ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಮಕ್ಕಳಿಗೆ ‘ರಾಜಕೀಯ ನೆಲೆ’ ಕಲ್ಪಿಸಿದ ಸಿದ್ದು, ಎಚ್‌ಸಿಎಂ

ಡಾ.ಯತೀಂದ್ರ ವಿಧಾನ ಪರಿಷತ್‌ ಸದಸ್ಯ, ಸುನಿಲ್ ಬೋಸ್ ಸಂಸದ
Published 7 ಜೂನ್ 2024, 4:58 IST
Last Updated 7 ಜೂನ್ 2024, 4:58 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಭಾಗದ ಪ್ರಭಾವಿ ನಾಯಕರಾದ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ತಮ್ಮ ಪುತ್ರರಿಗೆ ‘ರಾಜಕೀಯ ಸ್ಥಾನಮಾನ’ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಪುತ್ರ ಡಾ.ಯತೀಂದ್ರ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದ್ದರೆ, ಮಹದೇವಪ್ಪ ತಮ್ಮ ಪುತ್ರ ಸುನಿಲ್‌ ಬೋಸ್ ಅವರನ್ನು ಮೊದಲ ಬಾರಿಗೇ, ನೆರೆಯ ಚಾಮರಾಜನಗರದ ಸಂಸದರನ್ನಾಗಿ ಮಾಡಲು ಸಫಲರಾಗಿದ್ದಾರೆ. ಇದರೊಂದಿಗೆ, ತಮ್ಮ ಮಕ್ಕಳಿಗೆ ರಾಜಕೀಯ ಶಕ್ತಿ ದೊರಕಿಸಿದ್ದಾರೆ.

ವೈದ್ಯರಾಗಿದ್ದ ಯತೀಂದ್ರ ರಾಜಕಾರಣದತ್ತ ಮುಖ ಮಾಡಿರಲಿಲ್ಲ. ಸಹೋದರ ರಾಕೇಶ್‌ ಸಿದ್ದರಾಮಯ್ಯ ನಿಧನದಿಂದಾಗಿ ರಾಜಕೀಯ ಪ್ರವೇಶಿಸಿದ ಅವರು 2018ರಲ್ಲಿ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ತಂದೆಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ನಂತರ ಅವರನ್ನು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸದಸ್ಯರನ್ನಾಗಿಸಿ, ಅವರಿಗೆ ಅಧಿಕಾರ ಸಿಗುವಂತೆ ಸಿದ್ದರಾಮಯ್ಯ ನೋಡಿಕೊಂಡಿದ್ದರು.

ಕೊಡಿಸುವಲ್ಲಿ ಸಫಲ: ಇದೀಗ, ಯತೀಂದ್ರ ಅವರನ್ನು ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಮೇಲ್ಮನೆಗೆ (ವಿಧಾನ ಪರಿಷತ್‌) ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರ ಬಿಟ್ಟು ಕೊಟ್ಟಿದ್ದ ಯತೀಂದ್ರ ಅವರಿಗೆ ಹೈಕಮಾಂಡ್‌ ಕೂಡ ಭರವಸೆ ನೀಡಿತ್ತು ಎನ್ನಲಾಗಿದೆ. ಇದರೊಂದಿಗೆ, ಮುಖ್ಯಮಂತ್ರಿ ಮೈಸೂರಿನಲ್ಲಿ ಪುತ್ರನಿಗೆ ‘ರಾಜಕೀಯ ನೆಲೆ’ ದೊರೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ರನನ್ನ ಸಚಿವನನ್ನಾಗಿ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

‘ವಯಸ್ಸಾಗುತ್ತಿರುವ ಕಾರಣ, ಮುಂಬರುವ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಹೀಗಾಗಿ, ಮಗ ರಾಜಕೀಯದಲ್ಲಿ ಬೆಳೆಯಲು ಅಗತ್ಯವಾದ ಎಲ್ಲ ವೇದಿಕೆಗಳನ್ನೂ ಸಿದ್ಧಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವರೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ.

ತಂದೆ ಪ್ರತಿನಿಧಿಸುವ ತಿ.ನರಸೀಪುರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರವನ್ನು ಒಳಗೊಂಡಿರುವ ಚಾಮರಾಜನಗರ ಕ್ಷೇತ್ರದಿಂದ ಸುನಿಲ್‌ ಅಭೂತಪೂರ್ವ ಜಯ ಗಳಿಸಿದ್ದಾರೆ.

ಮಗನಿಗೆ ಶ್ರಮಿಸಿದ ಮಹದೇವಪ್ಪ: 2023ರ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರಕ್ಕೆ ವಲಸೆ ಹೋಗಿ, ತಿ. ನರಸೀ‍ಪುರ ಕ್ಷೇತ್ರದಿಂದ ಪುತ್ರ ಸುನಿಲ್‌ ಬೋಸ್‌ ಅವರನ್ನು ಕಣಕ್ಕಿಳಿಸಬೇಕು, ಪಕ್ಷದಿಂದ ಟಿಕೆಟ್ ಕೊಡಿಸಬೇಕೆಂಬುದು ಮಹದೇವಪ್ಪ ಬಯಕೆಯಾಗಿತ್ತು. ಆದರೆ, ನಂಜನಗೂಡಿನ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಆರ್‌. ಧ್ರುವನಾರಾಯಣ ಅಕಾಲಿಕ ನಿಧನದಿಂದಾಗಿ ‌ಅವರ ಯೋಜನೆಗಳು ಅನುಷ್ಠಾನಗೊಳ್ಳಲಿಲ್ಲ. ಕ್ಷೇತ್ರಾಂತರದ ನಿರ್ಧಾರದಿಂದ ಹಿಂದೆ ಸರಿದು, ದರ್ಶನ್‌ ಧ್ರುವನಾರಾಯಣ ಅವರನ್ನು ಬೆಂಬಲಿಸಿದರು. ಸ್ವಕ್ಷೇತ್ರ ತಿ. ನರಸೀಪುರದಿಂದಲೇ ಸ್ಪರ್ಧಿಸಿ ಗೆದ್ದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ಪಡೆದುಕೊಂಡರು. ಇದರಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಬೋಸ್ ಕನಸು ನನಸಾಗಲಿಲ್ಲ. ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲೂ ಬೋಸ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷವು ಕಳಲೆ ಕೇಶವಮೂರ್ತಿ ಅವರಿಗೆ ನೀಡಿದ್ದರಿಂದ ಸ್ಪರ್ಧೆ ಸಾಧ್ಯವಾಗಿರಲಿಲ್ಲ.

ಪುತ್ರ ಬೋಸ್‌ ಅವರನ್ನು ತಿ.ನರಸೀಪುರ ಕ್ಷೇತ್ರದ ಕೆಡಿಪಿ ಸದಸ್ಯರನ್ನಾಗಿಸಿ, ಸಭೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕ್ಷೇತ್ರ ಸಂಚಾರ ಮಾಡಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮಹದೇವಪ್ಪ ಸಹಕರಿಸಿದ್ದರು. ಅದು ಲೋಕಸಭಾ ಚುನಾವಣೆಯಲ್ಲಿ ಕೈಹಿಡಿದಿದೆ.

ಸುನೀಲ್ ಬೋಸ್
ಸುನೀಲ್ ಬೋಸ್
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ

ಪಟ್ಟು ಹಿಡಿದಿದ್ದರು...

ಲೋಕಸಭಾ ಚುನಾವಣೆ ಘೋಷಣೆಯಾದಾಗ ಮಹದೇವಪ್ಪ ಅವರೇ ಚಾಮರಾಜನಗರ ಅಭ್ಯರ್ಥಿಯಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ ಬಯಸಿದ್ದರು. ಆದರೆ ಮಹದೇವಪ್ಪ ಅವರಿಗೆ ಇಷ್ಟವಿರಲಿಲ್ಲ.

‘ನಾನಂತೂ ಸ್ಪರ್ಧಿಸುವುದಿಲ್ಲ. ಮಗನಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು’ ಎಂದು ಪಟ್ಟು ಹಿಡಿದಿದ್ದರು. ಅದಕ್ಕೆ ಮಣಿದ ಹೈಕಮಾಂಡ್‌ ಸುನಿಲ್‌ಗೆ ಟಿಕೆಟ್‌ ನೀಡಿತ್ತು. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರಕ್ಕಿಂತಲೂ ಚಾಮರಾಜನಗರದಲ್ಲಿ ಪ್ರಚಾರಕ್ಕೆ ಆದ್ಯತೆ ನೀಡಿದ್ದರು; ಮಗನನ್ನು ಗೆಲ್ಲಿಸಿಕೊಳ್ಳಬೇಕೆಂಬುದೇ ಪ್ರತಿಷ್ಠೆಯಾಗಿತ್ತು’ ಎಂದು ವಿಶ್ಲೇಷಿಸಲಾಗುತ್ತಿದೆ.

ಮಹದೇವಪ್ಪ ಚಾಮರಾಜನಗರ ಕ್ಷೇತ್ರದಲ್ಲಿ 1991ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋತಿದ್ದರು. ಅದೇ ಕ್ಷೇತ್ರದಲ್ಲಿ ಮೂರು ದಶಕಗಳ ನಂತರ ಮಗನನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT