ಶುಕ್ರವಾರ, ಡಿಸೆಂಬರ್ 9, 2022
21 °C

ಸಿಸಿಬಿ ಪೊಲೀಸರ ಕಾರ್ಯಾಚರಣೆ: 10 ಕುಖ್ಯಾತ ಕಳ್ಳರ ಬಂಧನ , 1 ಕೆ.ಜಿ ಆಭರಣ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಿಸಿಬಿ ಪೊಲೀಸರು 10 ಮಂದಿ ಕುಖ್ಯಾತ ಕಳ್ಳರನ್ನು ಬಂಧಿಸಿ, 25 ಚಿನ್ನದ ಸರಗಳು ಸೇರಿದಂತೆ ₹ 50 ಲಕ್ಷ ಮೌಲ್ಯದ ಒಂದು ಕೆ.ಜಿ. ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರ, ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ವರದಿಯಾದ ಒಟ್ಟು 25 ಸರಗಳವು, ಒಂದು ಮನೆಯಲ್ಲಿ ಕಳವು ಹಾಗೂ 2 ದ್ವಿಚಕ್ರವಾಹನಗಳ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕಳವಾಗಿದ್ದ 2 ಹಾಗೂ ಕೃತ್ಯಕ್ಕೆ ಬಳಸಿದ್ದ 7 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವೆಲ್ಲವೂ 3ರಿಂದ 4 ತಿಂಗಳುಗಳ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಗಳಾಗಿವೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ‘ನಗರದಲ್ಲಿ ಸರಗಳವು ಪ್ರಕರಣಗಳು ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಬಂಧಿತರಲ್ಲಿ ಎರಡು ಕುಖ್ಯಾತ ಸರಗಳ್ಳರ ತಂಡಗಳಿವೆ ಮತ್ತು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಇದ್ದಾರೆ’ ಎಂದು ತಿಳಿಸಿದರು.

ಎಲ್ಲಿಯ ಪ್ರಕರಣಗಳು?

‘ನಜರ್‌ಬಾದ್ ಠಾಣೆಯ 2, ಕುವೆಂಪುನಗರ–4, ವಿ.ವಿ. ಪುರಂ–2, ಸರಸ್ವತಿಪುರಂ–4, ನರಸಿಂಹರಾಜ, ಅಶೋಕಪುರಂ, ಕೃಷ್ಣರಾಜ, ಲಕ್ಷ್ಮೀಪುರಂ, ಕವಲಂದೆ –1, ಚಾಮರಾಜನಗರ ಜಿಲ್ಲೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ತಲಾ 1 ಪ್ರಕರಣಗಳು, ಆಲನಹಳ್ಳಿ ಠಾಣೆಯ–2, ವಿಜಯನಗರ ಠಾಣೆಯ–3, ಹೆಬ್ಬಾಳ ಠಾಣೆಯ–2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕವಲಂದೆ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆಯ ತಲಾ ಒಂದು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಹೆಚ್ಚುವರಿ ಬೀಟ್ ನಿಯೋಜನೆ, ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ, ಹಳೆಯ ಪ್ರಕರಣಗಳ ವಿಶ್ಲೇಷಣೆ ಮೂಲಕ ಪತ್ತೆ ಮಾಡಲಾಗಿದೆ’ ಎಂದು ವಿವರ ನೀಡಿದರು.

‘ಚಿನ್ನಾಭರಣಗಳನ್ನು ಮಾರಲು ಬಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನಿಂದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 70 ಗ್ರಾಂ. ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದರು.

‘ಬಂಧಿಸಲಾಗಿರುವ ಒಂದು ಗುಂಪಿನ ಇಬ್ಬರು ಆರೋಪಿಗಳಲ್ಲಿ ಒಬ್ಬ ಈ ಹಿಂದೆ 27 ಸರಗಳವು ಪ್ರಕರಣಗಳಲ್ಲಿ ಮತ್ತು ಇನ್ನೊಬ್ಬ 4 ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮಂಜ ಮತ್ತು ಚಂದನ್ ಎನ್ನುವ ಹೆಸರಿನ ಈ ಇಬ್ಬರೂ ವೃತ್ತಿನಿರತ ಸರಗಳ್ಳರಾಗಿದ್ದಾರೆ. ಕಾರಾಗೃಹವಾಸ ಅನುಭವಿಸಿ ಬಂದ ನಂತರವೂ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ಅವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಕ್ಕೂ ಪರಿಶೀಲಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ವಕೀಲ, ರಕ್ತ ಸಂಬಂಧಿಗಳು

‘ತಂಡವೊಂದರಲ್ಲಿ ವಕೀಲನೊಬ್ಬ ಕೂಡ ಇದ್ದಾನೆ. ಆತ, ಸರಗಳ್ಳರಿಗೆ ಜಾಮೀನು ಕೊಡಿಸುವುದು ಮೊದಲಾದವುಗಳನ್ನು ಮಾಡುತ್ತಿದ್ದ. ಆತನನ್ನೂ ಬಂಧಿಸಲಾಗಿದೆ. ಇನ್ನೊಂದು ಗುಂಪಿನ 6 ಆರೋಪಿಗಳು ಮೂಲತಃ ಚಾಮರಾಜನಗರ ಜಿಲ್ಲೆಯವರಾಗಿದ್ದಾರೆ. ರಕ್ತ ಸಂಬಂಧಿಗಳಾಗಿದ್ದಾರೆ. ಹಲವು ವರ್ಷಗಳಿಂದ ಮೈಸೂರು ನಗರದ ಹೆಬ್ಬಾಳ ಮತ್ತು ದೇವಯ್ಯನಹುಂಡಿಯಲ್ಲಿ ವಾಸವಾಗಿದ್ದು, ಗಾರೆ ಮತ್ತು ಸೆಕ್ಯುರಿಟಿ ಕೆಲಸ ಮಾಡಿಕೊಂಡು ನಗರದ ವ್ಯಾಪ್ತಿಯಲ್ಲಿ ಸರಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ವಿವರ ನೀಡಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಎಂ.ಎಸ್., ಸಿಸಿಬಿ ಘಟಕದ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ ಮಾರ್ಗದರ್ಶನದಲ್ಲಿ ಎಚ್‌ ಅಂಡ್ ಬಿ ವಿಭಾಗದ ಇನ್‌ಸ್ಪೆಕ್ಟರ್ ಬಿ.ಶೇಖರ್, ಎಎಸ್‌ಐಗಳಾದ ಅಸ್ಗರ್‌ ಖಾನ್, ಎಂ.ಆರ್.ಗಣೇಶ, ಸಿಬ್ಬಂದಿ ಉಮೇಶ ಯು., ಸಲೀಂ ಖಾನ್, ರಾಮಸ್ವಾಮಿ, ಯಾಕೂಬ್ ಷರೀಫ್, ಚಿಕ್ಕಣ್ಣ ಸಿ., ಉಮಾಮಹೇಶ ಎ., ಲಕ್ಷ್ಮಿಕಾಂತ ಪಿ.ಎನ್., ಆನಂದ, ಪ್ರಕಾಶ್, ಶಿವರಾಜು ಸಿ.ಎನ್., ಚಂದ್ರಶೇಖರ, ಗೋವಿಂದ, ಮಧುಸೂದನ ಸಿ.ಎಲ್., ಮೋಹನಾರಾಧ್ಯ, ಮಹೇಶ ಕೆ., ನರಸಿಂಹರಾಜು, ನಬೀ‍ಪಟೇಲ್, ಪವನ್, ಮಮತಾ ಜಿ.ಆರ್., ರಮ್ಯಾ ಎಂ.ಎಂ., ಶಿವಕುಮಾರ್‌ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು