ಶುಕ್ರವಾರ, ನವೆಂಬರ್ 27, 2020
20 °C
ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ರಾಜ್ಯದ ಸಂಕಷ್ಟ ಆಲಿಸದ ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಸಂಕಷ್ಟವನ್ನು ಆಲಿಸುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಆಗಿರುವ ಹಾನಿಗೆ ಸಮರ್ಪಕವಾಗಿ ಪರಿಹಾರ ನೀಡದಿರುವ ಧೋರಣೆಯನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ ಅವರು ಕರ್ನಾಟಕ ಜನಸೈನ್ಯ ಜಿಲ್ಲಾ ಘಟಕದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರವಾಹ ಸಂತ್ರಸ್ತರ ವಿಷಯದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಸಂಪೂರ್ಣ ಅನ್ಯಾಯ ಆಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ರಾಜ್ಯಗಳಿಗೆ ಮಾತ್ರ ಪ್ರವಾಸ ಮಾಡುತ್ತಾರೆ. ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿಲ್ಲ, ರಾಜ್ಯದ ಜನರನ್ನು ಗುಲಾಮರಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯವು ಪ್ರವಾಹದಿಂದಾಗಿ ತತ್ತರಿಸಿದೆ. ಸುಮಾರು ಮೂರು ವರ್ಷಗಳಿಂದ ಮಳೆ, ಬರದಿಂದ ಜನರು ಕಣ್ಣೀರಿಡುತ್ತಿದ್ದಾರೆ. ಹಲವರು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುತ್ತಿಲ್ಲ ಹಾಗೂ ಸರಿಯಾದ ಪರಿಹಾರ ನೀಡುತ್ತಿಲ್ಲ ಎಂದರು.

ಪ್ರಧಾನಿ ಅವರು ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದರೂ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಈ ಭಾಗದ ಸಚಿವರು, ಸಂಸದರು ಪ್ರಶ್ನೆ ಮಾಡುತ್ತಿಲ್ಲ. ಪ್ರಧಾನಮಂತ್ರಿ ಅವರು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಅನುದಾನ ನೀಡಿರುವ ಬಗ್ಗೆ ಕೂಡಲೇ ಶ್ವೇತ ಪತ್ರ ಹೊರಡಿಸಬೇಕು. ₹50 ಸಾವಿರ ಕೋಟಿ ನೀಡಬೇಕು. ಅಕ್ಟೋಬರ್ 29ರಂದು ಹುಬ್ಬಳ್ಳಿಯಲ್ಲಿ ಸಂಸದರನ್ನು ಹರಾಜು ಹಾಕುವ ಚಳವಳಿ ಮಾಡಲಾಗುವುದು ಎಂದು ಹೇಳಿದರು.

ಪ್ರವಾಹ ಸಂತ್ರಸ್ಥರ ಪರಿಸ್ಥಿತಿ ಅರಿಯುವ ನಿಟ್ಟಿನಲ್ಲಿ ಈಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತರಾತುರಿಯಲ್ಲಿ ಆಗಮಿಸಿ ವೈಮಾನಿಕ ಸಮಿಕ್ಷೆ ಮಾಡಿದ್ದಾರೆ. ಇದರಿಂದ ಜನರ ನೋವು ಅರ್ಥವಾಗುವುದು ಹೇಗೆ ಎಂದು ಪ್ರಶ್ನಿಸಿದರು.

‘ನಾನು ವಿಧಾನ ಪರಿಷತ್ ನ ಪದವಿಧರ ಕ್ಷೇತ್ರ ಸ್ಥಾನಕ್ಕೆ ಸ್ಪರ್ಧಿಸಿದ್ದು, ನನಗೆ ಬೆಂಬಲಿಸಬೇಕು. ನಾನು ಗೆದ್ದರೆ ಉಪನ್ಯಾಸಕರ ಎಲ್ಲಾ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ. ಸರ್ಕಾರ ಶಿಕ್ಷಕರ ಅತಿಥಿ ಉಪನ್ಯಾಸಕರ ವೇತನ, ಬಡ್ತಿ ನೀಡಬೇಕು. ಮಹಿಳಾ ಶಿಕ್ಷಕರಿಗೆ ವಿಶೇಷ ರಕ್ಷಣೆ ನೀಡಬೇಕು. ಉಪಾಧ್ಯಾಯರನ್ನು ರಾಜ್ಯ ಸರ್ಕಾರ ಕೀಳು ಮಟ್ಟದಲ್ಲಿ ನೋಡುತ್ತಿದೆ. ನಾನು ಗೆದ್ದರೆ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ’ ಎಂದರು.

ಪ್ರತಿದಿನ ಸರಾಸರಿ ಎಂಟು ಸಾವಿರಾರು ಜನರಿಗೆ ಕೋವಿಡ್ ದೃಢ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ಪ್ರಾರಂಭಿಸುವುದೆ ಬೇಡ. ಆನ್ ಲೈನ್ ಶಿಕ್ಷಣದ ನೆಪದಲ್ಲಿ ಲೂಟಿ ನಡೆಯುತ್ತಿದೆ. ಈ ವರ್ಷವನ್ನು ಶೂನ್ಯ ವರ್ಷ ಎಂದು ಘೋಷಿಸಬೇಕು. ಕೋವಿಡ್‌ನಿಂದ ಸಾವನ್ನಪ್ಪಿದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ₹1 ಕೋಟಿ ಪರಿಹಾರ ನೀಡಬೇಕು. ವಿವಿಧ ಬೇಡಿಕೆಗಳ ಈಡೇರಿಕೆಗೆ ನವೆಂಬರ್ ಒಂದರಿಂದ ಮುಂದಿನ ವರ್ಷ ನವೆಂಬರ್ ಒಂದರವರೆಗೆ ಬೆಳಗಾವಿಯಿಂದ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಜನಸೈನ್ಯದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಅರಗೋಲ್‌, ಉಪಾಧ್ಯಕ್ಷ ನಶಾಂತಕುಮಾರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.