ಗುರುವಾರ , ಅಕ್ಟೋಬರ್ 29, 2020
20 °C
ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಕ ಕೊಟ್ರೇಶ ಹಿರೇಮಠ ಅವರ ಸೃಜನಾತ್ಮಕ ಕಾರ್ಯ

ರಾಯಚೂರು: ಸರ್ಕಾರಿ ಶಾಲೆಯ ಅಂಗಳದಲ್ಲಿ ಪುಟ್ಟ ಮ್ಯೂಸಿಯಂ!

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೊರೊನಾ ಲಾಕ್‌ಡೌನ್‌ ಅವ ಧಿಯ ‘ಗೃಹಬಂಧನ’ವನ್ನು ಒಬ್ಬೊಬ್ಬರು ಒಂದೊಂದು ರೀತಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಇತಿಹಾಸ ವಿಷಯ ಆಸಕ್ತ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮೂರಿನಲ್ಲಿ ವ್ಯರ್ಥವಾಗಿ ಬಿದ್ದಿದ್ದ ಐತಿಹಾಸಿಕ ಮೌಲ್ಯವುಳ್ಳ ಶಿಲೆಗಳನ್ನು ಸಂಗ್ರಹಿಸಿ, ಶಾಲೆಯ ಅಂಗಳದಲ್ಲೇ ಪುಟ್ಟ ‘ಮ್ಯೂಸಿಯಂ’ ಮಾಡಿದ್ದಾರೆ !

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊಣ್ಣಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೊಟ್ರೇಶ ಹಿರೇಮಠ ಶಾಲಾ ಅಂಗಳದಲ್ಲಿ ಪುರಾತತ್ವ ಮ್ಯೂಸಿಯಂ ರೂಪಿಸಿರುವವರು. ಬೇಸಿಗೆ ರಜೆ, ಕೊರೊನಾ ಲಾಕ್‌ಡೌನ್ ಬಿಡುವಿನ ಸಮಯದಲ್ಲಿ ಅವರು ಪಾಳು ಬಿದ್ದ ಪುರಾತತ್ವ ಮೌಲ್ಯವುಳ್ಳ ಕಲ್ಲುಗಳನ್ನು ಸಂಗ್ರಹಿಸಿ, ಶಾಲೆಯ ಅಂಗಳದಲ್ಲಿ ಒಪ್ಪವಾಗಿ ಜೋಡಿಸಿದ್ದಾರೆ. ಶಾಲೆ ಆವ ರಣ ಪ್ರವೇಶಿಸಿದರೆ, ಕಾಂಪೌಂಡ್‌ ಬದಿಯಲ್ಲಿರುವ ವೀರಗಲ್ಲು, ನಾಗರಕಲ್ಲು, ಶಿಲಾ ಯುಗದ ಕಲ್ಲು... ಮುಂತಾ ದವು ಸ್ವಾಗತಿಸುತ್ತವೆ. ಇವೆಲ್ಲವೂ ಗೊಣ್ಣಿಗನೂರು ಗ್ರಾಮದ್ದೇ!

ಇತಿಹಾಸ ಆಸಕ್ತಿಯೊಂದಿಗೆ ಶುರುವಾಯ್ತು..

90 ಮನೆಗಳ ಪುಟ್ಟ ಗೊಣ್ಣಿಗನೂರಿನಲ್ಲಿ ಸುತ್ತಾಡುತ್ತಿದ್ದಾಗ ಕೊಟ್ರೇಶ ಅವರಿಗೆ ಅಲ್ಲಲ್ಲಿ ಕಂಡ ವೀರಗಲ್ಲುಗಳು, ವಿವಿಧ ಚಿತ್ರಗಳುಳ್ಳ ಕಲ್ಲುಗಳು, ನಾಗರ ಕಲ್ಲುಗಳನ್ನು ಶಾಲೆಗೆ ತಂದರು. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ವಿದ್ಯಾರ್ಥಿಯೊಬ್ಬ ‘ಊರ ಹೊರಗಿನ ಜಮೀನಿನಲ್ಲಿ ಪುರಾತನ ಕಲ್ಲು ಸಿಕ್ಕಿತು ಸರ್’ ಎಂದು ತಂದುಕೊಟ್ಟ. ನಂತರ ಗ್ರಾಮ ಸ್ಥರೇ ‘ಇಂತಿಂಥ ಸ್ಥಳಗಳಲ್ಲಿ ವಿಶೇಷ ಕಲ್ಲುಗಳಿವೆ’ ಎಂದು ಮಾಹಿತಿ ನೀಡಿದರು. ಹೀಗೆ ಸಂಗ್ರಹಗೊಂಡ ಕಲ್ಲುಗಳ ಸಂಖ್ಯೆ 12ಕ್ಕೆ ಏರಿದೆ. ಶಿಕ್ಷಕರ ಆಸಕ್ತಿ, ಗ್ರಾಮಸ್ಥರು, ಮಕ್ಕಳ ಸಹಕಾರದಿಂದ ಶಾಲೆ ಅಂಗಳ ದಲ್ಲಿ ಪುಟ್ಟ ವಸ್ತು ಸಂಗ್ರಹಾಲಯ ರೂಪು ಗೊಂಡಿದೆ.

ಶಾಲಾ ಆವರಣದಲ್ಲಿ ಸದ್ಯ 4 ವೀರಗಲ್ಲುಗಳು ಸೇರಿ 12 ವಿವಿಧ ಬಗೆಯ ಕಲ್ಲುಗಳಿವೆ. ಪ್ರತಿ ಕಲ್ಲಿಗೂ ಪ್ರತ್ಯೇಕ ಕಟ್ಟೆ ವ್ಯವಸ್ಥೆಯಿದೆ. ಆಯಾ ಕಲ್ಲುಗಳ ಕುರಿತ ಸಂಕ್ಷಿಪ್ತ ಪರಿಚಯ ಬರೆಯುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಆಗಿದೆ. ಕೆಲವರು ಆರ್ಥಿಕ ನೆರವು, ಇನ್ನೂ ಕೆಲವರು ಸಿಮೆಂಟ್, ಇಟ್ಟಿಗೆ ಮತ್ತು ಮರಳು ಉದಾರವಾಗಿ ನೀಡಿದ್ದಾರೆ.

ಪ್ರತಿ ಗ್ರಾಮವೂ ಐತಿಹಾಸಿಕ ತಾಣಗಳೇ..

‘ಹಂಪಿ ಅಥವಾ ಐತಿಹಾಸಿಕ ಸ್ಥಳಗಳು ಅಷ್ಟೇ ಅಲ್ಲ, ಸಣ್ಣಪುಟ್ಟ ಗ್ರಾಮಗಳೂ ಐತಿಹಾಸಿಕ ಕೇಂದ್ರಗಳಾಗಬಹುದು. ತಿಪ್ಪೆಗುಂಡಿಗಳು, ಪಾಳು ಬಿದ್ದ ಕೆರೆ ಅಂಗಳ ಬಳಿ, ಮುಳ್ಳುಕಂಟಿಗಳಲ್ಲಿ‌ ಮುಚ್ಚಿ ಹೋಗಿರುವಂತಹ ಇಂಥ ಪುರಾತತ್ವ ಮೌಲ್ಯವಿರುವ ಕಲ್ಲುಗಳನ್ನು ಅಧ್ಯಯನ ಮಾಡಿದಲ್ಲಿ, ಗ್ರಾಮದ ಮಹತ್ವ ತಿಳಿಯುತ್ತದೆ’ ಎಂದು ಕೊಟ್ರೇಶ ಹೇಳುತ್ತಾರೆ.

ಶಾಲೆ ಕಲಿಯುವಾಗ ಕೊಟ್ರೇಶ ಅವರಿಗೆ ಇತಿಹಾಸ ಕುರಿತು ಇದ್ದ ಆಸಕ್ತಿ ಪಿಯುಸಿ ಓದುವಾಗ ಪ್ರಾಧ್ಯಾಪಕ ಎಂ.ಸಿ.ಎಂ.ದಯಾನಂದಸ್ವಾಮಿ ಅವರಿಂದ ಹೆಚ್ಚಾಯಿತು. ಈಗ ಅದು ಯಾವ ಪರಿ ಪರಿಣಾಮ ಬೀರಿದೆಯೆಂದರೆ, ಶಾಲೆಯಲ್ಲಿ ಸಂಗ್ರಹಿಸಿಡಲಾದ ಒಂದೊಂದು ಪುರಾತನ ಕಲ್ಲಿನ ಇತಿಹಾಸ ಮತ್ತು ವೈಶಿಷ್ಟ್ಯವನ್ನು ಅವರೇ ವಿವರಿಸುತ್ತಾರೆ.

ಅಷ್ಟೇ ಅಲ್ಲ, ಜನರು ನಾಗರಮೂರ್ತಿಗಳನ್ನು ಪೂಜಿಸಲು ಮುಂದಾದಾಗ, ಅವರನ್ನು ತಡೆದು ಇತಿಹಾಸದ ಪಾಠ ಹೇಳಿಕೊಡುತ್ತಾರೆ. ಇಷ್ಟೆಲ್ಲ ಪುರಾತತ್ವ ವಸ್ತುಗಳಿರುವ ಗ್ರಾಮದ ಬಗ್ಗೆ ಸ್ವತಃ ಗ್ರಾಮಸ್ಥರೇ ಹೆಮ್ಮೆ ಪಡುತ್ತಿದ್ದಾರೆ. ಈ ಕಾರ್ಯಕ್ಕೆ ಸಹ ಶಿಕ್ಷಕ ನಾಗರಾಜ ಅವರೂ ನೆರವಾಗಿದ್ದಾರೆ.

ಕೊಟ್ರೇಶ ಹಿರೇಮಠ ದೂರವಾಣಿ ಸಂಖ್ಯೆ: 87228 26318

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು