ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊರೆತ ಅವಕಾಶ ಬಳಸಿಕೊಳ್ಳಿ: ಪ್ರೊ.ಸೋಮಣ್ಣ

ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಉದ್ಯೋಗ ಮೇಳ
Published 3 ಆಗಸ್ಟ್ 2024, 15:52 IST
Last Updated 3 ಆಗಸ್ಟ್ 2024, 15:52 IST
ಅಕ್ಷರ ಗಾತ್ರ

ಮೈಸೂರು: ‘ಉದ್ಯೋಗದ ನಿರೀಕ್ಷೆಯಲ್ಲಿರುವವರು ತಮಗೆ ದೊರೆತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ ಹೇಳಿದರು.

ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕ, ವಿದ್ಯಾಂಗ ಅಂಗವಿಕಲರ ಸಬಲೀಕರಣ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘ, ಪ್ಲೇಸ್‌ಮೆಂಟ್‌ ಸೆಲ್ ಆಶ್ರಯದಲ್ಲಿ ಶನಿವಾರ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿದರು.

‘ತಮ್ಮ ಆಯ್ಕೆಯ ಉದ್ಯೋಗಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡದೆ, ದೊರೆತ ಉದ್ಯೋಗವನ್ನು ಸಮರ್ಥವಾಗಿ ಮಾಡಬೇಕು. ಜೊತೆಯಲ್ಲೇ ಹೆಚ್ಚು ಪುಸ್ತಕಗಳನ್ನು ಖರೀದಿಸಿ, ನಿರಂತರ ಅಧ್ಯಯನಶೀಲರಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಬಹುದು. ಅವಕಾಶ ದೊರೆತರೆ ಸ್ವಂತ ಉದ್ಯೋಗವೂ ಆರಂಭಿಸಬಹುದು’ ಎಂದು ಸಲಹೆ ನೀಡಿದರು.

ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಪ್ಲೇಸ್‌ಮೆಂಟ್ ಸೆಲ್ ಮುಖ್ಯಸ್ಥ ಕೆ.ಸತೀಶ್ ಮಾತನಾಡಿ, ‘ಸಂಸ್ಥೆಯು ದೇಶದಾದ್ಯಂತ 182 ಉದ್ಯೋಗ ಮೇಳವನ್ನು ಏರ್ಪಡಿಸಿದ್ದು, ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಯುವಜನರು ಉದ್ಯೋಗ ಪಡೆದುಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಉದ್ಯೋಗ ಮೇಳದಲ್ಲಿ ಜಿಲ್ಲೆಯವರು ಮಾತ್ರವಲ್ಲದೆ, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಯ ನೂರಾರು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು. 284ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಚಾಲಕ ವಿ.ಮಂಜುನಾಥ್, ಅಂಗವಿಕಲರ ಸಬಲೀಕರಣ ಸಮಿತಿ ಸಂಚಾಲಕ ನಾಗರಾಜ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಪ್ರೊ.ಜಯಶ್ರೀ, ಪ್ಲೇಸ್‌ಮೆಂಟ್‌ ಸೆಲ್‌ ಸಂಚಾಲಕ ನಿರಂಜನ್ ಬಾಬು, ಸಮರ್ಥನಂ ಸಂಸ್ಥೆಯ ಸುಭಾಷ್, ಶಿವರಾಜು, ವೀರಭದ್ರ ಪಟೇಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT