ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಶೀಘ್ರ ಆರಂಭ

ಸಾತಗಳ್ಳಿ ವಿಟಿಯು ಕಚೇರಿಯಲ್ಲಿ ಕುವೆಂಪು ಮಲ್ಟಿಮೀಡಿಯಾ ಸೆಂಟರ್‌ ಆರಂಭ
Published 26 ಮೇ 2024, 0:28 IST
Last Updated 26 ಮೇ 2024, 0:28 IST
ಅಕ್ಷರ ಗಾತ್ರ

ಮೈಸೂರು: ‘ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಉನ್ನತಮಟ್ಟದ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಗೊಳ್ಳಲಿದ್ದು, ದೇಶದಲ್ಲಿ ಮೊಟ್ಟ ಮೊದಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಈ ಸೌಲಭ್ಯ ನೀಡುವ ಹೆಗ್ಗಳಿಕೆಗೆ ಪಾತ್ರವಾಗಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಹೇಳಿದರು.

‘ವಿಶ್ವವಿದ್ಯಾಲಯದಿಂದ ಕೆಲ ಕೆಲಸಗಳು ಬಾಕಿಯಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಜೂನ್‌ 24ರಂದು ಆರಂಭಗೊಳ್ಳಲಿದೆ’ ಎಂದು ಇಲ್ಲಿನ ಸಾತಗಳ್ಳಿಯ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಕುವೆಂಪು ಮಲ್ಟಿಮೀಡಿಯಾ ಸೆಂಟರ್‌ ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಎಂಬಿಎ ವಿಭಾಗದ ಡಿಜಿಟಲ್ ಮಾರ್ಕೆಟಿಂಗ್ ಪ್ರಯೋಗಾಲಯಗಳ ಉದ್ಘಾಟಿಸಿ ತಿಳಿಸಿದರು.

‘ವಿಶ್ವವಿದ್ಯಾಲಯದಿಂದ ಸಂಶೋಧನೆ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಉತ್ತಮ ದೂರದೃಷ್ಟಿಯುಳ್ಳವರ ಮುಂದಾಳತ್ವದಲ್ಲಿ ನಾಲ್ಕು ಸಂಶೋಧನಾ ಕ್ಲಸ್ಟರ್‌ ಆರಂಭಿಸಲಾಗುವುದು. ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ ವಿಭಾಗದಲ್ಲಿ ಕ್ಲಸ್ಟರ್‌ ಆರಂಭಗೊಳ್ಳಲಿದ್ದು, ಜೂನ್‌ 15ರಂದು ಅನುಮತಿ ದೊರಕಲಿದೆ. ತಲಾ ₹25 ಲಕ್ಷ ಮೂಲಧನ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಸಂಶೋಧನೆ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ಕ್ಷೇತ್ರಗಳ 10 ಪರಿಣತರ ತಂಡವನ್ನು ರಚಿಸಲಾಗುತ್ತಿದೆ. ನಾನು ಅಧಿಕಾರ ವಹಿಸಿಕೊಂಡ ಒಂದೂವರೆ ವರ್ಷದ ಅವಧಿಯಲ್ಲಿ 2,500 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ನೀಡಲಾಗಿದೆ. ಸಂಶೋಧನೆ ಇನ್ನಷ್ಟು ತೀವ್ರಗತಿಯಲ್ಲಿ ಸಾಗಬೇಕು. ವಿಶ್ವವಿದ್ಯಾಲಯವೂ ಆಡಳಿತಾತ್ಮಕ ವಿಚಾರದಲ್ಲಿಯೂ ಬಹಳಷ್ಟು ಮಂಚೂಣಿಯಲ್ಲಿದ್ದು, ಪ್ರಾಯೋಗಿಕ ಪರೀಕ್ಷೆಗಳು ಮುಗಿದ 2 ಗಂಟೆಯಲ್ಲೇ ಫಲಿತಾಂಶ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ವಾಟ್ಸ್ಆ್ಯಪ್‌ನಲ್ಲಿಯೇ ಫಲಿತಾಂಶ ನೋಡಬಹುದು’ ಎಂದು ಹೇಳಿದರು.

30ರೊಳಗೆ ರ್‍ಯಾಂಕಿಂಗ್‌: ‘ವಿಶ್ವವಿದ್ಯಾಲಯವು ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 52ನೇ ಸ್ಥಾನ, ವಿಶ್ವವಿದ್ಯಾಲಯಗಳ ಪೈಕಿ 63, ಮ್ಯಾನೆಜ್‌ಮೆಂಟ್‌ ಅಧ್ಯಯನದಲ್ಲಿ 95, ಒಟ್ಟಾರೆ ರ್‍ಯಾಂಕಿಂಗ್‌ನಲ್ಲಿ 93 ನೇ ಸ್ಥಾನದಲ್ಲಿದೆ. ಈ ವರ್ಷ ಎಂಜಿನಿಯರಿಂಗ್ ವಿಭಾಗದಲ್ಲಿ 30ರೊಳಗೆ ರ್‍ಯಾಂಕಿಂಗ್‌ ತರುವ ಉದ್ದೇಶ ಹೊಂದಿದ್ದೇವೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಮಾತನಾಡಿ, ‘ವಿಟಿಯು ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಉತ್ತಮ ಸಾಧನೆಯತ್ತ ಯುವಜನತೆ ಮುಂದಾಗಬೇಕು. ಗುರಿಯನ್ನು ಹೊಂದಿ, ಪರಿಶ್ರಮ ಹಾಕಿದರೆ ಯಶಸ್ಸು ಖಂಡಿತ ದೊರೆಯುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವ ಬಿ.ಇ.ರಂಗಸ್ವಾಮಿ, ಪರೀಕ್ಷಾಂಗ ಕುಲಸಚಿವ ಟಿ.ಎನ್‌.ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಪ್ರಾದೇಶಿಕ ಕಚೇರಿ ನಿರ್ದೇಶಕರಾದ ಟಿ.ಪಿ.ರೆಣುಕಾ ಮೂರ್ತಿ ಇದ್ದರು.

ಸಂಶೋಧನಾ ಕ್ಲಸ್ಟರ್‌ ಆರಂಭಕ್ಕೆ ಯೋಜನೆ ವಿವಿಧ ಕ್ಷೇತ್ರಗಳ 10 ಪರಿಣತರ ತಂಡ ರಚನೆ ಆಡಳಿತ, ಶಿಕ್ಷಣಕ್ಕೆ ವಿಟಿಯು ಆದ್ಯತೆ

ಎಂ.ಟೆಕ್‌ಗೆ ಐಐಎಸ್‌ಸಿ ಮಾದರಿ’ ‘ಎಂ.ಟೆಕ್‌ ಅಧ್ಯಯನಕ್ಕೆ ಐಐಎಸ್‌ಸಿ ಮಾದರಿಯನ್ನು ಅನುಸರಿಸಲು ಸಿದ್ಧರಾಗಿದ್ದು ಅದಕ್ಕಾಗಿ 10 ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ 10 ಎನ್‌ಐಟಿ ಐಐಟಿಗಳ ಪಠ್ಯಕ್ರಮಗಳನ್ನು ಪರಿಶೀಲಿಸಲಾಗಿದೆ’ ಎಂದು  ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ತಿಳಿಸಿದರು. ‘ಎಂ.ಟೆಕ್‌ ನಲ್ಲಿ ಮೆಕಾನಿಕಲ್‌ ಸಿವಿಲ್ ಎಲೆಕ್ಟ್ರಾನಿಕ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ವಿಭಾಗಗಳ ಪ್ರವೇಶಾತಿ ಮಾತ್ರ ನೀಡಲಿದ್ದು ಉಳಿದ ವಿಷಯಗಳನ್ನು ಅದರೊಳಗೆ ಕಲಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT