ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka assembly election 2023 | ‘ಒಳೇಟು’ ಅರಿಯದಾದರೇ ರಾಮದಾಸ್?!

4 ಬಾರಿ ಗೆದ್ದಿದ್ದ ಮುಖಂಡರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ
Last Updated 18 ಏಪ್ರಿಲ್ 2023, 1:30 IST
ಅಕ್ಷರ ಗಾತ್ರ

ಮೈಸೂರು: ಕೃಷ್ಣರಾಜ ಕ್ಷೇತ್ರದಲ್ಲಿ 1994ರಿಂದಲೂ ಬಿಜೆಪಿಯ ಕಾಯಂ ಅಭ್ಯರ್ಥಿಯಾಗಿ ಎಸ್‌.ಎ.ರಾಮದಾಸ್‌ 4 ಬಾರಿ ಗೆದ್ದು, 2 ಬಾರಿ ಸೋತಿದ್ದಾರೆ. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಬಿಜೆಪಿ ಟಿಕೆಟ್‌ ಕೈತಪ್ಪಿರುವುದರಿಂದ ಅವರು ವರಿಷ್ಠರು ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದಾರೆ.

ಚುನಾವಣೆ ಸಮೀಪಿಸಿದಾಗೇನೂ ಅವರನ್ನು ಪಕ್ಷ ನಿರ್ಲಕ್ಷಿಸಿಲ್ಲ. ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ, ಸಚಿವ ಸ್ಥಾನ ನೀಡಿದೇ ಅವರನ್ನು ಕಡೆಗಣಿಸಲಾಗಿತ್ತು. ವ್ಯವಸ್ಥಿತವಾಗಿ ತಮ್ಮನ್ನು ಕಡೆಗಣಿಸುತ್ತಿದ್ದರೂ ಅವರು ಗಂಭೀರವಾಗಿ ಪರಿಗಣಿಸದೇ, ಒಳೇಟು ಬೀಳುತ್ತಿದ್ದರೂ ಅರಿಯದೇ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಹೋದ ವರ್ಷ ಆಯೋಜಿಸಿದ್ದ ‘ಮೋದಿ ಯುಗ ಉತ್ಸವ’ದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರಾದಿಯಾಗಿ ಪಾಲ್ಗೊಂಡಿದ್ದ ಎಲ್ಲರೂ ರಾಮದಾಸ್ ಅವರನ್ನು ಹೊಗಳಿದ್ದರು. ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದರು. ಹೀಗಾಗಿ, ಈ ಬಾರಿಯೂ ತಮಗೇ ಟಿಕೆಟ್‌ ಸಿಗುತ್ತದೆ ಎಂದು ರಾಮದಾಸ್ ನಿರೀಕ್ಷಿಸಿದ್ದರು. ಪಕ್ಷವು ಹೊಸ ಪ್ರಯೋಗಕ್ಕೆ ಮುಂದಾಗಿದ್ದರಿಂದ ಅವರು, ಮತ್ತೊಮ್ಮೆ ಟಿಕೆಟ್‌ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ.

‘ಅನಂತ್‌ಕುಮಾರ್‌ ಅವರ ಗರಡಿಯಲ್ಲಿ ಬೆಳೆದವರು ಎನ್ನುವ ಕಾರಣಕ್ಕೆ ಕ್ರಮೇಣ ಕಡೆಗಣಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆಗಿನ ಮುನಿಸು, ಸ್ಥಳೀಯ ನಾಯಕರೊಂದಿಗೆ ವಿರೋಧ ಕಟ್ಟಿಕೊಂಡಿದ್ದು, ಸಂಸದ ಪ್ರತಾಪ ಸಿಂಹ ಜೊತೆಗಿದ್ದ ಆಂತರಿಕ ಗುದ್ದಾಟ ಟಿಕೆಟ್‌ ಕೈತಪ್ಪಲು ಕಾರಣವಾಗಿದೆ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದರು. ‘ಎಲ್ಲರ ವಿಶ್ವಾಸ ಗಳಿಸಿದ್ದ ರಾಮದಾಸ್, ಮುಸ್ಲಿಮರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಇದು ಪಕ್ಷದಲ್ಲಿ ಹಲವರಿಗೆ ಪಥ್ಯವಾಗಿರಲಿಲ್ಲ’ ಎಂದೂ ಹೇಳಲಾಗುತ್ತಿದೆ.

ಇಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಸಂಘಟನೆಗೆ ಶ್ರಮಿಸಿದ್ದ ರಾಮದಾಸ್, ಯುವ ಮೋರ್ಚಾ ನಾಯಕತ್ವದ ಹೊಣೆಯನ್ನೂ ನಿರ್ವಹಿಸಿದ್ದರು. ಬಿ.ಎಸ್.ಯಡಿಯೂರಪ್ಪ, ಅನಂತ್‌ಕುಮಾರ್, ಕೆ.ಎಸ್.ಈಶ್ವರಪ್ಪ, ಡಿ.ಎಚ್.ಶಂಕರಮೂರ್ತಿ ಮೊದಲಾದವರ ಸಂಪರ್ಕದಲ್ಲಿದ್ದು ಪಕ್ಷದ ಕೆಲಸ ಮಾಡುತ್ತಿದ್ದರು. 1994ರಲ್ಲಿ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್‌ ವಿರುದ್ಧ ಸೋತ ಅವರು ಹ್ಯಾಟ್ರಿಕ್‌ ಸಾಧನೆ ಮಾಡಲಾಗಲಿಲ್ಲ. 2008ರಲ್ಲಿ ಪುನರಾಯ್ಕೆಯಾದ ಅವರು, ಬಿ.ಎಸ್.ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರೊಂದಿಗೆ ಮುನಿಸಿಕೊಂಡು ದೂರ ಉಳಿದಿದ್ದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳಲಿಲ್ಲ. ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ಸೋತರು. 2018ರಲ್ಲಿ 4ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದರಿಂದ ನೊಂದಿದ್ದರು. ಹಿರಿತನವನ್ನು ಪರಿಗಣಿಸದಿದ್ದಕ್ಕೆ ಅವರು ಮತ್ತೊಮ್ಮೆ ಸಚಿವರಾಗುವುದು ಸಾಧ್ಯವಾಗಲಿಲ್ಲ.

ತಮಗೆ ಹಲವು ರೀತಿಯಲ್ಲಿ ಒಳೇಟು ಬೀಳುತ್ತಲೇ ಬಂದಿದ್ದರೂ ಅವರು ಅರಿಯುವಲ್ಲಿ ಎಡವಿದರೇ ಎನ್ನುವುದೂ ಈಗ ಚರ್ಚೆಯಾಗುತ್ತಿದೆ. ಗುಂಬಜ್‌ ವಿನ್ಯಾಸದ ಬಸ್‌ ತಂಗುದಾಣದ ವಿವಾದದಲ್ಲಿ ರಾಮದಾಸ್ ಹಾಗೂ ಸಂಸದ ಪ್ರತಾಪ ಸಿಂಹ ಜೊತೆ ಮುಸುಕಿನ ಗುದ್ದಾಟ ನಡೆದಿತ್ತು. ಕೊನೆಗೆ ಗುಂಬಜ್‌ ಅನ್ನು ತೆರವುಗೊಳಿಸಿದ್ದರು. ಕ್ಷೇತ್ರಕ್ಕೆ ಸೀಮಿತವಾಗಿದ್ದರು. ನಗರ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಮತ್ತು ಮುಖಂಡರೊಂದಿಗೆ ಅಷ್ಟಕಷ್ಟೆ ಎನ್ನುವಂತಿದ್ದರು. ರಾಮದಾಸ್‌ ಬದಲಿಗೆ ಹೊಸಮುಖಕ್ಕೆ ಅವಕಾಶ ನೀಡಬೇಕು ಎಂದು ಬ್ರಾಹ್ಮಣ ಸಮಾಜದವರು ಒತ್ತಾಯಿಸಿದಾಗಲೂ, ಆ ಧ್ವನಿ ಶಮನಗೊಳಿಸುವ ಗೋಜಿಗೆ ಹೋಗಲಿಲ್ಲ. ಅತಿಯಾದ ಆತ್ಮವಿಶ್ವಾಸ ಅವರು ಟಿಕೆಟ್‌ ತಪ್ಪಿಸಿಕೊಳ್ಳಲು ಕಾರಣವಾಯಿತು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT