ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಬೀಜ, ಗೊಬ್ಬರ ಕೊರತೆ ಆಗದಂತೆ ಕ್ರಮ: ಕೃಷಿ ಸಚಿವ ಬಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹಿಂದಿನ ವರ್ಷದ ಅಂಕಿ–ಅಂಶಗಳನ್ನು ಪರಿಶೀಲಿಸಲಾಗುವುದು. ಯಾವುದೇ ಕಾರಣಕ್ಕೂ ಬೀಜ, ಗೊಬ್ಬರ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಾಕ್‌ಡೌನ್‌ ಇದ್ದರೂ ಕೃಷಿ ಕಾರ್ಯಕ್ಕೆ ಯಾವುದೇ ಅಡ್ಡಿ ಮಾಡಬಾರದು. ರೈತರ ವಾಹನಗಳಿಗೆ ಪೆಟ್ರೊಲ್, ಡೀಸೆಲ್ ತುಂಬಿಸುವ ಕೆಲಸ ಆಗಬೇಕು. ಹಾಪ್‌ಕಾಮ್ಸ್ ಮೂಲಕ ಹಣ್ಣು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು. ನಕಲಿ ಬೀಜ ಹಂಚುವುದು ಕೊಲೆಗಿಂತಲೂ ದೊಡ್ಡ ಅಪರಾಧ. ಈ ಬಗ್ಗೆ ತಪಾಸಣೆ ಕೈಗೊಳ್ಳಬೇಕು ಎಂದು ಜಾಗೃತ ದಳಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆಯ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಭತ್ತ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ನೀಡಲಾಗುವುದು. ಜೋಳ ಖರೀದಿ ಆರಂಭಿಸುವಂತೆ ಎಪ್ರಿಲ್ 4ರಂದು ಆದೇಶಿಸಲಾಗಿದೆ ಎಂದು ತಿಳಿಸಿದರು.

ಬೇಗನೆ ಹಾಳಾಗುವ ಹಾಲು, ಹಣ್ಣು ಹಾಗೂ ಹೂವುಗಳನ್ನು ಸಾಗಿಸುವ ಉದ್ದೇಶದಿಂದ ಮಾರ್ಚ್ 31 ರಿಂದ ಚೆಕ್ ಪೋಸ್ಟ್ ತೆರೆಯಲಾಗಿದೆ. ರೈತರಿಗೆ ದೊಡ್ಡ ನಷ್ಟ ಆಗುತ್ತಿರುವುದು ಗಮನಕ್ಕೆ‌ ಬಂದಿದೆ. ಭತ್ತಹಾನಿ ಸರ್ವೇ ಮಾಡಿಸಲಾಗುವುದು. ಬೆಂಗಳೂರಿನಲ್ಲಿ ಸರ್ಕಾರದಿಂದ ತೆಗೆದುಕೊಳ್ಳುವ ನಿರ್ಧಾರ ಅನುಷ್ಠಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡುವ ಉದ್ದೇಶದಿಂದ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ‌ ವರ್ಷದ‌ ರಸಗೊಬ್ಬರ ಪಟ್ಟಿಯನ್ನು ನೋಡಲಾಗುವುದು. ಡಿಎಪಿ ಕಡಿಮೆಯಾಗಿದೆ ಎಂದು ಹೇಳಿದ್ದು, ಈ ವರ್ಷ ಡಿಎಪಿ ಶೇ 10 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೊಡಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎನ್.ಎಸ್. ಬೋಸರಾಜ ಮಾತನಾಡಿ, ಜಿಲ್ಲೆಯಲ್ಲಿ ಮೆಣಸಿನಕಾಯಿ ಇಳುವರಿ ಉತ್ತಮವಾಗಿದ್ದು, ಮಾರಾಟವಾಗದೆ ಹಾಗೇ ಉಳಿದಿದೆ. ಕೋಲ್ಡ್ ಸ್ಟೋರೆಜ್ ನಲ್ಲಿಯೂ ಜಾಗವಿಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಪರ್ಯಾಯ ವ್ಯವಸ್ಥೆ ಒದಗಿಸಬೇಕು ಎಂದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದು ಈ ವರ್ಷ ಸರ್ಕಾರದಿಂದಲೇ ಉಚಿತ ಬೀಜ, ಗೊಬ್ಬರ ಕೊಟ್ಟು ಜಮೀನು ಬಿತ್ತನೆ ಮಾಡಿ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ರೈತ ಮುಖಂಡ ಚಾಮರಾಜ ಪಾಟೀಲ ಮಾತನಾಡಿ, ಕೃಷಿ ಉತ್ಪನ್ನ ಸಾಗಿಸಲು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕಿರಿಕಿರಿ ಮಾಡುವುದು ತಪ್ಪಿಲ್ಲ. ಹೂವಿನ ಹಡಗಲಿ, ಮಾಧ್ವರಂ ಹತ್ತಿರ ತೊಂದರೆ ಆಗಿದೆ. ಕೂಲಿ ಕಾರ್ಮಿಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಲು ಪೊಲೀಸರಿಂದ ತೊಂದರೆಯಾಗಿದೆ ಎಂದರು.  

ಶಾಸಕ ಡಾ. ಶಿವರಾಜ ಪಾಟೀಲ ಮಾತನಾಡಿ, ಕೃಷಿ ಉಪಕರಣ ಹಾಗೂ ಕೃಷಿ ಯಂತ್ರೋಪಕರಣ ಸಬ್ಸಿಡಿ ವರ್ಷದ ಕೊನೆಯಲ್ಲಿ ಬರುತ್ತಿದೆ. ವರ್ಷಾರಂಭದಲ್ಲೇ ಸಬ್ಸಿಡಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಕೋರಿದರು.

ರಸಗೊಬ್ಬರ ಮಾರಾಟಗಾರರ ಸಂಘದ ಸದಸ್ಯ ಮಾತನಾಡಿ, ರಾಯಚೂರಿನಲ್ಲಿ ಡಿಎಪಿ ರಾಜ್ಯದಲ್ಲೇ ಅತಿಹೆಚ್ಚು ಕಳೆದ ವರ್ಷ ಬಳಕೆಯಾಗಿದೆ. ಸದ್ಯ ಕೇಂದ್ರದಿಂದ ಬರುವುದು ಸ್ಥಗಿತವಾಗಿದೆ. ಈಗಿರುವ ದಾಸ್ತಾನು ಸಾಕಾಗುವುದಿಲ್ಲ.‌ ವಿದೇಶದಿಂದಲೂ ಗೊಬ್ಬರ ಬರಬೇಕಾಗಿದ್ದು, ಈಗಿನಿಂದಲೇ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಶಾಸ ಶಿವನಗೌಡ ನಾಯಕ ಮಾತನಾಡಿ, ಇಡೀ ಜಿಲ್ಲೆಯನ್ನು ಬರಗಾಲ ಎಂದು ಘೋಷಿಸಬೇಕು. ರಸಗೊಬ್ಬರ ಬೇಡಿಕೆ ಈಡೇರಿಸಿ, ಮೆಣಸಿನಕಾಯಿ ಬೆಳೆಗಾರರಿಗೆ ನೆರವು ಒದಗಿಸಬೇಕು ಎಂದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ, ಶಾಸಕರಾದ ಡಿ.ಎಸ್‌. ಹುಲಗೇರಿ, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆದಿಮನಿ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು