ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: 40 ಯುವಕರಿಗೆ ಆಸರೆಯಾದ ನಿವೃತ್ತ ಯೋಧ

Published 9 ಫೆಬ್ರುವರಿ 2024, 6:37 IST
Last Updated 9 ಫೆಬ್ರುವರಿ 2024, 6:37 IST
ಅಕ್ಷರ ಗಾತ್ರ

ಹುಣಸೂರು: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ ಸ್ವಗ್ರಾಮಕ್ಕೆ ಮರಳಿದ, ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದ ಮೋಹನ್ ಕುಮಾರ್ ಅವರು ‘ಕೊಕೊಪೀಟ್‌ ಗೊಬ್ಬರ ತಯಾರಿಕಾ ಘಟಕ’ವನ್ನು ಸ್ಥಾಪಿಸಿ 40 ಮಂದಿಗೆ ಉದ್ಯೋಗ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತೀಯ ಸೇನೆಯಲ್ಲಿ 17 ವರ್ಷ ಕೆಲಸ ಮಾಡಿದ ಮೋಹನ್ ಕುಮಾರ್ 2008ರಲ್ಲಿ ಸಹೋದರ ಲಿಂಗರಾಜ್‌ ಅವರೊಂದಿಗೆ ಸೇರಿ ‘ಕೊಕೊಪೀಟ್‌ ಗೊಬ್ಬರ ತಯಾರಿಕಾ ಘಟಕ’ವನ್ನು ಸ್ಥಾಪಿಸಿದ್ದರು. ಆರಂಭದಲ್ಲಿ 50ರಿಂದ 60 ಟನ್‌ ಗೊಬ್ಬರ ಉತ್ಪಾದಿಸಿ ಸ್ಥಳೀಯ ರೈತರಿಗೆ ವಿತರಿಸುತ್ತಿದ್ದರು. ಆಗ, ಜಿಕೆವಿಕೆಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಇಂದ್ರೇಶ್ ಅವರ ಮಾರ್ಗದರ್ಶನದಲ್ಲಿ, ಬೇಸಾಯಕ್ಕೆ ಬೇಕಾಗುವ ಪೂರಕ ಪೌಷ್ಠಿಕಾಂಶ ಮಿಶ್ರಿತ ಹಾಗೂ ವೈಜ್ಞಾನಿಕವಾಗಿ ಸಿದ್ಧಪಡಿಸಿ ಕೊಕೊಪೀಟ್ ಗೊಬ್ಬರವನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಲು ಮುಂದಾದರು. ಈಗ ತಿಂಗಳಿಗೆ 200 ಟನ್‌ ಗೊಬ್ಬರ ಉತ್ಪಾದಿಸುತ್ತಿದ್ದು, ವಾರ್ಷಿಕ ₹3 ಕೋಟಿ ವಹಿವಾಟು ನಡೆಸಲಾಗುತ್ತಿದೆ.

ಗ್ರಾಮದ ಯುವಕರಿಗೆ ಉದ್ಯೋಗ ಸಿಕ್ಕಿದ್ದು, ತಿಂಗಳಿಗೆ ₹20 ಸಾವಿರದಿಂದ ₹30 ಸಾವಿರ ಸಂಬಳ ಪಡೆಯುತ್ತಿದ್ದಾರೆ.

‘ಕೊಕೊಪೀಟ್ ಗೊಬ್ಬರ ನರ್ಸರಿಗಳಿಗೆ ಹೆಚ್ಚಾಗಿ ಬಳಸುವುದರಿಂದ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಪೂರೈಕೆ ಮಾಡುತ್ತೇವೆ. ರಾಜ್ಯದಲ್ಲಿ ತಂಬಾಕು ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡು ತಂಬಾಕು ರೈತರಿಗೆ ಗೊಬ್ಬರ ವಿತರಿಸಲಾಗುತ್ತಿದೆ’ ಎಂದು ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮದಲ್ಲಿ ಕೃಷಿ ಚಟುವಟಿಕೆ ಕಷ್ಟಸಾಧ್ಯ. ಯುವಕರು ನಗರಗಳಿಗೆ ಗುಳೇ ಹೋಗುವ ಪರಿಸ್ಥಿತಿ ಇತ್ತು. ಗ್ರಾಮದಲ್ಲಿ ಗೊಬ್ಬರ ಘಟಕ ಸ್ಥಾಪಿಸಿ ಉದ್ಯೋಗ ನೀಡಿದ್ದರಿಂದ ನಮ್ಮ ಕುಟುಂಬಗಳು ನೆಮ್ಮದಿಯಿಂದ ಬದುಕುವಂತಾಗಿದೆ’ ಎಂದು ಗ್ರಾಮದ ನಿವಾಸಿ, ಘಟಕದ ಸಿಬ್ಬಂದಿ ಮಲ್ಲೇಶ್ ತಿಳಿಸಿದರು.

ಮೋಹನ್ ಕುಮಾರ್
ಮೋಹನ್ ಕುಮಾರ್

‘ತೋಟಗಾರಿಕೆ ಬೆಳೆಗೆ ಕೊಕೊಪೀಟ್ ಉತ್ತಮ’

‘ಕೊಕೊಪೀಟ್‌ಗೆ ರಾಸಾಯನಿಕ ವಸ್ತು ಬಳಸದೆ 5ರಿಂದ 6 ತಿಂಗಳು ಕೊಕೊ ನಾರನ್ನು ಕೊಳೆಸಿದ ಬಳಿಕ ಅದರ ಪೌಷ್ಠಿಕತೆ ಹೆಚ್ಚಿಸುವ ಉದ್ದೇಶದಿಂದ ಬ್ಯಾಕ್ಟೀರಿಯಾ ರಾಕ್ ಫಾಸ್ಪರಸ್ ಬಳಸುವುದರಿಂದ ಸೂಕ್ಷ್ಮಾಣು ಜೀವಿಗಳು ಬೆಳೆಯಲಿದ್ದು ಕಾರ್ಬನ್ ನೈಟ್ರೋಜನ್ ಪ್ರಮಾಣ ಹೆಚ್ಚಾಗಲಿದೆ. ಮೈಕ್ರೋ ನ್ಯೂಟ್ರಿಯಂಟ್ ನೈಟ್ರೋಜನ್ ಪೊಟ್ಯಾಸಿಯಂ ಕ್ಯಾಲ್ಸಿಯಂ ಮಿಶ್ರಣ ಮಾಡಿ ಸಿದ್ಧಪಡಿಸಿದ ಗೊಬ್ಬರ ರೈತರಿಗೆ ಕೈಗೆಟಕುವ ದರದಲ್ಲಿ ಸಿಗಲಿದೆ’ ಎಂದು ಡಾ.ಇಂದ್ರೇಶ್ ತಿಳಿಸಿದರು. ‘ತೋಟಗಾರಿಕೆ ಬೆಳೆಗೆ ಕೊಕೊಪೀಟ್ ಗೊಬ್ಬರ ಪೂರಕವಾಗಿದ್ದು ಇದರ ಗುಣಮಟ್ಟ ಕಾಯ್ದುಕೊಳ್ಳುವುದರಿಂದ ಭವಿಷ್ಯದಲ್ಲಿ ತೋಟಗಾರಿಕೆ ಬೇಸಾಯದಲ್ಲಿ ಭಾರಿ ಬದಲಾವಣೆ ಉಂಟಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT