ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ‘ಬಡವರ ಫ್ರಿಡ್ಜ್’ಗೆ ಹೆಚ್ಚಿದ ಬೇಡಿಕೆ

ಆಧುನಿಕತೆಯ ಭರಾಟೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ
Published 22 ಏಪ್ರಿಲ್ 2024, 6:10 IST
Last Updated 22 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಸಿಂಧನೂರು: ‘ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿ ಬಾಯಾರಿಕೆ ತಣಿಸಿಕೊಳ್ಳಲು ಪರದಾಡುತ್ತಿದ್ದಾರೆ. ಫ್ರಿಡ್ಜ್‌ನ ನೀರು ಕೆಲವರಿಗೆ ಗಂಟಲು ನೋವುಂಟು ಮಾಡುತ್ತಿದೆ ಎಂಬ ಕಾರಣಕ್ಕಾಗಿ ಮತ್ತು ಮಣ್ಣಿನ ಮಡಕೆಯಲ್ಲಿ ತುಂಬಿರುವ ನೀರು ತಂಪು ಹಾಗೂ ಆರೋಗ್ಯಕ್ಕೂ ಉತ್ತಮ ಎಂಬ ಉದ್ದೇಶದಿಂದ ‘ಬಡವರ ಫ್ರಿಡ್ಜ್’ಗೆ ಭಾರೀ ಬೇಡಿಕೆ ಬಂದಿದೆ.

ಬೇಸಿಗೆಯ ಬಿಸಿಲ ಧಗೆ ತಾಳಲಾರದೇ ಜನರು ಪರಿತಪಿಸುತ್ತಿದ್ದಾರೆ. ಪ್ರಖರ ಬಿಸಿಲಿನ ಹೊಡೆತಕ್ಕೆ ಹೊಟ್ಟೆಗೆ ತಂಪು ನೀರು, ಪಾನೀಯ ಬೇಕೆನಿಸುತ್ತಿದೆ. ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಿದೆ. ಬಡವರ ಫ್ರಿಡ್ಜ್ ಎಂದೇ ಹೆಸರಾಗಿರುವ ಮಣ್ಣಿನ ಮಡಕೆಗಳನ್ನು ಅನಾದಿ ಕಾಲದಿಂದಲೂ ಬಡವರು ಬಳಸುತ್ತಿದ್ದಾರೆ. ಆಧುನಿಕತೆಯ ಭರಾಟೆ ನಡುವೆಯೂ ಮಣ್ಣಿನ ಮಡಕೆಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.

ಯಂತ್ರೋಪಕರಣದ ಫೈಬರ್ ಫ್ರಿಡ್ಜ್, ಕೂಲರ್‌ಗಳ ನಡುವೆಯೂ ಮಣ್ಣಿನ ಮಡಕೆ ತನ್ನ ಬೇಡಿಕೆ ಉಳಿಸಿಕೊಂಡಿದೆ. ಬಿರುಬೇಸಿಗೆಯಲ್ಲಿ ನೀರು ಕಾಯಿಸಬೇಕಾಗಿಲ್ಲ. ವಾತಾವರಣದ ತಾಪಮಾನಕ್ಕೆ ಮನೆಯಲ್ಲಿರುವ ಫಿಲ್ಟರ್, ಸ್ಟೀಲಿನ ಪಾತ್ರೆಗಳ್ಲಲಿರುವ ನೀರು ಬೆಚ್ಚಗಾಗುತ್ತವೆ. ಬಾಯಾರಿದಾಗ ಬಯಸಿ ಕುಡಿಯುವ ನೀರು ಬಿಸಿ ಆಗುವುದರಿಂದ ಹೊಟ್ಟೆಗೆ ಮತ್ತಷ್ಟು ಕಿಚ್ಚು ಹಚ್ಚಿದಂತಾಗುತ್ತದೆ. ಹೊಟ್ಟೆ ತಣ್ಣಗಾಗಿಸಲು ಮತ್ತು ದಣಿವು ನಿವಾರಣೆಗೆ ಪ್ರತಿಯೊಬ್ಬರೂ ತಂಪು ನೀರು ಬಯಸುತ್ತಾರೆ. ಮಣ್ಣಿನ ಮಡಕೆ ಬೇಸಿಗೆಯಲ್ಲಿ ನೀರನ್ನು ತಣ್ಣಗೆ ಇಡಬಲ್ಲದು. ಈಚೆಗೆ ಜನರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಕೃತಕ ತಂಪು ಪಾನೀಯಕ್ಕಿಂತ ನೈಸರ್ಗಿಕವಾಗಿ ತಂಪಾಗುವ ಮಡಕೆಯ ನೀರಿನ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಮಳೆ ಮತ್ತು ಚಳಿಗಾಲದಲ್ಲಿ ₹ 50 ರಿಂದ 200 ರವರೆಗೆ ಇರುವ ಮಣ್ಣಿನ ಮಡಕೆಗಳು ಬೇಸಿಗೆ ಕಾಲದಲ್ಲಿ ಮಾತ್ರ ₹ 200 ದಿಂದ ₹1000 ರವರೆಗೆ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.

ಮಹತ್ವ ಕಳೆದುಕೊಂಡ ಕುಂಬಾರಿಕೆ: ಹಿಂದೆ ಕುಂಬಾರಿಕೆ ನಡೆಯುತ್ತಿತ್ತು. ಆಗ ಮನೆಗೆ ಅಗತ್ಯವಿರುವ ಮಡಕೆಗಳನ್ನು ಕುಂಬಾರರಿಂದ ನೇರವಾಗಿ ಖರೀದಿಸಿ ತಂದು ಬಳಸಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕುಂಬಾರಿಕೆ ಮಹತ್ವ ಕಳೆದುಕೊಂಡಿದೆ. ಆದರೂ ಕೆಲ ಕುಂಬಾರ ಕುಟುಂಬಗಳು ಸ್ವತಃ ತಯಾರಿಸಿದ ತರಹೇವಾರಿ ಮಡಕೆಗಳನ್ನು ರಸ್ತೆ ಬದಿಗಳಲ್ಲಿ ಇಟ್ಟು ಮಾರಾಟಕ್ಕೆ ಮುಂದಾಗಿರುವುದು ವಿಶೇಷ. ಮಡಕೆಗಳ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಬೆಲೆ ಹೆಚ್ಚಾಗಿದ್ದರೂ ಜನರು ಸಂತೆ ಹಾಗೂ ಮಾರುಕಟ್ಟೆಗೆ ಹೋಗಿ ಖರೀದಿಸುತ್ತಿರುವುದು ಕಂಡು ಬರುತ್ತಿದೆ.

ಮಣ್ಣಿನ ಕೊಡಗಳಿಗೆ ಬೇಡಿಕೆ: ಮಾರುಕಟ್ಟೆಗೆ ಬರುತ್ತಿರುವ ಮಡಕೆಗೆ ನಲ್ಲಿಯನ್ನು ಅಳವಡಿಸಲಾಗಿದೆ. ಹೂಜಿಗಳು ಸಹ ಲಭ್ಯ. ಕಲಾತ್ಮಕ ಕುಂಡಗಳಿಗಾದರೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆ. ಬೇಸಿಗೆ ಮುಗಿಯುವವರೆಗೂ ಮಣ್ಣಿನ ಕೊಡಗಳಿಗೆ ಬೇಡಿಕೆ ಹೆಚ್ಚಿದೆ. ಬೇಸಿಗೆ ಧಗೆ ಹೆಚ್ಚಿರುವುದರಿಂದ ಮಡಕೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದ್ದು, ಕುಂಬಾರರ ವ್ಯಾಪಾರ ಗರಿಗೆದರಿದೆ.

‘ಮಳೆ ಮತ್ತು ಚಳಿಗಾಲದಲ್ಲಿ ನಮ್ಮ ಉದ್ಯೋಗಕ್ಕೆ ತೊಂದರೆ ಆಗುತ್ತಿದೆ. ಆದರೆ ಬೇಸಿಗೆಯ ನಾಲ್ಕು ತಿಂಗಳಲ್ಲಿ ಮಾತ್ರ ಉತ್ತಮ ವ್ಯಾಪಾರವಾಗುತ್ತಿದೆ. ಈ ವರ್ಷ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ದುಡಿಮೆಯಾಗಿದೆ. ಇತ್ತೀಚಿಗೆ ಆಂಧ್ರಪ್ರದೇಶದಿಂದ ನಳ ಇರುವ ಮಡಿಕೆಗಳು ತಯಾರಾಗಿ ಮಾರುಕಟ್ಟೆಗೆ ಬರುತ್ತಿದ್ದು ನಾವು ಸಹ ಅವುಗಳನ್ನೇ ಖರೀದಿಸಿ ಮಾರುತ್ತಿದ್ದೇವೆ. ಒಂದು ಮಡಿಕೆಗೆ ₹ 200 ರಿಂದ ₹ 1000 ರವರೆಗೆ ದರ ಇದೆ
ಹಂಪಮ್ಮ ಕುಂಬಾರ ಸುಕಾಲಪೇಟೆ ರಸ್ತೆಯ ವ್ಯಾಪಾರಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT