ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚನ್ನಕೇಶವ’ನ ಸೊಬಗಿಗೆ ಜಾಗತಿಕ ಮಾನ್ಯತೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯ ಹೆಮ್ಮೆ
Published 20 ಸೆಪ್ಟೆಂಬರ್ 2023, 6:31 IST
Last Updated 20 ಸೆಪ್ಟೆಂಬರ್ 2023, 6:31 IST
ಅಕ್ಷರ ಗಾತ್ರ

ಮೈಸೂರು: ವಿಶಿಷ್ಟ ಶಿಲ್ಪಕಲೆಯ ಸೊಬಗಿನ ತಾಣವಾದ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲಕ್ಕೆ ಜಾಗತಿಕ ಮಾನ್ಯತೆ ದೊರೆತಿರುವುದು, ಜಿಲ್ಲೆಗೆ ಹೆಮ್ಮೆ ಮೂಡಿಸಿದೆ.

‘ಯುನೆಸ್ಕೊ’ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯೊಂದಿಗೆ ಸಣ್ಣ ಊರಾದ ಸೋಮನಾಥಪುರ ಅಧಿಕೃತವಾಗಿ ವಿಶ್ವದ ಗಮನಸೆಳೆಯುವಂತಾಗಿದೆ.

12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಈ ದೇಗುಲಕ್ಕೆ ಹೋದ ವರ್ಷ ಸೆ.16ರಂದು ಯುನೆಸ್ಕೊ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು. ಟಿಯಾಂಗ್ ಕಿಯಾನ್ ಬೂನ್ ನೇತೃತ್ವದ ತಂಡಕ್ಕೆ ಇನ್ಫೊಸಿಸ್‌ ಫೌಂಡೇಶನ್‌ನ ಸುಧಾ ಮೂರ್ತಿ, ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ರಾಜ್ಯ ಪ್ರಾಚ್ಯವಸ್ತು ಅಧಿಕಾರಿಗಳು ದೇವಾಲಯದ ಶಿಲ್ಪಕಲೆ, ಐತಿಹ್ಯಗಳು ಹಾಗೂ ಹೊಯ್ಸಳರ ಕಾಲದ ಶಿಲ್ಪಕಲೆ, ಕುಸುರಿ ಕೆತ್ತನೆಗಳ ಬಗ್ಗೆ ವಿವರ ನೀಡಿದ್ದರು.

ದೇವಾಲಯದ ರಚನೆ, ಗರ್ಭಗುಡಿ, ಪ್ರಾಂಗಣ, ಕೆತ್ತನೆ ಕುಸುರಿ ಸೇರಿದಂತೆ ಶಿಲ್ಪಕಲೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ್ದ ತಂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿತ್ತು. ಅದಕ್ಕೆ ಮಾನ್ಯತೆ ದೊರೆತಿದೆ. ಇದರೊಂದಿಗೆ ಈ ತಾಣದ ಪ್ರಖ್ಯಾತಿ ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಆಶಿಸಲಾಗುತ್ತಿದೆ.

ಅಭಿವೃದ್ಧಿಗೆ ಸಹಕಾರಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಆಯುಕ್ತ ಎ.ದೇವರಾಜ್, ‘ಶಿಲ್ಪಕಲೆಗೆ ಹೆಸರಾದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ಹೆಮ್ಮೆಯ ಸಂಗತಿ. ಇದರಿಂದ ಆ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ವಿದೇಶಿ ಪ್ರವಾಸಿಗರ ಭೇಟಿಯ ಪ್ರಮಾಣ ಹೆಚ್ಚಾಗಿ ಸ್ಥಳೀಯ ವ್ಯಾಪಾರ– ವಹಿವಾಟು ಸುಧಾರಿಸುತ್ತದೆ ಹಾಗೂ ಸ್ಥಳೀಯರಿಗೆ ಆರ್ಥಿಕ ಶಕ್ತಿ ಸಿಗಲಿದೆ. ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರವಾದ ಹೋಟೆಲ್ ಉದ್ಯಮ ವೃದ್ಧಿಸಲಿದೆ. ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ. ಕರಕುಶಲ ವಸ್ತುಗಳ ತಯಾರಿಕೆಯ ಗುಡಿ ಕೈಗಾರಿಕೆಗೂ ಪ್ರೇರಣೆ ದೊರೆಯಲಿದೆ. ನಮ್ಮ ಹೆಮ್ಮೆಯ ಶಿಲ್ಪಕಲೆಯನ್ನು ಜಾಗತಿಕವಾಗಿ ತಿಳಿಸಿಕೊಡಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

‘ತಜ್ಞರು ಯುನೆಸ್ಕೊ ಮಾನದಂಡಗಳ ಪ್ರಕಾರ ಪರಿಶೀಲಿಸಿದ್ದರು. ಅಲ್ಲಿನ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಅಲ್ಲಿ ಪೂಜಿಸುವವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. 2018ರಿಂದ ನಡೆಯುತ್ತಿದ್ದ ಈ ಪ್ರಯತ್ನ ಈ ಬಾರಿ ಕೈಗೂಡಿದೆ. ಇಲಾಖೆಯಿಂದ ಸಮಗ್ರ ವರದಿಯ ದಾಖಲೆಗಳನ್ನು 2 ಸಂಪುಟಗಳಲ್ಲಿ ಸಲ್ಲಿಸಿದ್ದೆವು. ಅದನ್ನು ಪರಿಶೀಲಿಸಿದ ನಂತರ ತಜ್ಞರ ತಂಡ ಭೇಟಿ ನೀಡಿತ್ತು. ಪುರಾತತ್ವ ಶೈಲಿ, ಇತಹಾಸ ಮೊದಲಾದವುಗಳನ್ನು ಗುರುತಿಸಿ ಮಾನ್ಯತೆ ನೀಡಲಾಗಿದೆ. ಇದನ್ನು ಗಮನಿಸಿದರೆ, ಬೇರಾವ ತಾಣದಲ್ಲೂ ಇಲ್ಲದಂತಹ ಮೌಲ್ಯ ಸೋಮನಾಥಪುರದಲ್ಲಿದೆ ಎಂದೇ ಅರ್ಥ’ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಸೂರಿನಿಂದ 38 ಕಿ.ಮೀ. ದೂರದಲ್ಲಿರುವ ಈ ಚನ್ನಕೇಶವ ದೇವಾಲಯದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ₹ 3.40 ಕೋಟಿ ಮೊತ್ತದ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಲಾಗಿದೆ. ಸದ್ಯ ರಜಾ ದಿನಗಳಲ್ಲಿ 300ರಿಂದ 400 ಮಂದಿ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ.

ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ
ಸೋಮನಾಥ‍ಪುರ ದೇಗುಲಕ್ಕೆ ಯುನೆಸ್ಕೊ ಪಾರಂಪರಿಕ ಕಟ್ಟಡಗಳ ಮಾನ್ಯತೆ ದೊರೆತಿದ್ದು ಹೆಮ್ಮೆಯ ವಿಷಯ. ನಮ್ಮ ಕಲೆ ಸಾಹಿತ್ಯ ಹಾಗೂ ಶಿಲ್ಪಕಲೆಯ ಮಹತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ
ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಎ. ದೇವರಾಜ್‌
ಎ. ದೇವರಾಜ್‌

ಹೋದ ವರ್ಷ ಭೇಟಿ ನೀಡಿದ್ದ ಯುನೆಸ್ಕೊ ತಂಡ 2018ರಿಂದ ನಡೆದ ಪ್ರಯತ್ನಕ್ಕೆ ಫಲ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯ

ನಮ್ಮ ಪರಂಪರೆ ಶಿಲ್ಪಕಲೆಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿರುವುದು ಬಹಳ ಮಹತ್ವದ್ದು. ಈ ತಾಣದಲ್ಲಿ ಮೂಲಸೌಲಭ್ಯ ಒದಗಿಸಲು ಸರ್ಕಾರ ಕ್ರಮ ವಹಿಸಬೇಕಾಗುತ್ತದೆ
ಎ. ದೇವರಾಜ್ ಆಯುಕ್ತ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
RAJANI M.
RAJANI M.

ವಿರೋಧ ವ್ಯಕ್ತಪಡಿಸಿದ್ದ ಜನಪ್ರತಿನಿಧಿಗಳು! ‘ಗ್ರಾಮಸ್ಥರಿಗೆ ತೊಂದರೆ ಆಗುವುದಾದರೆ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶ್ವರ ದೇವಾಲಯವನ್ನು ಯುನೆಸ್ಕೊ ಮಾನ್ಯತೆ ಪಟ್ಟಿಗೆ ಸೇರಿಸಬಾರದು’ ಎಂದು ಹಿಂದಿನ ಶಾಸಕ ಎಂ.ಅಶ್ವಿನ್‌ಕುಮಾರ್‌ ಹೋದ ವರ್ಷ ಜುಲೈನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಒತ್ತಾಯಿಸಿದ್ದರು. ‘ಮಾನ್ಯತೆಗೆ ಒಳಪಡುವ ದೇಗುಲಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದಿಲ್ಲ. ಈಗ ಸಿಗುವ ಬಿಡಿಗಾಸಿಗೋಸ್ಕರ ಮುಂದಿನ‌ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಮನೆ ದುರಸ್ತಿ ನಿರ್ಮಾಣಕ್ಕೂ ಕಷ್ಟವಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಂಪಿಯ ನಿದರ್ಶನ ಕಣ್ಣ ಮುಂದಿದೆ’ ಎಂದು ಸಂಸದ ಪ್ರತಾಪ ಸಿಂಹ ಕಳವಳ ವ್ಯಕ್ತಪಡಿಸಿದ್ದರು. ‘ಪಾರಂಪರಿಕ ತಾಣಗಳ ಸುತ್ತ ಅಭಿವೃದ್ಧಿಗೆ ಈಗಲೂ‌ ನಿಷೇಧವಿಲ್ಲ; ನಿರ್ಬಂಧವಷ್ಟೆ ಇದೆ’ ಎಂದು ಆಗಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದರು. ಈಗಿನ ಶಾಸಕ ಡಾ.ಎಚ್‌.ಸಿ. ಮಹದೇವಪ್ಪ ಹರ್ಷ ವ್ಯಕ್ತಪಡಿಸಿ ‘ಟ್ವೀಟ್’ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT