ಮಾನ್ವಿ: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದ ಜಗನ್ನಾಥದಾಸರ ಸನ್ನಿಧಾನದಲ್ಲಿ ಶುಕ್ರವಾರ ಜಗನ್ನಾಥದಾಸರ 215ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ರಥೋತ್ಸವ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಪ್ರಭಾತ, ಸಾಮೂಹಿಕ ಹರಿಕಾಥಾಮೃತಸಾರ ಪಾರಾಯಣ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ವಿದ್ವಾಂಸರಿಂದ ವಿಶೇಷ ಉಪನ್ಯಾಸ ಹಾಗು ದಾಸವಾಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಗನ್ನಾಥದಾಸರ ಸನ್ನಿಧಾನದ ಆವರಣದಲ್ಲಿ ರಥೋತ್ಸವ ಜರುಗಿತು.
ಸ್ವಸ್ತಿವಾಚನ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.