ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

250ಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನ

ರಂಗಾಯಣದ ಸುತ್ತಲೂ 250ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
Last Updated 21 ನವೆಂಬರ್ 2022, 6:21 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರಂಗಾಯಣದ ಭೂಮಿಗೀತದಲ್ಲಿ ‘ಟಿಪ್ಪು ನಿಜಕನಸುಗಳು’ ನಾಟಕದ ಮೊದಲ ಪ್ರದರ್ಶನವು 250ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಭಾನುವಾರ ಪ್ರದರ್ಶನಗೊಂಡಿತು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚನೆ ಹಾಗೂ ನಿರ್ದೇಶನದ ಈ ನಾಟಕವನ್ನು ರೆಪರ್ಟರಿ ಕಲಾವಿದರು ಅಭಿನಯಿಸಿದರು. ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಲೇಖಕ ಡಾ.ಪ್ರಧಾನ ಗುರುದತ್ತ, ಶಾಸಕ ಕೆ.ಜಿ.ಬೋಪಯ್ಯ, ಆರ್‌ಎಸ್‌ಎಸ್‌ ಮುಖಂಡ ಮಾ.ವೆಂಕಟರಾಮ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ, ಸಂಸದ ಪ್ರತಾಪ ಸಿಂಹ ಪತ್ನಿ ಅರ್ಪಿತಾ ಸಿಂಹ ವೀಕ್ಷಿಸಿದರು.

ಫೋಟೊ, ವಿಡಿಯೊಗೆ ನಿಷೇಧ: ಆವರಣದ ಸುತ್ತಲೂ ಪೊಲೀಸ್‌ ವಾಹನಗಳೇ ಹೆಚ್ಚಿದ್ದವು. ಟಿಕೆಟ್‌ ಇದ್ದವರಿಗೆ ಮಾತ್ರವೇ ಪ್ರವೇಶ ನೀಡಲಾಯಿತು. ಪ್ರದರ್ಶನಕ್ಕೆ ಕೆಲವೇ ನಿಮಿಷಗಳಿದ್ದಾಗ ಪತ್ರಕರ್ತರು ಹಾಗೂ ಛಾಯಾಗ್ರಾಹಕರಿಗೆ ಅವಕಾಶ ಕೊಡಲಾಯಿತು. ಫೋಟೊ ಹಾಗೂ ವಿಡಿಯೊ ಮಾಡಲು ನಿಷೇಧ ಹೇರಲಾಗಿತ್ತು. ‘ಭೂಮಿಗೀತ’ದ 209 ಸೀಟುಗಳೂ ಭರ್ತಿಯಾಗಿದ್ದವು.

ಬಿಗಿಭದ್ರತೆ: ಡಿಸಿಪಿಗಳಾದ ಪ್ರದೀಪ್‌ ಗುಂಟಿ ಹಾಗೂ ಎಂ.ಎಸ್‌.ಗೀತಾ ಪ್ರಸನ್ನ ನೇತೃತ್ವದಲ್ಲಿ ಮೀಸಲು ಪಡೆಯ 250ಕ್ಕೂ ಹೆಚ್ಚು ಪೊಲೀಸರನ್ನು ರಂಗಾಯಣ ಹಾಗೂ ಕಲಾಮಂದಿರದ ಸುತ್ತ ನಿಯೋಜಿಸಲಾಗಿತ್ತು. ಹುಣಸೂರು ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆಯಲ್ಲೂ ಪೊಲೀಸರಿದ್ದರು.

ಬಸವಲಿಂಗಯ್ಯ ಆಕ್ರೋಶ: ಟಿಕೆಟ್ ಇದ್ದರೂ ಪ್ರವೇಶ ನೀಡದ ಪೊಲೀಸರೊಂದಿಗೆ ರಂಗಕರ್ಮಿ ಸಿ.ಬಸವಲಿಂಗಯ್ಯ ಹಾಗೂ ಪತ್ರಕರ್ತ ಟಿ.ಗುರುರಾಜ್ ಮಾತಿನ ಚಕಮಕಿ ನಡೆಸಿದರು. ದ್ವಾರದಲ್ಲೇ ಧರಣಿ ಕುಳಿತ ಅವರು, ‘ಅನುಮಾನವಿದ್ದರೆ ನಮ್ಮೊಂದಿಗೆ ಪೊಲೀಸರೂ ಬರಲಿ’ ಎಂದು ಮನವರಿಕೆ ಮಾಡಿದ ನಂತರ ಪ್ರವೇಶ ಕೊಡಲಾಯಿತು.

ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪ್ರವೇಶ ದ್ವಾರದ ಬಳಿ ಎಲ್ಲರನ್ನೂ ಸ್ವಾಗತಿಸಿದರು.

‘ನಾಟಕ ಪ್ರದರ್ಶನಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸದಂತೆ ರಂಗಾಯಣ ಅರ್ಜಿ ಸಲ್ಲಿಸಿತ್ತು. 200ಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌ಲೈನ್‌ ಮೂಲಕ ಮಾರಾಟವಾಗಿವೆ. ಸೋಮವಾರವೂ ಪ್ರದರ್ಶನ ಇದೆ’ ಎಂದು ಕಾರ್ಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT