ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಮನೆಗೆ ಗಜಪಡೆ: ಸಂಭ್ರಮಕ್ಕಿಲ್ಲ ತಡೆ

‘ಅಭಿಮನ್ಯು’ ನೇತೃತ್ವದ 9 ಆನೆಗಳಿಗೆ ಶಾಸಕ ತನ್ವೀರ್‌ ಸೇಠ್‌ ಪೂಜೆ
Published : 23 ಆಗಸ್ಟ್ 2024, 23:30 IST
Last Updated : 23 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಮೈಸೂರು: ಹೊಂಬಿಸಿಲಿನಲ್ಲಿ, ಮಂಗಳವಾದ್ಯಗಳ ನಾದ ಲಹರಿಯಲ್ಲಿ, ಗಾಂಭೀರ್ಯದ ಹೆಜ್ಜೆಯನ್ನಿಡುತ್ತಾ ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ‘ವರಲಕ್ಷ್ಮಿ’, ‘ಲಕ್ಷ್ಮಿ’ ಜೊತೆ ‘ಅಭಿಮನ್ಯು’ ಬರುತ್ತಿದ್ದಂತೆ ದಸರೆಯ ವೈಭವ ಮರುಕಳಿಸಿತು.

ಅಶೋಕಪುರಂನ ಅರಣ್ಯ ಭವನದಲ್ಲಿ ಎರಡು ದಿನಗಳಿಂದ ತಂಗಿದ್ದ 9 ಆನೆಗಳನ್ನು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶಾಸಕ ತನ್ವೀರ್ ಸೇಠ್‌ ಪೂಜೆ ಸಲ್ಲಿಸಿ, ಸ್ವಾಗತ ಕೋರಿದರು. ಪುಷ್ಪಾರ್ಚನೆ ಮಾಡಿದರು. ಈ ವೇಳೆ ‘ಗಜಪಡೆ’ಗೆ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು.

ಗಜಪಡೆ ಸ್ವಾಗತಕ್ಕೆ ಅರಮನೆಯ ಆವರಣವನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಅರಮನೆ ಪುರೋಹಿತ ಪ್ರಹ್ಲಾದ್‌ ರಾವ್ ಹಾಗೂ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ನೇತೃತ್ವದಲ್ಲಿ ‍ಅರ್ಚಕರು ವೇದಘೋಷಗಳೊಂದಿಗೆ ಆನೆಗಳ ಪಾದ ತೊಳೆದು, ಅರಿಸಿನ, ಕುಂಕುಮ, ಗಂಧ, ಭಸ್ಮ, ವಿಭೂತಿ, ಅಕ್ಷತೆ, ಗರಿಕೆ ಹಾಗೂ ನಾನಾ ಬಗೆಯ ಪುಷ್ಪಗಳಿಂದ ಅಲಂಕರಿಸಿದರು. 

‘ಅಭಿಮನ್ಯು’ ಜೊತೆ ‘ಭೀಮ’, ‘ಧನಂಜಯ’, ‘ಗೋಪಿ’, ‘ಕಂಜನ್’, ‘ಏಕಲವ್ಯ’, ‘ರೋಹಿತ್’, ‘ವರಲಕ್ಷ್ಮಿ’ ಹಾಗೂ ‘ಲಕ್ಷ್ಮಿ’ ಆನೆಗಳಿಗೆ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಲಾಯಿತು. ಗಣಪತಿ ಅರ್ಚನೆ ಜೊತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಹೇಮಾ ಮತ್ತು ತಂಡದವರು ಪೂರ್ಣಕುಂಭ ಸ್ವಾಗತ ನೀಡಿದರು. ಗಜಪಡೆಯೊಂದಿಗೆ ಅಶ್ವಪಡೆಯು ಜೊತೆಯಾಯಿತು.

ಉತ್ಸವದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳಿಗೆ ಅರಮನೆ ಮಂಡಳಿ ಶಾಲು ಹೊದಿಸಿ ಸನ್ಮಾನಿಸಿತು. ಮಾವುತರು, ಕಾವಾಡಿಗಳಿಗೆ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ ಅನ್ನು ವಿತರಿಸಲಾಯಿತು. ಅರಮನೆ ಆವರಣದಲ್ಲಿ ನಿರ್ಮಿಸಿರುವ ಬಿಡಾರಗಳಿಗೆ ಆನೆಗಳು ತೆರಳಿದವು. ಶನಿವಾರ ಆನೆಗಳ ತೂಕ ಪರೀಕ್ಷೆ ನಡೆಯಲಿದ್ದು, ದಸರೆ ಜಂಬೂಸವಾರಿ ತಾಲೀಮು ಆರಂಭವಾಗಲಿದೆ.

ಶಾಸಕರಾದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮುಡಾ ಆಯುಕ್ತ ರಘುನಂದನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್, ಡಿಸಿಎಫ್ ಐ.ಬಿ.ಪ್ರಭುಗೌಡ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಹಾಜರಿದ್ದರು.

ಅರಣ್ಯ ಭವನದಿಂದ ಅರಮನೆಗೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ ಆನೆಗಳು - ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.
ಅರಣ್ಯ ಭವನದಿಂದ ಅರಮನೆಗೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ ಆನೆಗಳು - ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.

ಕಲಾತಂಡಗಳ ಮೆರುಗು

ಜಯಮಾರ್ತಾಂಡ ದ್ವಾರದಿಂದ ಅರಮನೆ ಮುಂಭಾಗದವರೆಗೂ ಕಲಾತಂಡಗಳ ಜೊತೆ ಆನೆಗಳನ್ನು ಕರೆದೊಯ್ಯಲಾಯಿತು. ಯದುಕುಮಾರ್ ಮತ್ತು ತಂಡದ 20 ಮಂದಿ ಸ್ಯಾಕ್ಸೋಫೋನ್‌ ಹಾಗೂ ತವಿಲ್ ನುಡಿಸಿದರು. ಅರಮನೆ ಪೊಲೀಸ್‌ ಬ್ಯಾಂಡ್‌ನ ಲಯದ ಸಂಗೀತದಿಂಪಿನಲ್ಲಿ ಆನೆಗಳು ಹೆಜ್ಜೆ ಹಾಕಿದವು.

ಸುಣ್ಣದಕೇರಿಯ ರಮ್ಯಾ ಮತ್ತು ತಂಡದ ‘ಡೊಳ್ಳು ಕುಣಿತ’ ಮೋಹನ್ ಕುಮಾರ್ ಮತ್ತು ತಂಡದ ‘ಪೂಜಾ ಕುಣಿತ ಮಂಡ್ಯದ ಕೊತ್ತತ್ತಿಯ ಚೆಲುವುರಾಜು ಮತ್ತು ತಂಡದ ‘ಗಾರುಡಿಗೊಂಬೆ’ಗಳು ಪುಟ್ಟಸ್ವಾಮಿ ಮತ್ತು ತಂಡದ ‘ಕಂಸಾಳೆ’ ಆಕರ್ಷಿಸಿದವು.

ರಾಜಪೋಷಾಕು ಬಿರುದು ಬಾವಲಿ ಹಿಡಿದಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು. ಅರಮನೆ ಮಂಡಳಿಯು ದಶಕಗಳ ನಂತರ ಇದೇ ಮೊದಲ ಬಾರಿಗೆ ರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರೆ ಮಾದರಿಯಲ್ಲೇ ಸ್ವಾಗತವನ್ನು ಕೋರಿದರು. ಅರಮನೆಯ ಮೇಲೆ ಲಾಂಛನ ಹಿಡಿದು ಸೈನಿಕ ವೇಷ ತೊಟ್ಟು ವಿದ್ಯಾರ್ಥಿಗಳು ನಿಂತಿದ್ದರು. ಆನೆಗಳು ಬಂದಾಗ ಕಹಳೆ ಮೊಳಗಿಸಲಾಯಿತು.

ಅರಣ್ಯ ಭವನದಲ್ಲಿ ‘ಗಜಪೂಜೆ’

ಅರಮನೆಗೆ ದಸರಾ ಆನೆಗಳನ್ನು ಬೀಳ್ಕೊಡುವ ಮೊದಲು ಅರಣ್ಯ ಭವನದಲ್ಲಿ ಇಲಾಖೆಯಿಂದ ಬೆಳಿಗ್ಗೆ 7.45ಕ್ಕೆ ‘ಗಜಪೂಜೆ’ ಸಲ್ಲಿಸಲಾಯಿತು. ಬೆಳಿಗ್ಗೆಯೇ ಆನೆಗಳನ್ನು ಹೂ–ಆಭರಣಗಳಿಂದ ಸಿಂಗರಿಸಲಾಗಿತ್ತು. ಮಾವುತರು ಕಾವಾಡಿಗಳು ಸಮವಸ್ತ್ರ ಧರಿಸಿ ಸಿದ್ಧವಾಗಿದ್ದರು.  ಅರಮನೆ ಅರ್ಚಕ ಪ್ರಹ್ಲಾದರಾವ್‌ ಆನೆಗಳಿಗೆ ಪಂಚಫಲ ಮೋದಕ ಕಜ್ಜಾಯ ಸೇರಿದಂತೆ ತಿನಿಸು ಅಣಿಗೊಳಿಸಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ ಪುಷ್ಕರ್‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಹುಲಿಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಡಿಸಿಎಫ್‌ಗಳಾದ ಐ.ಬಿ.ಪ್ರಭುಗೌಡ ಕೆ.ಎನ್‌.ಬಸವರಾಜು ಸೇರಿದಂತೆ ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡರು. ಆನೆಗಳ ಸೊಂಡಿಲು ಪಾದಗಳಿಗೆ ಅರಿಸಿನ ಗಂಧ ಹಚ್ಚಿ ಚಾಮುಂಡೇಶ್ವರಿ ನೆನೆದರು.

ಮಕ್ಕಳನ್ನು ಆಹ್ವಾನಿಸಿದ ಅರ್ಚಕರು ಗಣಪತಿ ಸ್ತೋತ್ರ ಹೇಳಿಸಿದರು. ಚಿಣ್ಣರು ಆನೆಗಳಿಗೆ ಬಿಲ್ವಪತ್ರೆ ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು. ಡಿಸಿಎಫ್ ಪ್ರಭುಗೌಡ ಅಭಿಮನ್ಯುಗೆ ಆರತಿ ಬೆಳಗಿ ಬೂದುಗುಂಬಳ ಒಡೆದರು. ನಂತರ ಅರಮನೆಗೆ ಬೀಳ್ಕೊಡಲಾಯಿತು. ಅಲ್ಲಿಂದ 8.30ಗಂಟೆಗೆ ಮಂಗಳವಾದ್ಯದ ಲಹರಿಯೊಂದಿಗೆ ಹೊರಟು ಅಶೋಕ ವೃತ್ತ ಆರ್‌ಟಿಒ ವೃತ್ತ ರಾಮಸ್ವಾಮಿ ವೃತ್ತದ ಮೂಲಕ ಚಾಮರಾಜ ಜೋಡಿ ರಸ್ತೆಯಲ್ಲಿ ಸಾಗಲಿವೆ. ಬಳಿಕ ಬಸವೇಶ್ವರ ವೃತ್ತದಿಂದ ನೇರವಾಗಿ ಸಾಗಿ 9.50ಕ್ಕೆ ಜಯಮಾರ್ತಾಂಡ ದ್ವಾರಕ್ಕೆ ಬಂದವು.

ಆನೆಗಳಿಗೆ ಕಲಾತಂಡ ಮಂಗಳವಾದ್ಯದೊಂದಿಗೆ ಸ್ವಾಗತ
ಆನೆಗಳಿಗೆ ಕಲಾತಂಡ ಮಂಗಳವಾದ್ಯದೊಂದಿಗೆ ಸ್ವಾಗತ

ಸೆಲ್ಫಿ ಸ್ಟಿಕ್‌: ವಿಚಲಿತಗೊಂಡ ಆನೆಗಳು

ದಸರಾ ಗಜಪಡೆ ಅರಮನೆ ಪ್ರವೇಶಿಸುವಾಗ ಸೆಲ್ಪಿ ಸ್ಟಿಕ್‌ ಮೊನೊಪಾಡ್‌ ಸಾಧನಗಳನ್ನು ‘ಅಂಕುಶ’ವೆಂದು ತಿಳಿದು ವಿಚಲಿತವಾದವು. ಆನೆಗಳ ನಡೆಯುವಾಗ ನಿಂತಿದ್ದಾಗ ಆನೆಗಳ ಹತ್ತಿರವೇ ಬಂದ ಕೆಲವರು ಸೆಲ್ಪಿ ಸ್ಟಿಕ್‌ ಮೊನೊಪಾಡ್‌ ಚಿತ್ರೀಕರಿಸಲು ಮುಂದಾದರು. ಅರಮನೆ ಪ್ರವೇಶ ದ್ವಾರದಲ್ಲಿ ‘ಲಕ್ಷ್ಮಿ’ ತಿರುಗಿತು. ಅವಳನ್ನು ‘ಧನಂಜಯ’ ಸಮಾಧಾನ ಪಡಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT