಮನೆಯಲ್ಲೇ ರಿಪೇರಿ ಮಾಡುತ್ತಿದ್ದಾರೆ.

ಅವರೇ ಹೇಳುವಂತೆ ಚಾಮರಾಜ ನಗರ, ಮಂಡ್ಯ, ಕೊಡಗಿನಲ್ಲಿ ಕ್ಯಾಮೆರಾ ರಿಪೇರಿ ಮಾಡುವವರೇ ಇಲ್ಲ. ಸಿದ್ಧಾರ್ಥ ನಗರದಲ್ಲಿ ಒಬ್ಬರು ಮಾತ್ರ ರಿಪೇರಿ ಮಾಡುತ್ತಾರೆ. ಇನ್ನುಳಿದಂತೆ ಕ್ಯಾಮೆರಾ ರಿಪೇರಿ ಮಾಡುವವರ ಸಂಖ್ಯೆ ತೀರಾ ಕಡಿಮೆ.

‘ಈಗ ಕೆಲಸ ಸುಲಭವಾಗಿದೆ. ಆದರೆ, ಹಿಂದಿನ ಕ್ಯಾಮೆರಾಗಳಲ್ಲಿ ಇದ್ದಂತಹ ಕುತೂಹಲ ಈಗ ಇಲ್ಲ. ಆಗ ರಿಪೀಟ್ ಆಗದ ರೀತಿ ಚಿತ್ರ ತೆಗೆಯುತ್ತಿದ್ದರು. ಈಗ ಎಷ್ಟು ಕ್ಲಿಕ್ ಮಾಡಿದರೂ ತೃಪ್ತಿಯಾಗುತ್ತಿಲ್ಲ’ ಎಂದು ಅವರು ಕ್ಯಾಮೆರಾ ಜಗತ್ತಿನಲ್ಲಿ ಆಗಿರುವ ಬದಲಾವಣೆ ಕುರಿತು ಪ್ರತಿಕ್ರಿಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT