ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಾಜಿ‌ ಶಾಸಕ, ಕಾಂಗ್ರೆಸ್ ಮುಖಂಡ ವಾಸು ನಿಧನ

Published 9 ಮಾರ್ಚ್ 2024, 5:36 IST
Last Updated 9 ಮಾರ್ಚ್ 2024, 5:36 IST
ಅಕ್ಷರ ಗಾತ್ರ

ಮೈಸೂರು: ನಗರದ ಕಾಂಗ್ರೆಸ್‌ ಮುಖಂಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ‌ ಶಾಸಕ ವಾಸು (72) ಅನಾರೋಗ್ಯದಿಂದ ಶನಿವಾರ ನಿಧನರಾದರು.

ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರಿಗೆ ಮೂವರು ಪುತ್ರರು ಇದ್ದಾರೆ.

ಜಯಲಕ್ಷ್ಮೀಪುರಂನಲ್ಲಿರುವ ಅವರ ಮನೆಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪರಿಚಯ...

ಅವರು ಚಾಮರಾಜ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರು. ವಿದ್ಯಾವಿಕಾಸ ಎಂಜಿನಿಯರಿಂಗ್‌ ಕಾಲೇಜು ನಡೆಸುತ್ತಿದ್ದರು. ಸ್ಥಳೀಯ ‘ಪ್ರಜಾನುಡಿ’ ಪತ್ರಿಕೆಯನ್ನೂ ಹೊರತರುತ್ತಿದ್ದರು.

ಕಳೆದ‌ (2023) ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು.‌ ಆದರೆ, ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅವರು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಿಂದ ‌ದೂರ ಉಳಿದಿದ್ದರು. ಕೆಲವು ತಿಂಗಳುಗಳ ಹಿಂದೆ, ಲೋಕಸಭಾ ‌ಚುನಾವಣೆ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಪಕ್ಷದಿಂದ ಹೊರವಲಯದ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಪ್ರಮುಖರ ಸಭೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಳಿಕ ಅನಾರೋಗ್ಯದಿಂದಾಗಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ಎಂ.ಎ. ಪದವಿಧರರಾಗಿದ್ದ ಅವರು, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು.

ಚಾಮರಾಜ ವಿಧಾನಸಭಾ ಕ್ಷೇತ್ರದಿಂದ 1999 ಹಾಗೂ 2008ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅವರು 2013ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಪಡುವಾರಹಳ್ಳಿಯಲ್ಲಿ ಮಹಾರಾಣಿ ವಾಣಿಜ್ಯ ಕಾಲೇಜು ಕಟ್ಟಡ, ಜಿಲ್ಲಾಸ್ಪತ್ರೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಎಲ್.ನಾಗೇಂದ್ರ ವಿರುದ್ಧ ಸೋಲನುಭವಿಸಿದ್ದರು. 2023ರ ಚುನಾವಣೆಯಲ್ಲಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ ಆಗಿದ್ದರಾದರೂ ದೊರೆತಿರಲಿಲ್ಲ.

ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದ ಅವರು, ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರೂ ಆಗಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

1983ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಮೈಸೂರು ಮಹಾನಗರಪಾಲಿಕೆ ಸದಸ್ಯರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ಮೇಯರ್‌ ಕೂಡ ಆಗಿದ್ದರು. ‘ನನಗೆ ರಾಜಕೀಯ ಹೊಸದೇನೂ ಆಗಿರಲಿಲ್ಲ. 80ರ ದಶಕದಲ್ಲೇ ಕಾಂಗ್ರೆಸ್‌ನ ಪ್ರಮುಖ ಮುಖಂಡರೊಂದಿಗೆ ಒಡನಾಟ ಹೊಂದಿದ್ದೆ. 1989–90ರಲ್ಲೇ ಮೇಯರ್‌ ಆಗಿದ್ದೆ. ಮನಸ್ಸು ಮಾಡಿದ್ದರೆ ಹೆಚ್ಚಿನ ಅವಧಿಗೆ ಮೇಯರ್‌ ಆಗಿರಬಹುದಿತ್ತು. ಆದರೆ, ಪಕ್ಷದ ಕೆಲವರು ಈ ಸ್ಥಾನವನ್ನು ಹಂಚಿಕೊಂಡೆವು’ ಎಂದು ಅವರು ಹಿಂದೊಮ್ಮೆ ಹೇಳಿಕೊಂಡಿದ್ದರು.

ಸಹಕಾರ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ಅವರು, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗಿದ್ದರು. ವಿದ್ಯಾರ್ಥಿ ಆಗಿದ್ದಾಗಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸವನ್ನು ಅವರು ಬೆಳೆಸಿಕೊಂಡಿದ್ದರು.

ಅವರ ಪುತ್ರರಲ್ಲಿ ಒಬ್ಬರಾದ ಕವೀಶ್ ಗೌಡ 2023ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT