ಬುಧವಾರ, ಮಾರ್ಚ್ 29, 2023
23 °C
ಅಧಿಕಾರಿಗಳ ಸಭೆ ನಡೆಸಿದ ಶಾಸಕ ಜಿ.ಟಿ.ದೇವೇಗೌಡ

ಸ್ಮಶಾನಕ್ಕೆ ಜಾಗ: ಪಂಚಾಯಿತಿಗೆ ಹಸ್ತಾಂತರಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಮಶಾನ, ಘನ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಸರ್ಕಾರಿ ಭೂಮಿಯನ್ನು ಗುರುತಿಸಿ ಮೀಸಲಿಡಬೇಕು’ ಎಂದು ಶಾಸಕ ಜಿ.ಟಿ.ದೇವೇಗೌಡ  ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಲವು ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಇಲ್ಲ. ಆದರೆ, ಕೆಲವೆಡೆ ಜಾಗಕ್ಕೆ ತುಂಬಾ ತೊಂದರೆ ಆಗಿರುವ ಕುರಿತು ದೂರುಗಳು ಬರುತ್ತಿವೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನನ್ನು ತ್ವರಿತವಾಗಿ ಗುರುತಿಸಬೇಕು. ದಾಖಲೆಗಳ ಸಹಿತ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಕೆಲವು ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಾಗ ಗುರುತಿಸಲಾಗಿದೆ. ಅಲ್ಲಿ ಸ್ವಚ್ಛಗೊಳಿಸಿ ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಬೇಕು. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಇರುವ ಬಗ್ಗೆ ಒಂದೂ ದೂರು ಬಾರದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಹಿನಕಲ್, ಬೆಳವಾಡಿ, ಕೂರ್ಗಳ್ಳಿಯಲ್ಲಿ ಜಾಗ ಗುರುತಿಸಲಾಗಿದೆ. ಸ್ಕೆಚ್ ಮಾಡಿ ಸಲ್ಲಿಸಿದ ತಕ್ಷಣವೇ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಆರಂಭಿಸುತ್ತೇವೆ. ಬೆಳವಾಡಿಯಲ್ಲಿ ಮೀಸಲಿಟ್ಟಿರುವ ಜಾಗವನ್ನು ಸ್ಮಶಾನಕ್ಕೆ ಕೊಡುವುದಕ್ಕೆ ಸ್ಕೆಚ್ ಮಾಡಲು ಪತ್ರ ಬರೆಯಲಾಗಿದೆ’ ಎಂದು ಹೂಟಗಳ್ಳಿ ನಗರಸಭೆ ಪೌರಾಯುಕ್ತ ನರಸಿಂಹಮೂರ್ತಿ ಹೇಳಿದರು.

‘ಮೂಗನಹುಂಡಿ, ನಗರ್ತಹಳ್ಳಿ, ಉದ್ಬೂರು, ಕಾಟೂರು ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿದೆ. ಸ್ಕೆಚ್‌ ಮಾಡಿಸಿದ ಮೇಲೆ ಹಸ್ತಾಂತರ ಮಾಡುತ್ತೇವೆ’ ಎಂದು ಪಿಡಿಒ ತಿಳಿಸಿದರು.

ಸರ್ಕಾರಿ ಶಾಲೆಗಳ ಜಾಗದ ಬಗ್ಗೆ ಸರ್ವೆ ಮಾಡಿದ್ದರೂ ಈವರೆಗೂ ಸ್ಕೆಚ್ ಕಾಪಿ ಕೊಟ್ಟಿಲ್ಲವೆಂದು ಪಿಡಿಒಗಳು ಶಾಸಕರ ಗಮನಸೆಳೆದರು. ‘ಜಂಟಿ ಸಮೀಕ್ಷೆ ನಡೆಸಿದ ಮೇಲೆ ಪ್ರಕ್ರಿಯೆ ಮುಂದುವರಿಸಿಲ್ಲವೇಕೆ? ಸ್ಕೆಚ್ ಕಾಪಿ ಹಾಗೂ ದಾಖಲೆಗಳನ್ನು ತ್ವರಿತವಾಗಿ ಹಸ್ತಾಂತರಿಸಬೇಕು’ ಎಂದು ಸೂಚಿಸಿದರು.

ತಹಶೀಲ್ದಾರ್ ಗಿರೀಶ್, ತಾಲ್ಲೂಕು ಪಂಚಾಯಿತಿ ಇಒ ಗಿರೀಶ್, ಎಡಿಎಲ್‌ಆರ್ ವಿವೇಕ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎ.ಎಂ.ಶ್ರೀಧರ್, ವಿ.ಪುಷ್ಪಲತಾ, ಶ್ಯಾಮ್‌ಸುಂದರ್, ವೆಂಕಟೇಶ್, ಉಪ ತಹಶೀಲ್ದಾರ್‌ ಎನ್.ಎಂ.ನಿಂಗಪ್ಪ, ಕುಬೇರ್, ರಾಜಸ್ವ ನಿರೀಕ್ಷಕರಾದ ಸಿ.ವಿ.ಲೋಹಿತ್, ಶಿವಕುಮಾರ್, ತಾಲ್ಲೂಕು ಭೂ ಮಾಪಕ ಡಿ.ಸುರೇಶ್, ಭೂ ಮಾಪಕರಾದ ಧನಪಾಲ್ ಶೆಟ್ಟಿ, ಎನ್.ಜಯಬೋರೇಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು