ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಜಿಲ್ಲಾ ಉಸ್ತುವಾರಿ ಸಚಿವರ ಜನಸ್ಪಂದನ: ಅಹವಾಲುಗಳ ಮಹಾಪೂರ

Published : 23 ಸೆಪ್ಟೆಂಬರ್ 2024, 14:11 IST
Last Updated : 23 ಸೆಪ್ಟೆಂಬರ್ 2024, 14:11 IST
ಫಾಲೋ ಮಾಡಿ
Comments

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ಮಟ್ಟದ ಜನಸ್ಪಂದನ’ ಕಾರ್ಯಕ್ರಮದಲ್ಲಿ ಅಹವಾಲುಗಳು ಮಹಾಪೂರವೆ ಹರಿದುಬಂದಿತು.

ಮಧ್ಯಾಹ್ನ 12.30ರಿಂದ ನಾಲ್ಕು ತಾಸುಗಳವರೆಗೆ ಜನರ ಸಮಸ್ಯೆಗಳನ್ನು ಆಲಿಸಿದ ಸಚಿವರು, ‘ನಿಯಮಬದ್ಧವಾಗಿ ಆಗಬಹುದಾದ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಯೊಬ್ಬರಿಂದಲೂ ಮನವಿ ಸ್ವೀಕರಿಸಿ ಅದನ್ನು ದಾಖಲು ಮಾಡಿಕೊಳ್ಳಲಾಯಿತು ಹಾಗೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ನೀಡಲಾಯಿತು.

‘ಕಂದಾಯ, ಸಮಾಜ ಕಲ್ಯಾಣ, ಆಹಾರ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 112 ಅಹವಾಲುಗಳು ಸ್ವೀಕೃತವಾಗಿವೆ. ಅವುಗಳನ್ನು ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಕಚೇರಿಗಳಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿಪಡಿಸಿ, ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ’ ಎಂದು ಸಚಿವರು ತಿಳಿಸಿದರು.

ಏನೇನು ಸಮಸ್ಯೆಗಳು?:

ಎಚ್‌.ಡಿ. ಕೋಟೆ ತಾಲ್ಲೂಕಿನ ಅಂಕಶೆಟ್ಟಿ ಎನ್ನುವವರು, ‘ನೆರೆಯಿಂದಾಗಿ ನಮ್ಮ ಮನೆ ಬಿದ್ದು ಹೋಗಿತ್ತು. ಹೊಸದಾಗಿ ಕಟ್ಟಿದ್ದು, ಗೃಹಪ್ರವೇಶವೂ ಆಗಿದೆ. ಸರ್ಕಾರದಿಂದ ಕೊನೆ ಕಂತಿನ ಹಣ ಕೊಡಿಸಿಕೊಡಬೇಕು’ ಎಂದು ಕೋರಿದರು.

ನಾಗವಾಲದ ಮರಿದೇವಯ್ಯ, ‘2019ರಲ್ಲಿ ನಿಧನವಾದವರ ಹೆಸರಿನಲ್ಲಿ 2024ರಲ್ಲಿ ಅರ್ಜಿ ಹಾಕಿ ಕೆಲವರು ಭೂಪರಿವರ್ತನೆಗೆ ಯತ್ನಿಸುತ್ತಿದ್ದಾರೆ. ಇದಕ್ಕೆ ತಹಶೀಲ್ದಾರ್‌ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದರು.

ಕೊಳೆಗೇರಿಯವರಿಗೆ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಮಾದರಿಯ ಮನೆಯಲ್ಲಿ ವಾಸವಿರುವ ಅಂಧರಾದ ಶಿವಶೆಟ್ಟಿ ಎನ್ನುವವರು ಸಚಿವರ ಎದುರು ಕಣ್ಣೀರಿಟ್ಟರು. ‘4ನೇ ಫ್ಲೋರ್‌ನ ಮನೆಯಲ್ಲಿ ನಾವಿದ್ದೇವೆ. ಅಲ್ಲಿಗೆ ಸರಿಯಾಗಿ ನೀರು ಪೂರೈಕೆ ಆಗುವುದಿಲ್ಲ. ಕೆಳಮಹಡಿಯಲ್ಲೇ ಮನೆ ಕೊಡಬೇಕು’ ಎಂದು ಕೇಳಿಕೊಂಡರು. ಸ್ಪಂದಿಸಿದ ಸಚಿವರು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್‌ ನೌಕರರು, ಬಾಕಿ ವೇತನ ಕೊಡಿಸುವಂತೆ ಮನವಿ ಸಲ್ಲಿಸಿದರು.

ನೆರವಿನ ಭರವಸೆ:

ಶಕ್ತಿ ನಗರದ ತುಳಸಿ ಎನ್ನುವವರು, ‘ಹಲವು ವರ್ಷಗಳಿಂದಲೂ ನಾವು ಮಹಿಳಾ‌ ಸಮಾಜ ನಡೆಸುತ್ತಿದ್ದು, ಆರ್ಥಿಕ ಸಹಾಯ ಮಾಡಬೇಕು’ ಎಂದು ಕೋರಿದರು. ‘₹5 ಲಕ್ಷ ಒದಗಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

‘ಲಲಿತಾದ್ರಿಪುರದ ಹೊಸ ಬಡಾವಣೆಗೆ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ನಿವಾಸಿಗಳು ಕೋರಿದರು. ‘ತಾಂಡವಪುರದಲ್ಲಿ ಕೆಐಎಡಿಬಿ ಜಮೀನು ಸ್ವಾಧೀನಪಡಿಸಿಕೊಂಡು 12 ವರ್ಷವಾದರೂ ಪರಿಹಾರ ಕೊಟ್ಟಿಲ್ಲ‌’ ಎಂದು ರೈತರು ಅಳಲು ತೋಡಿಕೊಂಡರು. ‘ವರುಣ ನಾಲೆಗೆಂದು ನಮ್ಮ 4 ಗುಂಟೆ ಜಮೀನು ಹೋಗಿದೆ. ಈವರೆಗೂ ಪರಿಹಾರ ಸಿಕ್ಕಿಲ್ಲ’ ಎಂದು ಯುವಕರೊಬ್ಬರು ಕಣ್ಣೀರಿಟ್ಟರು.

ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ‘ನಾನು ಯಾವುದೇ ತೆರಿಗೆ ಪಾವಿಸುತ್ತಿಲ್ಲ. ಆದರೂ ನನ್ನ ಬಿಪಿಎಲ್‌ ಕಾರ್ಡ್‌ ಅನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ’ ಎಂದು ತಿಳಿಸಿದರು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸಚಿವರು, ಪರಿಶೀಲಿಸಿ ನೆರವಾಗುವಂತೆ ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಅವರಿಗೆ ನಿರ್ದೇಶನ ನೀಡಿದರು.

ಬಿಪಿಎಲ್‌ ಕಾರ್ಡ್‌ ಕೊಡಿಸಿ:

‘ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಎರಡು ವರ್ಷವಾದರೂ ಕೊಟ್ಟಿಲ್ಲ. ಬೇಗ ಕೊಡಿಸಿಕೊಡಿ’ ಎಂದು ಅಂಧ ಕೃಷ್ಣ ಎನ್ನುವವರು ಅಹವಾಲು ಸಲ್ಲಿಸಿದರು.

ತಿ.ನರಸೀಪುರ ತಾಲ್ಲೂಕಿನ ಸಿ.ರಾಜೇಶ್, ‘ಎಂ.ಸಿ. ಹುಂಡಿಗೆ ಸ್ಮಶಾನ ನಿರ್ಮಿಸಿಕೊಡಬೇಕು. ಒಕ್ಕಣೆಗೆ ಜಾಗ ಕೊಡಿಸಬೇಕು’ ಎಂದು ಕೋರಿದರು.

ಜಮೀನಿಗೆ ಖಾತೆ ಮಾಡಿಸಿಕೊಡಬೇಕು, ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಸಿಕೊಡಬೇಕು, ಮುಡಾದಿಂದ ಟೈಟಲ್‌ ಡೀಡ್ ಕೊಡಿಸಬೇಕು, ಬಸ್ ಒದಗಿಸಿಕೊಡಬೇಕು, ಚುಂಚನಕಟ್ಟೆ ಗ್ರಾಮದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂಬಿತ್ಯಾದಿ ಮನವಿಗಳು ಸಲ್ಲಿಕೆಯಾದವು.

ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮುಡಾ ಕೆ.ಮರೀಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ಎನ್.ವಿಷ್ಣುವರ್ಧನ್‌, ಡಿಸಿಪಿ ಬಸವರಾಜ್‌ ಪಾಲ್ಗೊಂಡಿದ್ದರು.

ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಚಿವರು ಒಂದೂವರೆ ತಾಸು ತಡವಾಗಿ ಬಂದರು. ಅಲ್ಲಿವರೆಗೆ ಜನರು ಹಾಗೂ ಅಧಿಕಾರಿಗಳು ಕಾಯಬೇಕಾಯಿತು.

‘ಕುರಿಮಂಡಿ ಸ್ಥಳಾಂತರಿಸಿ’

ಮುಖಂಡ ಮಂಟೇಲಿಂಗಯ್ಯ, ‘ವಾರ್ಡ್ ನಂ.15ರಲ್ಲಿರುವ ಕುರಿಮಂಡಿಯಿಂದಾಗಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಅದನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕು. ಅಲ್ಲವರೆಗೆ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಡಿಸಿ ಕಚೇರಿ ಆವರಣದಲ್ಲಿ ಮತ್ತೆರಡು ಪ್ರತಿಮೆ

‘ನಗರದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಿ ಸಮಾಜದವರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಮುಖಂಡ ದೇವರಾಜ್ ಟಿ.ಕಾಟೂರ್ ಕೋರಿದರು.

ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ‘ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಆ ಆವರಣದಲ್ಲೇ ಒಂದೆಡೆ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಇನ್ನೊಂದೆಡೆ ವಾಲ್ಮೀಕಿ ಪ್ರತಿಮೆಯನ್ನೂ ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ವಿಶೇಷಗಳು

  • ದಸರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ‌ನೀಡಲು ಅವಕಾಶ ಕೊಡುವಂತೆ ದಾವಣಗೆರೆಯ ಕಲಾವಿದರೊಬ್ಬರು ಅರ್ಜಿ ಸಲ್ಲಿಸಿದರು.

  • ಮುಡಾದ ಹೊರ ಗುತ್ತಿಗೆ ನೌಕರರು ಸಿಬ್ಬಂದಿ ಸಂಬಳ ಕೊಡಿಸುವಂತೆ ಕೋರಿದರು.

  • ನಿಗಮ ಮಂಡಳಿಗೆ ನೇಮಿಸುವಂತೆಯೂ ಅರ್ಜಿ ಬಂದಿತು.

  • ಬಸವಣ್ಣ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ಕೂಡ ಅರ್ಜಿ ಸಲ್ಲಿಸಿದರು. ದಸರಾ ಉಪ ಸಮಿತಿಗೆ ಸೇರಿಸುವಂತೆಯೂ ಮನವಿ ಬಂದಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT