ಶುಕ್ರವಾರ, ಜನವರಿ 27, 2023
26 °C
ಕವಿತಾಳ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನೀರಿನ ಸಮಸ್ಯೆ

ಮಕ್ಕಳ ಬಿಸಿಯೂಟಕ್ಕಿಲ್ಲ ಕುಡಿವ ನೀರು!

ಮಂಜುನಾಥ ಎನ್ ಬಳ್ಳಾರಿ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಬಳಕೆಗೆ ಮತ್ತು ಕುಡಿಯಲು ನೀರಿಲ್ಲದೆ ಮಕ್ಕಳು ಪರದಾಡುವಂತಾಗಿದೆ.

183 ಮಕ್ಕಳು ಅಭ್ಯಾಸ ಮಾಡುತ್ತಿರುವ ಉನ್ನತೀಕರಿಸಿದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಳವೆಭಾವಿ ಕೆಟ್ಟಿದ್ದು ದುರಸ್ತಿ  ಭಾಗ್ಯ ಕಂಡಿಲ್ಲ. ಈ ಕುರಿತು ಮಾಹಿತಿ ನೀಡಿದ್ದರೂ ಪಟ್ಟಣ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬಿಸಿಯೂಟ ತಯಾರಿಸಲು ಮತ್ತು ಮಕ್ಕಳಿಗೆ ಕುಡಿಯಲು ಬಿಸಿಯೂಟ ಅಡುಗೆಯವರು ಹೊರಗಡೆಯಿಂದ ನಲ್ಲಿ ನೀರು ತಂದು ಪೂರೈಸುತ್ತಿದ್ದಾರೆ.

ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 316 ವಿದ್ಯಾರ್ಥಿಗಳಿದ್ದಾರೆ. ಬಿಸಿಯೂಟ ಸೇವಿಸುವ ಮಕ್ಕಳು ಮನೆಯಿಂದಲೇ ಬಾಟಲಿಯಲ್ಲಿ ನೀರು ತಂದು ಕುಡಿಯಬೇಕಾದ ಪರಿಸ್ಥಿತಿ ಇದೆ. ಶಾಲಾ ಮುಂಭಾಗದ ಚರಂಡಿಯಿಂದ ಗಬ್ಬು ವಾಸನೆ ಬರುತ್ತಿದ್ದು ಮೂಗು ಮುಚ್ಚಿಕೊಂಡು ಶಾಲೆಯೊಳಗೆ ಹೋಗಬೇಕಾಗಿದೆ. ಹಂದಿ ಮತ್ತು ನಾಯಿಗಳು ಪಕ್ಕದಲ್ಲಿಯೇ ಓಡಾಡುವದರಿಂದ ಮುಜುಗರ ಪಡುತ್ತಲೇ ಮಕ್ಕಳು ಮದ್ಯಾಹ್ನದ ಬಿಸಿಯೂಟ ಸೇವಿಸುವಂತಾಗಿದೆ. ಶಾಲೆಯಲ್ಲಿನ ನಲ್ಲಿಗೆ ನೀರು ಬಾರದ ಕಾರಣ ಬಿಸಿಯೂಟ ತಯಾರಿಸಲು ಮತ್ತು ತಟ್ಟೆ ತೊಳೆಯಲು ಅಡುಗೆಯವರು ನೀರು ತರುತ್ತಾರೆ ಎಂದು ಮುಖ್ಯ ಶಿಕ್ಷಕ ಸಂಗಪ್ಪ ಹೇಳುತ್ತಾರೆ.

122 ಮಕ್ಕಳ ಹಾಜರಾತಿ ಹೊಂದಿರುವ ಇಲ್ಲಿನ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯ ಪರಿಸ್ಥಿತಿ ಭಿನ್ನವಾಗಿಲ್ಲ. ಶಾಲಾ ಕೊಠಡಿಗಳು ದಿಬ್ಬದ ಮೇಲಿದ್ದು ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ರಸ್ತೆ ಪಕ್ಕದಲ್ಲಿ ನಲ್ಲಿ ಅಳವಡಿಸಲಾಗಿದೆ. ಎರಡು ದಿನಕ್ಕೊಮ್ಮೆ ನೀರು ಬರುತ್ತಿದ್ದು ಇಲ್ಲಯೂ ಬಿಸಿಯೂಟದ ಅಡುಗೆಯವರು ಮಕ್ಕಳ ಬಳಕೆಗೆ ನೀರು ತರುತ್ತಾರೆ ಕುಡಿಯಲು ಮಕ್ಕಳು ಮನೆಯಿಂದ ನೀರು ತರುವಂತಾಗಿದೆ. ನೀರಿನ ಕೊರತೆಯಿಂದ ಶೌಚಾಲಯ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಮೂರು ಶಾಲೆಗಳಿಗೆ ನೀರು ಸರಬರಾಜು ವ್ಯವಸ್ಥೆ ಸರಿಯಿಲ್ಲದ ಕಾರಣ ಬಿಸಿಯೂಟ ತಯಾರಿಸಲು, ಶೌಚಾಲಯ ಬಳಕೆಗೆ ಮತ್ತು ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೈ ಭಾರತ ಸಂಘಟನೆಯ ಎಂ.ಎಸ್‍.ಜಾವೀದ್‍, ಸೂಗರಡ್ಡಿ ಪಾಟೀಲ್ ಆರೋಪಿಸಿದ್ದಾರೆ.

ಶಾಲೆಗಳಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು ಮತ್ತು ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್‌ ಅಳವಡಿಸಬೇಕು ಎಂದು ಮುಖಂಡ ಜಹಾಂಗೀರ್ ಪಾಶಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು