ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ಕುಡಿಯುವ ನೀರು ಒದಗಿಸಲು ₹297 ಕೋಟಿ ವೆಚ್ಚ: ಪ್ರಿಯಾಂಕ್ ಖರ್ಗೆ

Published 31 ಡಿಸೆಂಬರ್ 2023, 8:19 IST
Last Updated 31 ಡಿಸೆಂಬರ್ 2023, 8:19 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ 1007 ಗ್ರಾಮಗಳಿ ಕುಡಿಯುವ ನೀರು  ಒದಗಿಸಲು ₹297 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜಲ ಜೀವನ್ ಮಿಷನ್ ಯೋಜನೆಯಡಿ ನಬಾರ್ಡ್ ಮೂಲಭೂತ ಅಭಿವೃದ್ಧಿ ನೆರವು ಸಂಸ್ಥೆಯ ಸಹಯೋಗದೊಂದಿಗೆ ಕೈಗೆತ್ತಿಕೊಂಡಿರುವ ರಾಯಚೂರು ಜಿಲ್ಲೆಯ ಗ್ರಾಮೀಣ ಜನವಸತಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಮಾನ್ವಿ, ಮಸ್ಕಿ, ಕವಿತಾಳ, ತುರ್ವಿಹಾಳ, ಬಾಳಗವಾರ, ಸಿರವಾರ ಹಾಗೂ ಹಟ್ಟಿ ಪಟ್ಟಣಗಳಿಗೆ ಅನುಕೂಲವಾಗುವಂತೆ ನಾರಾಯಣಪುರ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ ಬೃಹತ್ ಕಾಮಗಾರಿಗೆಈ ಹಣ ವ್ಯಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಜಲ ಜೀವನ್ ಮಿಷನ್ ಯೋಜನೆಯಡಿ 1007 ಗ್ರಾಮಗಳ 1406 ಜನವಸತಿಗಳು ಅನುಕೂಲ ಪಡೆಯಲಿವೆ. ಈ ಬೃಹತ್ ಯೋಜನೆಯಲ್ಲಿ 3,42,534 ಮನೆಗಳು ಕುಡಿಯುವ ನೀರಿನ ಸೌಲಭ್ಯ ಹೊಂದಲಿವೆ. ಈ ಯೋಜನೆಯನ್ನು ಮುಂದಿನ 30 ವರ್ಷಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಲಾಗಿದೆ. ನಗರದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ದಿನವೊಂದಕ್ಕೆ 135 ಲೀಟರ್ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ದಿನವೊಂದಕ್ಕೆ 55 ಲೀಟರ್ ನೀರನ್ನು ಪಡೆಯಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.


ಈ ಯೋಜನೆಯಲ್ಲಿ ಮನೆ ಮನೆಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಯೋಜನೆಯಡಿ ರಾಯಚೂರು ಜಿಲ್ಲೆಯ 1220 ಗ್ರಾಮಗಳಲ್ಲಿ ಮನೆ ಮನೆಗೆ ಕಾರ್ಯತ್ಮಕ ನಳ ಸಂಪರ್ಕ ನೀಡುವ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜೆ.ಜೆ.ಎಂ. ಯೋಜನೆಯಲ್ಲಿ ಮೊದಲ ಹಂತದಲ್ಲಿ 301 ಕಾಮಗಾರಿಗಳನ್ನು ತೆಗೆದುಕೊಳಲಾಗಿದ್ದು, ಈ ಪೈಕಿ 276 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಉಳಿದ 25 ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಈ ಕಾಮಗಾರಿಗಳ ಅಂದಾಜು ವೆಚ್ಚ ₹178.72 ಕೋಟಿ ಇದೆ. ಈಗಾಗಲೇ ₹ 106.03 ಕೋಟಿ ವೆಚ್ಚ ಮಾಡಲಾಗಿದೆ.

ಜೆ.ಜೆ.ಎಂ. ಯೋಜನೆಯಡಿ 2ನೇ ಹಂತದಲ್ಲಿ 251 ಕಾಮಗಾರಿಗಳನ್ನು ತೆಗೆದುಕೊಳಲಾಗಿದ್ದು ಈ ಪೈಕಿ 174 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ 77 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಈ ಕಾಮಗಾರಿಗಳ ಅಂದಾಜು ವೆಚ್ಚ ₹ 115.75 ಕೋಟಿ ಇದ್ದು, ₹ 64 ಕೋಟಿ ವೆಚ್ಚವಾಗಿರುತ್ತದೆ.
3ನೇ ಹಂತದಲ್ಲಿ 659 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 99 ಕಾಮಗಾರಿಗಳು ಪೂರ್ಣಗೊಂಡಿವೆ ಹಾಗೂ 462 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ, ಉಳಿಕೆ 98 ಕಾಮಗಾರಿಗಳು ಪ್ರಾರಂಭವಾಗಬೇಕಿವೆ ಎಂದ ಸಚಿವರು ತಿಳಿಸಿದ್ದಾರೆ.


4ನೇ ಹಂತದಲ್ಲಿ 9 ಕಾಮಗಾರಿಗಳಿದ್ದು, ಇವುಗಳಲ್ಲಿ ಒಂದು ಕಾಮಗಾರಿ ಪೂರ್ಣಗೊಂಡಿದೆ. 5 ಕಾಮಗಾರಿಗಳು ಪ್ರಗತಿಯಲ್ಲಿದ್ದು 3 ಕಾಮಗಾರಿಗಳು ಪ್ರಾರಂಭವಾಬೇಕಿದೆ. ಈ ಕಾಮಗಾರಿಗಳ ಅಂದಾಜು ವೆಚ್ ₹ 5.13 ಕೋಟಿ ಇದ್ದು, ಈಗಾಗಲೇ 22 ಲಕ್ಷ ಖರ್ಚು ಮಾಡಲಾಗಿದೆ. ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡ ನಂತರ ರಾಯಚೂರು ಜಿಲ್ಲೆಯ ಬಹಪಾಲು ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಶಾಶ್ವತವಾಗಿ ಲಭಿಸಿದಂತಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT