ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಕಲಿಯಿರಿ: ಹಿಂದಿ ಭಾಷಿಕರಿಗೆ ಭೈರಪ್ಪ ಸಲಹೆ

‘ಯಾವುದೇ ಭಾಷೆಯನ್ನು ಹೇರಲಾಗದು’
Published 11 ಆಗಸ್ಟ್ 2024, 16:14 IST
Last Updated 11 ಆಗಸ್ಟ್ 2024, 16:14 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕದಲ್ಲಿ ಹಿಂದಿ ಭಾಷಿಕರ ಬಗ್ಗೆ ತಿರಸ್ಕಾರ ಮನೋಭಾವ ಇದೆ. ಅದು ಹೋಗಬೇಕಾದರೆ ಕನ್ನಡ ಕಲಿಯಿರಿ’ ಎಂದು ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಸಲಹೆ ನೀಡಿದರು.

ನಗರದ ಕೇಂದ್ರೀಯ ಹಿಂದಿ ಸಂಸ್ಥಾನದ ಆವರಣದಲ್ಲಿ ಭಾನುವಾರ ಸಂಜೆ ನಡೆದ ಗೋಸ್ವಾಮಿ ತುಳಸಿದಾಸ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಹಿಂದಿಯೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ನೀಡಬೇಕು ಎಂಬ ಆಗ್ರಹವಿದೆ. ಆದರೆ, ಎಂಜಿನಿಯರ್‌, ಡಾಕ್ಟರ್‌ ಆಗಬೇಕು ಎಂದುಕೊಳ್ಳುವವರು ಮಾತೃ ಭಾಷೆಯಲ್ಲೇ ಓದಿದರೆ ಆಗುವುದಿಲ್ಲ. ಏಕೆಂದರೆ ನಮ್ಮ ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನದ ಪಠ್ಯ ಲಭ್ಯವಿಲ್ಲ. ಸ್ಥಳೀಯ ಭಾಷೆಯಲ್ಲೇ ಜ್ಞಾನ ಸೃಷ್ಟಿಯಾದಾಗ ಮಾತ್ರ ಆ ಭಾಷೆ ಬೆಳೆಯಲು ಸಾಧ್ಯ’ ಎಂದು ಹೇಳಿದರು.

ಈಚೆಗೆ ಪುಸ್ತಕಗಳ ಮುದ್ರಣಕ್ಕೆ ಕಾಗದವೇ ಸಿಗುತ್ತಿಲ್ಲ. ಕೆಲವು ರಾಜಸ್ಥಾನ ಮಾರ್ವಾಡಿಗಳು ಕಾಗದಗಳನ್ನು ಶೇಖರಿಸಿಟ್ಟು ನಂತರ ಕಾಳಸಂತೆಯಲ್ಲಿ ಬೆಲೆ ಏರಿಸಿ ಮಾರುತ್ತಿದ್ದಾರೆ.
ಎಸ್.ಎಲ್. ಭೈರಪ್ಪ, ಕಾದಂಬರಿಕಾರ

‘ಹಿಂದಿಯನ್ನು ಒಂದು ಭಾಷೆಯಾಗಿ ಕಲಿಸಿದರೆ ಅದು ಬೆಳೆಯುತ್ತದೆ. ಕನ್ನಡಕ್ಕೆ ಅನ್ವಯಿಸುವ ನಿಯಮ ಹಿಂದಿಗೂ ಅನ್ವಯಿಸುತ್ತದೆ. ಯಾವುದೇ ಭಾಷೆಯನ್ನು ನಾವು ಹೇರಲು ಆಗದು’ ಎಂದರು.

ಹಿಂದಿ ಪ್ರಕಾಶಕರಿಂದ ವಂಚನೆ: ‘ಹಿಂದಿಯಲ್ಲಿನ ಕೆಲವು ಪ್ರಕಾಶಕರು ಲೇಖಕರಿಗೆ ಸೂಕ್ತ ಸಂಭಾವನೆ ನೀಡದೆ ವಂಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನನ್ನ ಕೆಲವು ಕೃತಿಗಳು ಕನ್ನಡದಲ್ಲಿ 40 ಮುದ್ರಣ ಕಂಡಿವೆ. ಕೃತಿಯು ಪ್ರತಿ ಬಾರಿ ಮುದ್ರಣಗೊಂಡಾಗಲೂ ಪ್ರಕಾಶಕರು ಇಂತಿಷ್ಟು ಸಂಭಾವನೆ ಕೊಡುತ್ತಿದ್ದಾರೆ. ಪುಸ್ತಕ ಮಾರಾಟಕ್ಕಾಗಿ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನೂ ಕಟ್ಟುತ್ತಿದ್ದಾರೆ. ಆದರೆ, ಹಿಂದಿಗೆ ಅನುವಾದವಾಗಿ ಪ್ರಕಟಗೊಂಡ ಕೃತಿಯೊಂದಕ್ಕೆ ಹಿಂದಿಯ ಪ್ರಕಾಶಕರು ಆರಂಭದಲ್ಲಿ ₹25 ಸಾವಿರ ಸಂಭಾವನೆ ಕೊಟ್ಟಿದ್ದು ಬಿಟ್ಟರೆ ಮತ್ತೆ ಕೊಡಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಕೃತಿಗಳು ಮಾರಾಟ ಆಗಿದ್ದರೂ ಅದನ್ನು ಮರೆಮಾಚಿದ್ದಾರೆ. ಕೇಳಿದರೆ ಪುಸ್ತಕ ಮಾರಾಟವೇ ಆಗಿಲ್ಲ ಎಂದು ಸಬೂಬು ಹೇಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT