ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು ಜಿಲ್ಲೆಯ ಸಣ್ಣ ನೀರಾವರಿ ಭರವಸೆ ಈಡೇರಿದೆ: ಸಚಿವ ಬೋಸರಾಜು

Published : 18 ಸೆಪ್ಟೆಂಬರ್ 2024, 15:39 IST
Last Updated : 18 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ರಾಯಚೂರು: ‘ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಎಲ್ಲ ಭರವಸೆವನ್ನು ರಾಜ್ಯ ಸರ್ಕಾರ ಈಡೇರಿಸಿದೆ’ ಎಂದು ಸಣ್ಣ ನಿರಾವರಿ ಸಚಿವ ಎನ್.ಎಸ್‌. ಬೋಸರಾಜು ತಿಳಿಸಿದರು.

‘13 ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಎಲ್ಲ ಯೋಜನೆಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುಮೋದನೆ ನೀಡಿದೆ. ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಥಮ ಬಾರಿಗೆ 54 ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿ ಅಭಿವೃದ್ಧಿಯ ವೇಗ ಹೆಚ್ಚಿಸಿದೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘₹132 ಕೋಟಿಗಳಲ್ಲಿ ಕುರ್ಡಿ, ಕಲಬುರಗಿಯ ಚಿತ್ತಾಪುರ, ಜೇವರ್ಗಿ ಹಾಗೂ ಸೇಡಂಗಳಲ್ಲಿ ಕೆರೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ₹479 ಕೋಟಿ ಕಾಮಗಾರಿಗಳು ಚಾಲನೆ ಪಡೆಯಲಿವೆ. ಜನರ ನಿರೀಕ್ಷೆಯಂತೆ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಅನುದಾನ ಲಭ್ಯವಾಗಲಿದ್ದು ನಗರದ ಸರ್ವತೋಮುಖ ಅಭಿವೃದ್ಧಿ ಸಹಕಾರಿಯಾಗಲಿದೆ. ಹಿಂದಿನ ಸರ್ಕಾರದಲ್ಲಿ ಪ್ರಸ್ತಾವನೆಯಿತ್ತಾದರೂ ಸಚಿವ ಸಂಪುಟ ಅನುಮೋದನೆ ದೊರಕಿರಲಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬರಲಿದೆ’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಆರೋಗ್ಯ ಸೌಲಭ್ಯ ಹೆಚ್ಚಿಸಲು 45 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. 31 ಸಮುದಾಯ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಎರಡು ತಾಲ್ಲೂಕುಗಳ ಆಸ್ಪತ್ರೆಗಳನ್ನು 200 ಹಾಸಿಗೆ ಆಸ್ಪತ್ರೆಗಳಾಗಿ ಪರಿವರ್ತಿಸಲಾಗುತ್ತದೆ. ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆ 200 ಹಾಸಿಗೆ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ’ ಎಂದು ತಿಳಿಸಿದರು.

‘ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಾಣ ಮಾಡಲು ಟೌನ್‌ಶಿಪ್ ನಿರ್ಮಿಸಲು ₹998 ಕೋಟಿ, ಹೀರಾ ಬುದ್ದಿನ್ನಿ ಗಣಿ ₹192 ಕೋಟಿ, ಮಂತ್ರಾಲಯ ಹಾಗೂ ಚಿಕಲಪರ್ವಿ ಬಳಿ ಬ್ರಿಜ್ ಕಂ ಬ್ಯಾರೇಜ್  ನಿರ್ಮಿಸಲಾಗುತ್ತದೆ. ಕೆಕೆಆರ್‌ಡಿಬಿ ವ್ಯಾಪ್ತಿಯಲ್ಲಿ 16 ತಾಲ್ಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣ ಮಾಡಲಾಗುತ್ತದೆ. ನವಲಿ ಜಲಾಶಯ ನಿರ್ಮಾಣದ ಕುರಿತಂತೆ ಈಗಾಗಲೇ ಆಂಧ್ರ ಮತ್ತು ತೆಲಂಗಾಣದ ಅಧಿಕಾರಿಗಳು, ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದು ಹೇಳಿದರು.

ಸಂಸದ ಜಿ.ಕುಮಾರನಾಯಕ, ಶಾಸಕ ಹಂಪಯ್ಯನಾಯಕ, ಕೆ.ಶಾಂತಪ್ಪ, ನಗರಸಭೆ ಉಪಾಧ್ಯಕ್ಷ ಸಾಜೀದ ಸಮೀರ್, ಸದಸ್ಯ ಜಯಣ್ಣ, ಮಹ್ಮದ ಶಾಲಂ, ಜಿ.ಬಸವರಾಜರೆಡ್ಡಿ, ಜಯವಂತರಾವ ಪತಂಗೆ, ರುದ್ರಪ್ಪ ಅಂಗಡಿ, ವಾಹೀದ್, ನಿರ್ಮಲಾ ಬೆಣ್ಣೆ, ಮಹೇಶ ಪಾಟೀಲ, ಆಂಜನೇಯ ಕುರುಬದೊಡ್ಡಿ, ಅಮರೇಗೌಡ ಹಂಚಿನಾಳ, ಜಿ.ಸುರೇಶ, ಸದಸ್ಯ ಬಿ.ರಮೇಶ, ನರಸಿಂಹಲು ಮಾಡಗಿರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT