ಹುಣಸೂರು: ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ ಶನಿವಾರ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಕೋಮು ಸೌಹಾರ್ದಕ್ಕೆ ಹೆಸರಾದ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಜಮಾಲ್ ಬೀಬೀ ದರ್ಗಾ ಉರುಸ್‌ಗೆ ಶಾಸಕ ಎಚ್.ಪಿ. ಮಂಜುನಾಥ್ ಬೆಳಿಗ್ಗೆ ಚಾಲನೆ ನೀಡುತ್ತಿದ್ದಂತೆ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡವು. ಹಿಂದೂ– ಮುಸ್ಲಿಮರು ಒಗ್ಗೂಡಿ ಹಬ್ಬವನ್ನು ಆಚರಿಸಿದರು.
ಜಾತ್ರೆಯ ಮೊದಲ ದಿನದಂದು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ– ಹವನ ನಡೆದವು. ಸ್ಥಳೀಯ ಶಾಸಕರು ದಾಸೋಹ ವಿತರಣೆಗೆ ಚಾಲನೆ ನೀಡಿದರು. ಬಳಿಕ ಜಾತ್ರೆಗೆ ಆಗಮಿಸಿದ ರಾಸುಗಳನ್ನು ವೀಕ್ಷಿಸಿದರು.
ಜಾತ್ರೆಯಲ್ಲಿ ಕೃಷಿ ಪರಿಕರಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಟಿಕೆ, ತಿಂಡಿ–ತಿನಿಸುಗಳ ಮಾರಾಟ ಜೋರಾಗಿತ್ತು.
ರಾತ್ರಿ 8ಕ್ಕೆ ಆಂಜನೇಯಸ್ವಾಮಿ ಉತ್ಸವಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮತ್ತು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮಸೀದಿ ಬಳಿಗೆ ಬಂದ ಆಂಜನೇಯ ಮೂರ್ತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು ಪಾಲ್ಗೊಂಡು ಗಮನ ಸೆಳೆದರು. ರಸ್ತೆಯ ಇಕ್ಕೆಲಗಳಲ್ಲಿ ಹಿಂದೂ–ಮುಸ್ಲಿಂ ಮಹಿಳೆಯರು, ಮಕ್ಕಳು ನಿಂತು ಉತ್ಸವವನ್ನು ಕಣ್ತುಂಬಿಕೊಂಡರು.
ಉತ್ಸವ ಸಾಗುವ ರಸ್ತೆಯಲ್ಲಿ ರಂಗೋಲಿ ಚಿತ್ತಾರ ಮೂಡಿಸಲಾಗಿತ್ತು. ಗ್ರಾಮದೆಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರ ಕುಣಿತ, ಚಂಡೆ, ಕೀಲು ಕುಣಿತ, ಹುಲಿ ವೇಷ ಕುಣಿತ ಗಮನ ಸೆಳೆಯಿತು. ಹಿಂದೂಪರ ಸಂಘಟನೆಗಳ ಯುವಕರು ಕೇಸರಿ ಶಾಲು ಹಾಕಿ ಕುಣಿದು ಕುಪ್ಪಳಿಸಿದರು.
ಉತ್ಸವ ಸಾಗುವ ಮಾರ್ಗದಲ್ಲಿ ಮುಸ್ಲಿಂ ಯುವಕರು ವಿಶೇಷ ಸಿಹಿ ಖಾದ್ಯಗಳ ಮಾರಾಟದಲ್ಲಿ ತೊಡಗಿದ್ದರು. ದರ್ಗಾ ಸುತ್ತಲು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿತ್ತು. ಪೋಲಿಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಫೆ. 26 ರಂದು ರಾತ್ರಿ ಜಮಾಲ್ ಬೀಬೀ ದರ್ಗಾದಲ್ಲಿ ನಡೆಯಲಿರುವ ಉರುಸ್‌ನಲ್ಲಿ ಹಿಂದೂ ಮುಖಂಡರು ಭಾಗವಹಿಸುವರು.
‘ದರ್ಗಾಕ್ಕೆ ರತ್ನಪುರಿ ಸುತ್ತಲಿನ ಪ್ರದೇಶದ ಭಕ್ತರು ಪೂಜೆ ಸಲ್ಲಿಸಿ, ಎಣ್ಣೆ ದೀಪ ಹಚ್ಚಿ ಹರಕೆ ಅರ್ಪಿಸಲಿದ್ದಾರೆ’ ಎಂದು ಮುಖಂಡ ಅಜ್ಗರ್ ಪಾಶಾ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.