ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | 47 ವರ್ಷ ಬಳಿಕ ಮೈಸೂರಲ್ಲಿ ಒಕ್ಕಲಿಗರಿಗೆ ಟಿಕೆಟ್: ಲಕ್ಷ್ಮಣ

Published 22 ಮಾರ್ಚ್ 2024, 7:54 IST
Last Updated 22 ಮಾರ್ಚ್ 2024, 7:54 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ 47 ವರ್ಷಗಳ ಬಳಿಕ ಒಕ್ಕಲಿಗ ಸಮಾಜದ ವ್ಯಕ್ತಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲಾಗಿದ್ದು, ಸಮುದಾಯದವರು ಈ ಅವಕಾಶವನ್ನು ಕಳೆದುಕೊಳ್ಳಬಾರದು’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ ಕೋರಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘1977ರಲ್ಲಿ ತುಳಸಿದಾಸ್ ಅವರಿಗೆ ಪಕ್ಷದ ಟಿಕೆಟ್‌ ಕೊಡಲಾಗಿತ್ತು. ಅದಾದ ಮೇಲೆ ಈಗ ಅವಕಾಶ ಸಿಕ್ಕಿದೆ. ಒಕ್ಕಲಿಗರ ವಿರೋಧಿ ಎಂದು ಬಿಂಬಿಸುತ್ತಿರುವವರಿಗೆ ತಕ್ಕ ಉತ್ತರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೂಲಕ ನೀಡಿದ್ದಾರೆ. ರೈತ ಕುಟುಂಬದಿಂದ ‌ಬಂದಿರುವ ಹಾಗೂ ರಾಜಕೀಯ ಹಿನ್ನೆಲೆ ಇಲ್ಲದ ನನ್ನನ್ನು ಜನರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಕ್ಷೇತ್ರದಲ್ಲಿ ಪರಿಶಿಷ್ಟರನ್ನು ಬಿಟ್ಟರೆ ಹೆಚ್ಚಿನ ಮತಗಳಿರುವುದು ಒಕ್ಕಲಿಗ ಸಮಾಜದ್ದೇ. ನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ನಾನು ಹಿಂದಿನಿಂದಲೂ ಜಾತಿ ನೋಡಿಲ್ಲ, ಎಲ್ಲ ಸಮಾಜದವರನ್ನೂ ಒಗ್ಗೂಡಿಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.

ಟಿಕೆಟ್ ತಪ್ಪಿಸಿದ್ದೇಕೆ ತಿಳಿಸಲಿ:

‘ಎರಡು ಬಾರಿ ಸಂಸದರಾಗಿದ್ದ ಒಕ್ಕಲಿಗ ಸಮಾಜದ ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ತಪ್ಪಿದ್ದು ಏಕೆ ಎಂಬುದನ್ನು ಬಿಜೆಪಿಯವರು ತಿಳಿಸಬೇಕು. ಸಂಸದರಾದರೂ ತಿಳಿಸಲಿ. ಅವರ ವಿರುದ್ಧ ಸ್ಪರ್ಧಿಸಲೆಂದು ಹೈಕಮಾಂಡ್‌ ಎದುರು ಪಟ್ಟು ಹಿಡಿದು ಟಿಕೆಟ್‌ ತೆಗೆದುಕೊಂಡು ಬಂದೆ. ಆದರೆ, ಪ್ರತಾಪ ಹಿಟ್ ವಿಕೆಟ್ ಆಗಿದ್ದಾರೆ. ಅವರು ಎದುರಾಳಿಯಾಗಿದ್ದರೆ ಬಹಳ ಮಜಾ ಇರುತ್ತಿತ್ತು’ ಎಂದು ವ್ಯಂಗ್ಯವಾಗಿ ಟೀಕಿಸಿದರು.

‘ಮೈಸೂರು ರಾಜವಂಶಸ್ಥರ ದತ್ತು ಪುತ್ರ– ಸಾಮಾನ್ಯ ವ್ಯಕ್ತಿಯ ನಡುವಿನ ಚುನಾವಣೆ ಇದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜವಂಶಸ್ಥರ ಬಗ್ಗೆ ನಮಗೆ ಅಪಾರ ಗೌರವವಿದೆ. ಯದುವೀರ್ ಕಾಂಗ್ರೆಸ್ ಸಂಪರ್ಕಿಸಿದ್ದರೆ ಟಿಕೆಟ್ ಕೊಡಿಸುತ್ತಿದ್ದೆವು. ಆದರೆ, ಜನ ವಿರೋಧಿ ಬಿಜೆಪಿಯಿಂದ ಅಭ್ಯರ್ಥಿ ಆಗಿರುವುದು ಎಲ್ಲರಲ್ಲೂ ಅಸಮಾಧಾನ ಮೂಡಿಸಿದೆ’ ಎಂದರು.

‘ಯದುವೀರ್‌ ಅವರನ್ನು ಬಲವಂತವಾಗಿ ಚುನಾವಣೆಗೆ ಕರೆತಂದವರು ಯಾರು ಎಂಬುದನ್ನು ಪ್ರತಾಪ ತಿಳಿಸಲಿ’ ಎಂದು ಸವಾಲೆಸೆದರು.

ಯಾರು ಬೇಕೆಂದು ನಿರ್ಧರಿಸಲಿ:

‘ಜನರ ನಡುವೆಯೇ ಇರುವ ವ್ಯಕ್ತಿ ನಾನು. ಹೋರಾಟದಿಂದ ಬಂದವನು. ಮನೆ ಬಾಗಿಲಿಗೆ ಬರುವ ವ್ಯಕ್ತಿ ಬೇಕಾ? ಮನೆ ಬಳಿಗೆ ಹೋಗಿ ಕಾಯುವ ಪರಿಸ್ಥಿತಿ ಬೇಕಾ ಎನ್ನುವುದನ್ನು ಜನರು ನಿರ್ಧರಿಸಲಿ’ ಎಂದರು.

‘ಇದು ನನಗೆ ಕೊನೆಯ ಅವಕಾಶ. ಇತರ ನಾಲ್ಕು ಚುನಾವಣೆಗಳಲ್ಲಿ ಸೋತಿದ್ದೇನೆ. ಬಹಳ ಸುಸ್ತಾಗಿದ್ದೇನೆ. ಈ ಬಾರಿಯೂ ಮತದಾರರು ಕೈಹಿಡಿಯದಿದ್ದರೆ ನಾನು ಸತ್ತಂತೆಯೇ’ ಎಂದು ಭಾವುಕವಾಗಿ ನುಡಿದರು.

‘ನನ್ನ ಹೆಸರಿನ ಮುಂದೆ ರಾಜ, ಮಹಾರಾಜ ಅಥವಾ ಒಡೆಯರ್ ಎನ್ನುವುದ್ಯಾವುದೂ ಇಲ್ಲ. ಚುನಾವಣೆ ಹೊಸ್ತಿಲಲ್ಲಿ, ಗೌಡ ಎಂದು ಸೇರಿಸಿಕೊಳ್ಳುವುದಿಲ್ಲ. ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ’ ಎಂದು ತಿಳಿಸಿದರು.

‘ಮೈಸೂರಿನಲ್ಲಿ ಬಿಜೆಪಿಯು ಒಂದು ಪಕ್ಷ ಆರು ಬಾಗಿಲು ಎಂಬಂತಾಗಿದೆ. ಬಿಜೆಪಿಯವರು ಮೈತ್ರಿ ಹೆಸರಿನಲ್ಲಿ ಜೆಡಿಎಸ್‌ನವರಿಗೆ ಅಸ್ತಿತ್ವವೇ‌ ಇಲ್ಲದಂತೆ ಮಾಡಿದ್ದಾರೆ. ಕೇವಲ ಮೂರು ಕ್ಷೇತ್ರ ಬಿಟ್ಟುಕೊಡುವುದಕ್ಕೂ ಕುಮಾರಸ್ವಾಮಿ ಅವರನ್ನು ಕಾಡಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದವರು ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಬಿಜೆಪಿಯು ಒಕ್ಕಲಿಗರು, ದಲಿತರು ಹಾಗೂ ಬಡವರ ವಿರೋಧಿ ಪಕ್ಷ. ಡಿ.ವಿ. ಸದಾನಂದಗೌಡ, ಸಿ.ಟಿ. ರವಿ, ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೊಡಲಿಲ್ಲವೇಕೆ ಎಂಬುದನ್ನು ತಿಳಿಸಲಿ’ ಎಂದು ಸವಾಲು ಹಾಕಿದರು. ‘ಇದೆಲ್ಲ ಕಾರಣದಿಂದ ಒಕ್ಕಲಿಗ ಸಮಾಜದವರು ಬಿಜೆಪಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ನರೇಂದ್ರ ಮೋದಿ ಆಡಳಿತ ವಿರೋಧಿ ಅಲೆ ಇದೆ. ನಾವು ಮಾಡಿರುವ ಕೆಲಸ ಹೇಳಿ ಮತ ಕೇಳುತ್ತೇವೆ’ ಎಂದರು. ‘ಯದುವೀರ್‌ ಅವರು ಜನಸಂ‍ಪರ್ಕಕ್ಕೆ ಸಿಗುತ್ತಿದ್ದಾರೆಯೇ?, ಫೋನ್‌ ಕರೆಗೆ ಲಭ್ಯವಾಗುತ್ತಾರೆಯೇ’ ಎಂದು ಕೇಳಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌, ಆರ್. ಮೂರ್ತಿ, ಮುಖಂಡರಾದ ಎಂ.ಶಿವಣ್ಣ, ಪ್ರಕಾಶ್, ಭಾಸ್ಕರ್, ಬಿ.ಎಂ. ರಾಮು, ಜಿ.ವಿ. ಸೀತಾರಾಂ, ನಾಗಭೂಷಣ್ ತಿವಾರಿ, ಭಾಸ್ಕರ್ ಗೌಡ ಹಾಗೂ ಎಚ್‌.ಎ. ವೆಂಕಟೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT