ಮೈಸೂರು: ‘ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ಲೋಪವನ್ನು ಮರೆಮಾಚಲು ಜಾತಿ ಗಣತಿ ಮರು ಸಮೀಕ್ಷೆಗೆ ಸರ್ಕಾರ ಮುಂದಾಗಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ರಾಜ್ಯದ ಜಾತಿಗಣತಿಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಅವರೇನು ರಾಜ್ಯದ ಆಡಳಿತ ನಡೆಸುತ್ತಿರುವರೇ? ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಈ ನಿರ್ಧಾನ ತೆಗೆದುಕೊಳ್ಳಲಾಗಿದೆ. ಹಿಂದುಳಿದವರ ಅಭಿವೃದ್ಧಿಯನ್ನು ಬಲಿಕೊಡಲಾಗಿದೆ, ರಾಜ್ಯದ ಪ್ರಗತಿ ಬಗ್ಗೆಯೂ ಇವರಿಗೆ ಕಾಳಜಿಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ ಕೇಂದ್ರ ಸರ್ಕಾರವು ಜನಗಣತಿ ಹಾಗೂ ಜಾತಿ ಗಣತಿಯನ್ನು ಒಟ್ಟಿಗೆ ಮಾಡಲು ಮುಂದಾಗಿರುವಾಗ ರಾಜ್ಯ ಸರ್ಕಾರ ಮತ್ತೆ ಗಣತಿ ಮಾಡುವ ಔಚಿತ್ಯವೇನು. ₹165.5 ಕೋಟಿ ದುಂದುವೆಚ್ಚ ಮಾಡಿ ಅವೈಜ್ಞಾನಿಕ ಸಮೀಕ್ಷೆ ನಡೆಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಅದರ ಹೊಣೆ ಯಾರು ಹೊರುತ್ತಾರೆ. ಇವರಿಗೆ ಸಮೀಕ್ಷೆ ನಡೆಸುವ ನೈತಿಕತೆ, ಯೋಗ್ಯತೆಯೇ ಇಲ್ಲ’ ಎಂದು ಹರಿಹಾಯ್ದರು.

‘ಗಣತಿಗೆ ಮತ್ತೆ ಎಲ್ಲಿಂದ ಹಣ ಹೊಂದಿಸುತ್ತಾರೆ. ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ನೀರಿನ ಯೋಜನೆ ಆಗಿಲ್ಲ, ಬೆಳಗೊಳ–ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತಗೊಂಡಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ನೀರಾವರಿ ನಾಲೆ ಮತ್ತು ಹೈ–ಟೆನ್ಶನ್ ವಿದ್ಯುತ್ ತಂತಿ ಸ್ಥಳಾಂತರಕ್ಕೆ ₹120 ಕೋಟಿ ಬೇಕಾಗಿದೆ’ ಎಂದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಆರ್.ಕೌಟಿಲ್ಯ ಮಾತನಾಡಿ, ‘ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ಐವರು ಪೊಲೀಸ್ ಅಧಿಕಾರಿಗಳು ಹಾಗೂ ಕ್ರಿಕೆಟ್ ಸಂಸ್ಥೆ ಮೇಲೆ ಹೊಣೆ ಹೊರಿಸಿ ನುಣಿಚಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕುರ್ಚಿಗಳು ಅಲುಗಾಡುತ್ತಿದ್ದು, ಅದನ್ನು ಕಾಂತರಾಜ ಆಯೋಗದ ವರದಿಯನ್ನು ಬಲಿ ಕೊಡುವ ಮೂಲಕ ರಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಸಾಂವಿಧಾನಿಕ ಹಕ್ಕು ಇದೆಯೇ? ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆಯನ್ನೇ ಉತ್ತಮವಾಗಿ ನಡೆಸುತ್ತಿಲ್ಲ. ಈಗಾಗಲೇ ಶಾಲೆ ಆರಂಭವಾಗಿದ್ದು, ಶಿಕ್ಷಕರು ಪಾಠ ಪ್ರವಚನದಲ್ಲಿ ತೊಡಗಿದ್ದಾರೆ. 90 ದಿನಗಳಲ್ಲಿ ಜಾತಿ ಸಮೀಕ್ಷೆ ಸಾಧ್ಯವೇ ? ಅಹಿಂದ ನಾಯಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರು ಅಹಿಂದ ಜನರಿಗೆ ಮೋಸಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾವೇರಿ ಆರತಿ: ರೈತರ ಸಲಹೆ ಪರಿಗಣಿಸಿ’

‘ಕಾವೇರಿ ಆರತಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ವಿಚಾರದಲ್ಲಿ ಸರ್ಕಾರವು ರೈತರ ದೂರು ಸಲಹೆಯನ್ನು ಪರಿಗಣಿಸಬೇಕು’ ಎಂದು ಸಂಸದ ಯದುವೀರ್ ಒತ್ತಾಯಿಸಿದರು. ‘ಕೆಆರ್ಎಸ್ ಅಣೆಕಟ್ಟೆ ಮತ್ತು ಬೃಂದಾವನಕ್ಕೆ ಈಗಾಗಲೇ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಇರುವ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಹೋದರೆ ಸಾಕು. ಅನಗತ್ಯ ಯೋಜನೆಯನ್ನು ನಾನು ಯಾವಾಗಲೂ ವಿರೋಧಿಸುತ್ತಾ ಬಂದಿದ್ದೇನೆ ಕಾವೇರಿ ಆರತಿಗೆ ಬಳಸುವ ಹಣವನ್ನು ಕಾಲುವೆಗಳ ಹೂಳು ಕೆರೆ ಹಾಗೂ ರೈತರ ಜಮೀನಿಗೆ ನೀರು ಹರಿಸಲು ಬಳಸಿ’ ಎಂದರು.

‘ರಾಜ್ಯಕ್ಕೆ ಕೇಂದ್ರದಿಂದ ಬರುವ ಅನುದಾನವು ಶೇ 250 ಪಟ್ಟು ಹೆಚ್ಚಾಗಿದ್ದು ಸಂಸದರು ಅನುದಾನಕ್ಕಾಗಿ ಪ್ರಶ್ನಿಸುತ್ತಿಲ್ಲ ಅನುದಾನ ದೊರೆಯುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.