ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಡಹಬ್ಬ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ಕಮಿಷನ್ ಹಾವಳಿ ತಡೆಗೆ ನಿಗಾ

Published : 21 ಆಗಸ್ಟ್ 2024, 6:39 IST
Last Updated : 21 ಆಗಸ್ಟ್ 2024, 6:39 IST
ಫಾಲೋ ಮಾಡಿ
Comments

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ‘ಸಾಂಸ್ಕೃತಿಕ ಕಾರ್ಯಕ್ರಮ ಕೊಡಿಸುವುದಾಗಿ ಕಮಿಷನ್ ವ್ಯವಹಾರ’ ನಡೆಸುವುದನ್ನು ತಡೆಯಲು, ಮಧ್ಯವರ್ತಿಗಳು ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿಗಳ ಮೇಲೆ ಜಿಲ್ಲಾಡಳಿತ ನಿಗಾ ವಹಿಸಲಿದೆ.

ಹಿಂದಿನ ವರ್ಷ, ಪ್ರಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್‌ ಅವರಿಗೆ ಕಾರ್ಯಕ್ರಮ ಕೊಡಿಸಲು ಕಮಿಷನ್‌ ಕೇಳಿದ್ದ ಘಟನೆ ನಡೆದಿತ್ತು. ‘ಸಾಂಸ್ಕೃತಿಕ ಉಪ ಸಮಿತಿಯವರೆಂದು ಹೇಳಿಕೊಂಡು ತಾರಾನಾಥರನ್ನು ಸಂಪರ್ಕಿಸಿದ್ದ ವ್ಯಕ್ತಿಯೊಬ್ಬರು, ಕಾರ್ಯಕ್ರಮಕ್ಕೆ ₹ 8 ಲಕ್ಷ ಕೇಳಿ ಸಾರ್, ಐದು ನೀವಿಟ್ಕೊಳಿ, ಮೂರು ನಮಗೆ ಕೊಡಿ’ ಎಂದು ಕೇಳಿದ್ದರು. ಒಪ್ಪದ ತಾರಾನಾಥರು ಬೈದು ಬಿಸಿ ಮುಟ್ಟಿಸಿದ್ದರು. ಇದು ದೊಡ್ಡ ವಿವಾದವಾಗಿತ್ತು.

‘ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ’ ಎಂದು ಸರ್ಕಾರ ಹೇಳಿತ್ತು. ಆ ‘ಅನಾಮಧೇಯ ವ್ಯಕ್ತಿ’ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌ ನೀಡಿದ್ದ ದೂರಿನ ಅನ್ವಯ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆದಿತ್ತು. ನಾಡಹಬ್ಬದಂತಹ ಉತ್ಸವದಲ್ಲೂ ಕಮಿಷನ್‌ ಕಾಟ ವ್ಯಾಪಕವಾಗುತ್ತಿದೆಯೇ ಎಂಬ ಪ್ರಶ್ನೆ ಕೇಳಿಬಂದಿತ್ತು. ಇದು ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು. ಆದರೆ, ಕಮಿಷನ್ ಕೇಳಿದ ಅನಾಮಧೇಯನ ಬಂಧನ ಇದುವೆಗೂ ಆಗಿಲ್ಲ!

ಬಹಳ ಬೇಡಿಕೆ:

ದಸರೆಯಲ್ಲಿ ಅಂಬಾವಿಲಾಸ ಅರಮನೆ ಆವರಣದ ವೇದಿಕೆ, ಪುರಭವನ, ಜಗನ್ಮೋಹನ ಅರಮನೆ, ಚಿಕ್ಕ ಗಡಿಯಾರ, ಕಲಾಮಂದಿರ, ಕಲಾಮಂದಿರ ಆವರಣದ ಕಿರುರಂಗಮಂದಿರ, ನಾದಬ್ರಹ್ಮ ಸಂಗೀತ ಸಭಾ, ಗಾನಭಾರತಿ ವೇದಿಕೆ, ‘ನಟನ’ ರಂಗಶಾಲೆ, ರಮಾಗೋವಿಂದ ರಂಗಮಂದಿರ ಹಾಗೂ ನಂಜನಗೂಡಿನ ಅರಮನೆ ಮಾಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅರಮನೆ ಆವರಣದ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಬಹಳಷ್ಟು ಕಲಾವಿದರು ಹಾಗೂ ಕಲಾತಂಡದವರು ಬೇಡಿಕೆ ಇಡುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಳ್ಳುವ ಮಧ್ಯವರ್ತಿಗಳು, ಪ್ರಭಾವ ಬೀರಲು ಪ್ರಯತ್ನಿಸುವುದು ಕಂಡುಬರುತ್ತಿದೆ.

‘ಕಮಿಷನ್‌ ದಂಧೆಗೆ ಅವಕಾಶ ಕೊಡುವುದಿಲ್ಲ. ಮಧ್ಯವರ್ತಿಗಳು ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್‌ನವರ ಮೇಲೆ ನಿಗಾ ವಹಿಸಲಾಗುವುದು. ಸಾಂಸ್ಕೃತಿಕ ಉಪ ಸಮಿತಿ ರಚನೆಯಾದ ನಂತರ ಚರ್ಚಿಸಲಾಗುವುದು. ಪ್ರಖ್ಯಾತ ಕಲಾವಿದರನ್ನು ನೇರವಾಗಿ ಸಂಪರ್ಕಿಸಿ ಆಹ್ವಾನಿಸುತ್ತೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜೀವ ತಾರಾನಾಥ್ ಅವರ ಬಳಿ ಕಮಿಷನ್ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಸ್ಥಳ ಮಹಜರು ನಡೆಸಿ ಮಾಹಿತಿಯನ್ನೂ ಪಡೆದಿದ್ದರು. ಈಗ, ರಾಜೀವ ಅವರು ನಮ್ಮ ನಡುವೆ ಇಲ್ಲ. ಸರ್ಕಾರಕ್ಕೆ ಮುಜುಗರ ತರುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮುಂಜಾಗ್ರತೆ ವಹಿಸಲಾಗುವುದು’ ಎಂದರು.

ಮಧ್ಯವವರ್ತಿಗಳು ಸಂಪರ್ಕಿಸಿದರೆ ಇಲಾಖೆಯ ಗಮನಕ್ಕೆ ತರುವಂತೆ ಕಲಾವಿದರನ್ನು ಹಾಗೂ ತಂಡಗಳನ್ನು ಮಾಧ್ಯಮ ಪ್ರಕಟಣೆಯ ಮೂಲಕ ಕೋರಲಾಗುವುದು
ಎಂ.ಡಿ. ಸುದರ್ಶನ್‌ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT