ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಅಭದ್ರತೆಯಲ್ಲಿ ಅಲೆಮಾರಿ ಜನಾಂಗ

ವಾರ್ಡ್‌–5ರ ಸಿಂಧೋಳ ಸಮುದಾಯದ ಸಂಕಷ್ಟದ ಬದುಕು ಕೇಳುವವರು ಯಾರು?
ಅಕ್ಷರ ಗಾತ್ರ

ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ 5ನೇ ವಾರ್ಡ್‌ನ ಹೊರ ವಲಯದಲ್ಲಿ ಮೂರು ದಶಕಕ್ಕೂ ಅಧಿಕ ವರ್ಷಗಳಿಂದ ಜೋಪಡಿಗಳಲ್ಲಿ ಬದುಕು ಕಟ್ಟಿಕೊಂಡಿರುವ ಅಲೆಮಾರಿ ಜನಾಂಗಕ್ಕೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪುರಸಭೆ ಆಡಳಿತ ಮುಂಡಳಿ ಮುಂದಾಗುವುದು ಸೂಜಿಗದ ಸಂಗತಿ.

ಸರ್ಕಾರಿ ತೋಟಕ್ಕೆ ಹೊಂದಿಕೊಂಡ ಖಾಸಗಿ ಜಮೀನೊಂದರಲ್ಲಿ ಜೋಪಡಿಗಳಲ್ಲಿ ವಾಸ್ತವ್ಯ ಮಾಡುತ್ತಿರುವ 60ಕ್ಕೂ ಹೆಚ್ಚು ಸಿಂಧೋಳಿ ಅಲೆಮಾರಿ ಕುಟುಂಬಸ್ಥರು ತುತ್ತಿನ ಚೀಲ ತುಂಬಿಕೊಳ್ಳಲು ಬಟ್ಟೆ, ಹೊದಿಕೆ, ಕೊಡ ಇತರೆ ವಸ್ತು ಮಾರಾಟ ಮಾಡಿಕೊಂಡು ಬಂದು ಸಂಕಷ್ಟದ ಬದುಕು ಕಟ್ಟಿಕೊಂಡಿದ್ದಾರೆ. ಕನಿಷ್ಠ ಸೌಲಭ್ಯಗಳಾದ ಕುಡಿವ ನೀರು, ಸಾಮೂಹಿಕ ಶೌಚಾಲಯ ಕಲ್ಪಿಸದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ಪುರಸಭೆ ಆಡಳಿತ ಮಂಡಳಿ ಇಂತಹ ಕುಟುಂಬಗಳನ್ನು ಗುರುತಿಸಿ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುವ ಚಿಂತನೆಗೂ ಮುಂದಾಗಿಲ್ಲ. ಅಲೆಮಾರಿಗಳು ಬಿದರಿನ ಟೆಂಟ್‌ಗೆ ಕೌದಿ (ಹೊದಿಕೆ), ಕಟ್ಟಿಗೆ, ಆಪು, ಟಿನ್‌ ಬಳಕೆ ಮಾಡಿಕೊಂಡು ಚಳಿ, ಮಳೆ, ಬೇಸಿಗೆ ಎನ್ನದೆ ಬದುಕು ಕಟ್ಟಿಕೊಂಡಿದ್ದಾರೆ. ಬಹಿರ್ದೆಷೆಗೆ ಬಯಲೆ ಗತಿಯಾಗಿದೆ. ಸ್ನಾನ, ಕೈಕಾಲು ತೊಳೆಯಲು ಸೀರೆ, ದೋತಿ ಬಳಸಿ ಸ್ನಾನಗೃಹ ನಿರ್ಮಾಣ ಮಾಡಿಕೊಂಡಿದ್ದು ದೂರದ ಜಲ ಶುದ್ಧೀಕರಣ ಘಟಕದಿಂದ ನೀರು ತಂದುಕೊಳ್ಳಲು ಪರದಾಡುತ್ತಿರುವುದು ಸಾಮಾನ್ಯ ಚಿತ್ರಣ.

‘ವಿಧಾನಸಭೆ, ಲೋಕಸಭೆ, ಪುರಸಭೆ ಚುನಾವಣೆಗಳು ಬಂದಾಗ ಆಶ್ವಾಸನೆ ನೀಡಿ ಹೋಗುತ್ತಿರುವ ಪ್ರತಿನಿಧಿಗಳು ಪುನಃ ಚುನಾವಣೆ ಬಂದಾಗೊಮ್ಮೆ ಹಣ ಹೆಂಡದ ಆಮಿಷ ತೋರಿಸಿ ಮತ ಪಡೆದುಕೊಂಡು ಹೋಗುತ್ತಾರೆ. ಸೌಲಭ್ಯ ಕಲ್ಪಿಸುವ ಭರವಸೆ ಜತೆ ಹಸಿದ ಹೊಟ್ಟೆಗೆ ಬಿಡಿಗಾಸಿನ ಆಮಿಷ ನಮ್ಮನ್ನು ಈ ಸ್ಥಿತಿಗೆ ತಂದೊಡ್ಡಿದೆ. ಸೌಲಭ್ಯ ಕೆಳಲು ಹೋದರೆ ಸ್ಪಂದಿಸುತ್ತಿಲ್ಲ’ ಎಂದು ಯಲ್ಲಪ್ಪ, ಮಾರೆಮ್ಮ ಅಳಲು ತೋಡಿಕೊಂಡಿದ್ದಾರೆ.

‘ಖಾಸಗಿ ಜಮೀನಾಗಿದ್ದರಿಂದ ಅದರಲ್ಲಿ ನಿವೇಶನ ಮಾಡಿದ್ದು ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರಿಂದ ಮುಂದಿನ ಹಾದಿ ಕಷ್ಟಕರವಾಗಿದೆ. ಕೆಲ ಕುಟುಂಬಸ್ಥರು ಈಗಾಗಲೆ ವಾರ್ಷಿಕ ಭೂ ಬಾಡಿಗೆ ಆಧಾರದ ಮೇಲೆ ಬೇರೊಂದು ಜಮೀನಿಗೆ ಸ್ಥಳಾಂತರಗೊಂಡಿದ್ದಾರೆ. ಬೀದಿಪಾಲಾಗುತ್ತಿರುವ ಅಲೆಮಾರಿ ಕುಟುಂಬಸ್ಥರಿಗೆ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಜಂಬುಲೆಮ್ಮ, ರಂಗಮ್ಮ, ಯಮನಪ್ಪ ಒತ್ತಾಯಿಸಿದರು.

‘ಮೂರು ವರ್ಷ ಹಿಂದೆ ಅನತಿ ದೂರದಲ್ಲಿ ಸಿಸ್ಟರ್ನ್‌ ಕೂಡಿಸಿದ್ದು ಇಂದಿಗೂ ಪೈಪಲೈನ್‌ ಜೋಡಣೆ ಮಾಡಿಲ್ಲ. ವಿದ್ಯುತ್‌ ಸಂಪರ್ಕವಂತೂ ಗಗನಕುಸುಮವಾಗಿದೆ. ಪಟ್ಟಣ ಪ್ರದೇಶದಲ್ಲಿ ಇಷ್ಟೊಂದು ಹೀನಾಯ ಬದುಕು ನಡೆಸುತ್ತಿರುವ ಕುಟುಂಬಸ್ಥರು ಕಾಣಸಿಗುತ್ತಿರುವುದು ಆಡಳಿತ ವ್ಯವಸ್ಥೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕು’ ಎಂದು ಸಮಾಜ ಸೇವಕ ಅಮರೇಶ ಗೋಸ್ಲೆ, ಅಕ್ರಮಪಾಷ ಆಗ್ರಹಪಡಿಸಿದ್ದಾರೆ.

*
ಅಲೆಮಾರಿಗಳು ಮೂರು ದಶಕಗಳ ಕಾಲದಿಂದ ವಾಸ್ತವ್ಯ ಇರುವ ಮಾಹಿತಿ ಪಡೆದು, ಸರ್ಕಾರಕ್ಕೆ ವರದಿ ಸಲ್ಲಿಸಿ ಗಮನ ಸೆಳೆಯಲಾಗುವುದು. ಶೀಘ್ರದಲ್ಲಿಯೇ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು
-ಕೆ.ಕೆ. ಮುತ್ತಪ್ಪ, ಮುಖ್ಯಾಧಿಕಾರಿ, ಪುರಸಭೆ, ಲಿಂಗಸುಗೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT