ಮೈಸೂರು ರೇಷ್ಮೆ ಸೀರೆಯುಟ್ಟು...
ಸೆ. 25ರಂದು ಮೈಸೂರು ಪರಂಪರೆ ಬಿಂಬಿಸುವ ಉದ್ದೇಶದಿಂದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ದೇವಸ್ಥಾನ ಆವರಣದಿಂದ ಜೆ.ಕೆ. ಮೈದಾನದವರೆಗೆ ‘ವಾಕಥಾನ್’ (ಮೆರವಣಿಗೆ) ಹಮ್ಮಿಕೊಳ್ಳಲಾಗಿದೆ. 1,500ಕ್ಕೂ ಹೆಚ್ಚು ಮಹಿಳೆಯರು ಮೈಸೂರು ರೇಷ್ಮೆ ಸೀರೆಯುಟ್ಟು, ಮೈಸೂರು ಮಲ್ಲಿಗೆ ಹೂವು ಮುಡಿದು ಮೆರವಣಿಗೆಯಲ್ಲಿ ‘ಮೈಸೂರು ವಿಶೇಷದ ಕಂಪು’ ಚೆಲ್ಲಲಿದ್ದಾರೆ. ಮೈಸೂರು ವೀಳ್ಯದೆಲೆ, ಮೈಸೂರು ಪಾಕ್, ನಂಜನಗೂಡು ರಸಬಾಳೆ ಮೊದಲಾದ ಮೈಸೂರಿನ ವಿಶೇಷಗಳನ್ನು ವಾಹನದಲ್ಲಿ ಮೆರವಣಿಗೆಯುದ್ದಕ್ಕೂ ಪ್ರದರ್ಶಿಸಲಾಗುವುದು. ಕಂಸಾಳೆ, ಕೋಲಾಟ, ಪೂಜಾ ಕುಣಿತ, ಕೀಲು ಕುಣಿತ ಕಾರ್ಯಕ್ರಮಕ್ಕೂ ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿದೆ. ಸಂಜೆ ಕರಾಟೆ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕೆ.ಆರ್. ನಗರ ಹಾಗೂ ಎಚ್.ಡಿ. ಕೋಟೆ ತಾಲ್ಲೂಕಿನ ಮಹಿಳೆಯರು ಪ್ರತಿಭೆ ಪ್ರದರ್ಶಿಸುವರು. ಮಹಿಳಾ ದಿನದ ನಿಮಿತ್ತ, ಮೈಸೂರು ವಿ.ವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಅವರಿಂದ ಉಪನ್ಯಾಸ, ಜಾನಪದ ಹಾಸ್ಯ ಜಾದೂಗಾರ ಕಡಬ ಶ್ರೀನಿವಾಸ್ ಅವರಿಂದ ಪ್ರದರ್ಶನ, ಅಂಗವಿಕಲರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸವಿತಾ ಹಾಗೂ ಕಾರ್ಯಾಧ್ಯಕ್ಷ ಬಸವರಾಜು ಬಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.