ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಾವರಿ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು’

Last Updated 9 ಏಪ್ರಿಲ್ 2021, 2:35 IST
ಅಕ್ಷರ ಗಾತ್ರ

ಮಸ್ಕಿ: ‘5 ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ 5 (ಎ) ಕಾಲುವೆ ಯೋಜನೆ ಬಗ್ಗೆ ಗಮನ ಹರಿಸದೆ ಈಗ ಚುನಾವಣೆ ಸಂದರ್ಭದಲ್ಲಿ ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಆರೋಪಿಸಿದರು.

ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಅವರನ್ನು ಪ್ರತಾಪಗೌಡ ಪಾಟೀಲರು ಹಲವಾರು ಬಾರಿ ಹೋರಾಟ ಸಮಿತಿ ಮುಖಂಡರನ್ನು ಕರೆದುಕೊಂಡು ಹೋಗಿ 5 (ಎ) ಕಾಲುವೆ ಯೋಜನೆ ಜಾರಿಗೆ ಒತ್ತಾಯಿಸಿದ್ದಾರೆ. ಆದರೆ, ಆ ಬಗ್ಗೆ ಚಕಾರವೆತ್ತದ ಡಿ.ಕೆ.ಶಿವಕುಮಾರ ಉಪ ಚುನಾವಣೆ ಸಂದರ್ಭದಲ್ಲಿ ಪ್ರತಾಪಗೌಡ ಪಾಟೀಲರ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದಾರೆ. ಹಿಂದೆ ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಸರ್ಕಾರ ನೀರಾವರಿ ಯೋಜನೆಗೆ ಎಂದು ವಿರೋಧ ಮಾಡಿಲ್ಲ. 5 (ಎ) ಕಾಲುವೆ ಯೋಜನೆಗೂ ನಮ್ಮ ವಿರೋಧವಿಲ್ಲ. ಆದರೆ. ಕಾಂಗ್ರೆಸ್ ಪ್ರೇರಿತ ಹೋರಾಟಕ್ಕೆ ನಮ್ಮ ವಿರೋಧ ಇದೆ. ಕ್ಷೇತ್ರದ ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರದ ಎರಡು ವರ್ಷಗಳ ಅವದಿಯಲ್ಲಿ ಪೂರ್ಣಗೊಳಿಸುತ್ತೇವೆ’ ಎಂದರು.

17ರಂದು ಕಾಂಗ್ರೆಸ್ ಮನೆಗೆ: ಟೀಕೆ

ಮಸ್ಕಿ: ‘ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲದಂತಾಗಿದೆ. 17 ರಂದು ನಡೆಯುವ ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲೂ ಕ್ಷೇತ್ರದ ಮತದಾರರು ಕಾಂಗ್ರೆಸ್‌ನ್ನು ಗಂಟು ಮೂಟೆ ಕಟ್ಟಿ ಮನೆಗೆ ಕಳಿಸುತ್ತಾರೆ’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಾಪಗೌಡ ಪಾಟೀಲ ಅವರು ರಾಜ್ಯದ ಹಿತಕ್ಕಾಗಿ ಬಿಜೆಪಿಗೆ ಬಂದಿದ್ದಾರೆ ವಿನಃ ಯಾವುದೇ ಆಸೆಗಾಗಿ ಬಂದಿಲ್ಲ. ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ‘ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ಯಾತೀತ ವ್ಯಕ್ತಿ ಎಂದು ತಿಳಿಸಿದ ಅವರು ಚನಾವಣೆಯಲ್ಲಿ ಪ್ರತಾಪಗೌಡ ಪಾಟೀಲ ಗೆಲುವು ಖಚಿತ ಎಂದರು.

ದಲಿತರನ್ನು ಮುಗಿಸಿದ್ದೇ ಸಿದ್ದರಾಮಯ್ಯ: ಆರೋಪ

ಮಸ್ಕಿ: ದಲಿತರನ್ನು ರಾಜಕೀಯವಾಗಿ ಮುಗಿಸಿದ್ದೆ ಸಿದ್ದರಾಮಯ್ಯ ಎಂದು ಬಿಜೆಪಿ ಎಸ್‌ಸಿ ಮೊರ್ಚಾದ ರಾಜ್ಯ ಘಟಕದ ಅಧ್ಯಕ್ಷ ಛಲುವಾದಿ ನಾರಾಯಣ ಸ್ವಾಮಿ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದಲಿತರು ರಾಜಕೀಯವಾಗಿ ಮುಂದೆ ಬರಬಾರದು ಎಂಬ ಕಾರಣಕ್ಕೆ ಖರ್ಗೆ, ಡಾ. ಪರಮೇಶ್ವರ ಸೇರಿದಂತೆ ಅನೇಕರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಸಿದ್ದರಾಮಯ್ಯ‘ ಎಂದು ದೂರಿದರು.

‘ಡಾ.ಅಂಬೇಡ್ಕರ್, ಬಾಬು ಜಗಜೀವನರಾಂ ಸೇರಿದಂತೆ ದಲಿತರಿಗೆ ಯಾವ ರಾಜಕೀಯ ಸ್ಥಾನ ನೀಡದೆ ತನ್ನ ಮತ ಬ್ಯಾಂಕ್ ಗಳನ್ನಾಗಿ ಮಾಡಿಕೊಂಡಿದ್ದು ಕಾಂಗ್ರೆಸ್. ಈಗ ದಲಿತರ ಮತ ಪಡೆಯಲು ಕಾಂಗ್ರೆಸ್ ಮುಖಂಡರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ’ ಎಂದರು.

ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ ಮತ್ತು ಬಿಜೆಪಿ ಪರವಾಗಿ ದಲಿತ ಸಮುದಾಯ ಇದೆ. ದಲಿತರ ಏಳ್ಗೆಗಾಗಿ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT