ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಏಪ್ರಿಲ್‌ನಲ್ಲಿ ಕೇವಲ 8 ಮಿ.ಮೀ. ಮಳೆ!

Published 2 ಮೇ 2024, 5:20 IST
Last Updated 2 ಮೇ 2024, 5:20 IST
ಅಕ್ಷರ ಗಾತ್ರ

ಮೈಸೂರು: ಕಳೆದ ಮುಂಗಾರು ವಿಫಲವಾದರೂ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಮಳೆಯಾದರೂ ಜನರ ಕೈ ಹಿಡಿಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಏಪ್ರಿಲ್‌ನಲ್ಲಿ ಕೇವಲ ಸರಾಸರಿ 8 ಮಿಲಿಮೀಟರ್‌ನಷ್ಟು ವರ್ಷಧಾರೆಯಾಗಿದೆ!

ಏಪ್ರಿಲ್‌ನ ಕೊನೆಯ ವಾರಗಳಲ್ಲಿ ಮಳೆಯಾಗುವುದು ವಾಡಿಕೆ. ಬಿಸಿಲಿನಿಂದ ಕಂಗೆಟ್ಟ ಜನರಿಗೆ ಪ್ರತಿ ವರ್ಷ ಯುಗಾದಿಯ ತರುವಾಯ ಒಂದೆರಡು ದಿನವಾದರೂ ಮಳೆಯಾಗಿ ತಂಪನ್ನೆರೆಯುತ್ತ ಬಂದಿದೆ. ಆದರೆ ಈ ವರ್ಷ ಅಂತಹದ್ದೊಂದು ಮಳೆಯನ್ನೇ ಜಿಲ್ಲೆ ಕಂಡಿಲ್ಲ. ಏಪ್ರಿಲ್‌ 1ರಿಂದ 30ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 66 ಮಿಲಿಮೀಟರ್‌ ಇದ್ದು ಪ್ರತಿಯಾಗಿ ಕೇವಲ 8 ಮಿ.ಮೀ. ವರ್ಷಧಾರೆಯಾಗಿದ್ದು, ಶೇ 85ರಷ್ಟು ಮಳೆಯ ಕೊರತೆ ಆಗಿದೆ. ಕಳೆದ ಒಂದು ವಾರದಿಂದ ಮಳೆಯ ನಿರೀಕ್ಷೆ ಇದ್ದರೂ ಒಂದು ಹನಿಯೂ ಧರೆಗೆ ಉದುರಿಲ್ಲ.

ಮಾರ್ಚ್‌ 1ರಿಂದ ಏಪ್ರಿಲ್‌ 30ರವರೆಗೆ ಜಿಲ್ಲೆಯಲ್ಲಿ ಸುಮಾರು 85 ಮಿ.ಮೀ.ನಷ್ಟು ಮಳೆ ಸುರಿಯಬೇಕಿತ್ತು. ಆದರೆ ಅದಕ್ಕೆ ಪ್ರತಿಯಾಗಿ 10 ಮಿ.ಮೀ.ನಷ್ಟು ಮಾತ್ರವೇ ಮಳೆಯಾಗಿದ್ದು, ಶೇ 88ರಷ್ಟು ಮಳೆಯ ಕೊರತೆಯಾಗಿದೆ.

ಬೆಳೆಯೂ ಹಾಳು:
ಕಳೆದ ಮುಂಗಾರಿನಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಆಗಿದ್ದವು. ಹೀಗಾಗಿ ಮುಂಗಾರು ಕೃಷಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿರಲಿಲ್ಲ. ಈ ವರ್ಷ ಮುಂಗಾರು ಪೂರ್ವದಲ್ಲಿ ಒಂದು ಕಾಳು ಬೆಳೆಯುವ ರೈತರ ಆಸೆಗೂ ಮಳೆ ಕಲ್ಲು ಹಾಕಿದೆ. ಹೀಗಾಗಿ ಈ ವರ್ಷದ ಆರಂಭದಲ್ಲೇ ಕೃಷಿ ಕಾರ್ಯಕ್ಕೆ ಹಿನ್ನಡೆ ಆಗಿದೆ.

ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಸುಮಾರು 42 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶ ಬಿತ್ತನೆ ಗುರಿ ಇದೆ. ಏಪ್ರಿಲ್‌– ಮೇ ಅವಧಿಯಲ್ಲಿ ಸಾಮಾನ್ಯವಾಗಿ ಅಲಸಂದೆ, ಹುರುಳಿ, ಉದ್ದು, ಹೆಸರು, ತೊಗರಿ ಮೊದಲಾದ ಧಾನ್ಯಗಳ ಜೊತೆಗೆ ಹತ್ತಿ, ಸೂರ್ಯಕಾಂತಿ, ಮುಸುಕಿನ ಜೋಳ ಬಿತ್ತನೆ ನಡೆಯುತ್ತದೆ. ಆದರೆ ಈ ವರ್ಷ ಮಳೆಯೇ ಇಲ್ಲದ ಕಾರಣ ರೈತರು ಹೊಲ ಉಳುಮೆ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಅಲ್ಪ ಪ್ರಮಾಣದಲ್ಲಿ ಅಲ್ಲಲ್ಲಿ ಹುರುಳಿ ಬಿತ್ತಿದ್ದು, ಅದೂ ಸಹ ಒಣಗುತ್ತಿದೆ.

ನೀರು– ಮೇವಿನ ಕೊರತೆ:
ಮಳೆಯ ಕೊರತೆಯ ಕಾರಣಕ್ಕೆ ಸಹಜವಾಗಿಯೇ ಕೆರೆಕಟ್ಟೆಗಳು ಬರಿದಾಗಿ ನಿಂತಿವೆ. ಬಹುತೇಕ ಕೆರೆಗಳಲ್ಲಿ ರಾಡಿಯಷ್ಟೇ ಉಳಿದುಕೊಂಡಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಸಹ ಸಿಗದಂತಹ ಪರಿಸ್ಥಿತಿ ಇದೆ. ಇನ್ನು ಒಂದೆರಡು ವಾರ ಮಳೆಯಾಗದೇ ಹೋದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಹೆಚ್ಚಿದೆ.

ಜಾನುವಾರುಗಳಿಗೆ ಸದ್ಯ ಅಗತ್ಯದಷ್ಟು ಪ್ರಮಾಣದಲ್ಲಿ ಮೇವು ಲಭ್ಯ ಇರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ನೀರಿನ ವ್ಯವಸ್ಥೆ ಇರುವ ಕಡೆಗಳಲ್ಲಿ ರೈತರಿಗೆ ಬೀಜದ ಕಿಟ್‌ಗಳನ್ನು ವಿತರಿಸಿ ಹಸಿರು ಮೇವು ಬೆಳೆಸುವ ಪ್ರಯತ್ನ ನಡೆದಿದೆ. ಆದರೆ ಹೊಲಗಳಲ್ಲಿ ಸಹಜವಾಗಿ ದೊರೆಯುವ ಮೇವು ಇಲ್ಲ. ಒಣಮೇವಿನ ದಾಸ್ತಾನು ಸಹ ಬರಿದಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಾನುವಾರುಗಳ ಗತಿ ಏನು ಎಂಬ ಆತಂಕ ರೈತರದ್ದು.

ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆ ನೀರಿಲ್ಲದೇ ಬರಿದಾಗುತ್ತಿರುವುದು

ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆ ನೀರಿಲ್ಲದೇ ಬರಿದಾಗುತ್ತಿರುವುದು

–ಪ್ರಜಾವಾಣಿ ಚಿತ್ರಗಳು: ಸಿ. ಮೋಹನ್‌ಕುಮಾರ್‌

ಕೊಳವೆ ಬಾವಿ ಆಧರಿಸಿ ಮೇವಿನ ಬೆಳೆ ಬೆಳೆದಿದ್ದೆವು. ಅಂತರ್ಜಲ ಬತ್ತುತ್ತಿರುವ ಕಾರಣ ಬೋರ್‌ವೆಲ್‌ಗಳಲ್ಲೂ ನೀರಿಲ್ಲದಂತ ಪರಿಸ್ಥಿತಿ ಇದೆ. ಜಾನುವಾರುಗಳಿಗೆ ನೀರು–ಮೇವು ಒದಗಿಸುವುದೇ ಕಷ್ಟವಾಗಿದೆ
- ರಮೇಶ್‌ ವರುಣಾ ನಿವಾಸಿ ಮೈಸೂರು ತಾಲ್ಲೂಕು
ಸದಾ ನೀರಿನಿಂದ ತುಂಬಿರುತ್ತಿದ್ದ ಬಿಳಿಕೆರೆ ಕೆರೆಯೇ ಈ ಬಾರಿ ಬತ್ತಿ ಹೋಗುತ್ತಿದೆ. ಇರುವ ನೀರು ದನಗಳಿಗೆ ಕುಡಿಸಲು ಯೋಗ್ಯವಲ್ಲದಂಥ ಪರಿಸ್ಥಿತಿ ಇದೆ. ಜಿಲ್ಲಾಡಳಿತ ಜಾನುವಾರುಗಳಿಗೆ ನೀರು–ಮೇವಿನ ವ್ಯವಸ್ಥೆ ಮಾಡಬೇಕು
- ಶಂಕರ್‌ ಬಿಳಿಕೆರೆ ನಿವಾಸಿ ಹುಣಸೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT