ಭಾನುವಾರ, ಜೂನ್ 20, 2021
30 °C

ವ್ಯಾಟ್ಸ್‌ ಆ್ಯಪ್‌ ನಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್ ಕಿಲಾಡಿಗಳು ಗ್ರೂಪ್

ವ್ಯಾಟ್ಸ್‌ಅ್ಯಪ್‌ನಲ್ಲಿ ಸ್ನೇಹಿತರೆಲ್ಲ ಸೇರಿ ಮನರಂಜನೆಗಾಗಿ ಮಾಡಿಕೊಂಡಿದ್ದ ಗ್ರೂಪ್ ಇದು. ಲಾಕ್‌ಡೌನ್ ಸಮಯ ಕೆಲಸ ಕಾರ್ಯಗಳಿಗೆ ಹೋಗುವ ಹಾಗಿರಲಿಲ್ಲ. ಮೊದಲೇ ನಮಗೆ ಮನೇಲಿ ಇರುವ ಅಭ್ಯಾಸ ಕಡಿಮೆ, 40 ದಿನಗಳವರೆಗೆ ಮನೇಲಿ ಹೇಗಪ್ಪ ಕಳೆಯೋದು ಎನ್ನುವ ಬೇಜಾರು ಕಳೆಯಲು ಈ ಗ್ರೂಪ್‌ ಕ್ರಿಯೆಟ್‌ ಮಾಡಿದೆ. ಇದರಿಂದ ಲಾಕ್‌ಡೌನ್‌ ದಿನಗಳು ಹೇಗೆ ಕಳೆದು ಹೋದವು ಎಂದು ಗೊತ್ತಾಗಲಿಲ್ಲ. ತುಂಬಾ ಅನುಕೂಲವಾಯಿತು. ಪ್ರತಿಯೊಬ್ಬರೂ ಕಾಮೆಂಟ್‌ಗಳನ್ನು ಬರೆಯುವುದು, ಬೇಸರ, ಸಂತೋಷ ಎಲ್ಲವನ್ನು ಅದರಲ್ಲಿ ಹೇಳಿಕೊಳ್ಳುತ್ತಿದ್ದರು. ಒಬ್ಬರಿಂದ ಇಬ್ಬರು ಇಬ್ಬರಿಂದ ಮತ್ತೊಬ್ಬರು ಹೀಗೆ ಕೋವಿಡ್ ಕಿಲಾಡಿ ಗ್ರೂಪ್ ನಿಂದ ಸ್ನೇಹಿತರೆಲ್ಲರೂ ಒಂದಾದೆವು. 

–ಅಕ್ರಂ ಪಾಷಾ, ಲಿಂಗಸುಗೂರು

 

ಒಳ್ಳೆಯ ಕೆಲಸಗಳಾಗಿವೆ

‘ಗೋಲ್ಡ್ ಗೋಲ್ಡನ್ ಫ್ರೇಂಡ್ಸ್’ ಜುಲೈ 6, 2015ರಲ್ಲಿ ಈ ಗ್ರೂಪ್ ರಚನೆ ಆಗಿದೆ. ಒಂದೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿದ ಗೆಳೆಯರು ಅದರಲ್ಲಿದ್ದೇವೆ. 1990 ರಿಂದ ದೂರ ದೂರ ಹಂಚಿಹೋಗಿದ್ದೇವು. ಮತ್ತೆ ಈ ಗ್ರೂಪ್ ಜನ್ಮತಾಳಿದ ನಂತರ ಒಂದಾಗಿದ್ದೇವೆ. ಪರಸ್ಪರ ಕುಶಲೋಪರಿಯನ್ನು ವಿಚಾರಿಸಿ ವಿನಿಮಯ ಮಾಡಿಕೊಳ್ಳುತ್ತಿದ್ದು, ಬಹಳ ಸಂತೋಷವಾಗಿದೆ.
ವಿದ್ಯೆ ಕಲಿಸಿದ ಪ್ರಾಥಮಿಕ ಶಿಕ್ಷಕರನ್ನು ಸನ್ಮಾನಿಸುವುದಕ್ಕೆ ತೀರ್ಮಾನಿಸಲು ಸಾಧ್ಯವಾಗಿದ್ದು ಈ ಗ್ರೂಪ್‌ನಿಂದ. ಲಾಕ್‌ಡೌನ್ ಘೋಷಣೆಯಾದಾಗ ಹಲವು ಬಡ ಕುಟುಂಬಗಳಿಗೆ ನೆರವಾಗಲು ಗ್ರೂಪ್‌ನಲ್ಲಿ ಚರ್ಚೆ ಮಾಡಿ ಕಾರ್ಯಗತ ಮಾಡಿದ್ದೇವೆ. 14 ಏಪ್ರಿಲ್ 2020 ರಂದು ಲಿಂಗಸುಗೂರು ತಾಲ್ಲೂ ಕಿನ ಗೋನವಾಟ್ಲ್ ಗ್ರಾಮದ 35 ಮಹಿಳೆಯರಿಗೆ 750ರೂ. ಮೊತ್ತದ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಿರುವುದು ನಮ್ಮ ಗ್ರೂಪ್‌ನ ಅತ್ಯುತ್ತಮ ಕಾರ್ಯಗಳಲ್ಲಿ ಇದು ಒಂದು.

- ಅಮರಯ್ಯ ಘಂಟಿ, ನಿಹಾರಿಕ ನಿಲಯ, ನರಸರಡ್ಡಿ ಪ್ಲಾಟ್, ರಾಯಚೂರು ರಸ್ತೆ, ಲಿಂಗಸುಗೂರು

 

ಸ್ನೇಹಿತರ ನಲ್ದಾಣ

ಲಾಕ್‌ಡೌನ್‌ನಿಂದ ಸಹಜ ಸ್ಥಿತಿ ಡೌನ್ ಆಗಿದ್ದರೂ ವ್ಯಾಟ್ಸ್‌ ಅ್ಯಪ್‌ ಗ್ರೂಪ್‌ನಲ್ಲಿರುವ ಸ್ನೇಹಿತರಿಂದಾಗಿ ಕಷ್ಟಗಳೆಲ್ಲ ಮರೆತುಹೋಗಿದೆ. ವ್ಯಾಟ್ಸ್‌ ಆ್ಯಪ್‌ ತುಂಬಾ ಮಹತ್ವದ ಪಾತ್ರವನ್ನು ವಹಿಸಿದೆ. ಸ್ನೇಹ ಸಂಬಂಧ ಗಟ್ಟಿ ಮಾಡಿದೆ. ಕಷ್ಟದಲ್ಲಿ ಆಗಲಿ, ಸುಖದಲ್ಲಿ ಆಗಲಿ ಮೊದಲು ಸ್ಪಂದಿಸುವವರು ಸ್ನೇಹಿತರು. ಗ್ರೂಪ್ ನಮಗೆ ಸರಪಳಿಯಂತೆ ಸಂಬಂಧವನ್ನು ಗಟ್ಟಿಗೊಳಿಸಿದೆ. ಆಧುನಿಕ ಜಗತ್ತಿನಲ್ಲಿ ಎಲ್ಲರೂ ಎಲ್ಲವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಸ್ನೇಹ ಉಳಿದುಕೊಳ್ಳಲು ಇದೊಂದು ನಮಗೆ ವೇದಿಕೆ ಆಗಿರುವುದು ಹೆಮ್ಮೆ ಅನಿಸುತ್ತದೆ.

– ಚಂದ್ರಮತಿ ಸಿರವಾರ, ಕನ್ನಡ ಉಪನ್ಯಾಸಕರು, ಎಪಿಎಂಸಿ ರೋಡ್, ಸಿರವಾರ

 

ನಮ್ಮನ್ನು ಹತ್ತಿರ ಮಾಡಿದೆ

ಸ್ನೇಹ ಎಂದರೆ ವರ್ಣಿಸಲಾಗದ ಭಾವನೆ. ಈ ಲಾಕ್‌ಡೌನ್‌ನಿಂದಾಗಿ ನಮ್ಮ ಸ್ನೇಹಿತರಿಂದ ದೂರ ಇದ್ದೇವೆ. ಆದರೆ ಭಾವನಾತ್ಮಕವಾಗಿ ಸ್ನೇಹಿತರಿಂದ ದೂರವಾಗಿಲ್ಲ. ವಾಟ್ಸ್ ಆ್ಯಪ್‌ನಲ್ಲಿ ಗ್ರೂಪ್‌ ಮಾಡಿಕೊಂಡಿದ್ದೇವೆ. ಎಲ್ಲರಿಗೂ ಹತ್ತಿರದಲ್ಲಿದ್ದೇವೆ ಎನ್ನುವ ಭಾವನೆ ಇದೆ. ಈ ಲಾಕಡೌನ್‌ ಕಾರಣದಿಂದ ಎಲ್ಲರೂ ಹೆಚ್ಚು ಹೆಚ್ಚು ಮಾತನಾಡಿಕೊಳ್ಳಲು ಸಾಧ್ಯವಾಗಿದೆ. ಕಳೆದ ಹೋಗಿದ್ದ ವಿದ್ಯಾರ್ಥಿ ಜೀವನದ ಸುವರ್ಣ ಗಳಿಗೆಗಳು ಈ ಗ್ರೂಪ್‌ನಿಂದ ಮತ್ತೆ ಮರಕಳಿಸಿವೆ.

– ಕರಿಯಮ್ಮ ಹಣಗಿ, ಡೋಣಮರಡಿ, ಮಾನ್ವಿ

ಸಮಾನ ಮನಸ್ಸುಗಳ ಮಿಡಿತ

ಸ್ನೇಹಿತರೊಂದಿಗೆ ಒಡನಾಟ ಸದಾ ಖುಷಿ ಕೊಡುವ ಸಂಗತಿ ನನಗೆ. ವ್ಯಾಟ್ಸ್‌ ಆ್ಯಪ್‌ ತಾಣದಲ್ಲಿ 2018 ರ ಆಗಸ್ಟ್‌ನಲ್ಲಿ ‘ಬಿಎ ಬ್ಯಾಚ್‌ಮೆಟ್ಸ್‌’ ಗ್ರೂಪ್‌ ರಚನೆ ಮಾಡಿ ಸಮಾನ ಮನಸ್ಸುಗಳ ಗೆಳೆಯರನ್ನು ಅದರಲ್ಲಿ ಸೇರಿಸಿದ್ದೇನೆ. 2001 ರಲ್ಲಿ ಪದವಿ ಪೂರ್ಣಗೊಳಿಸಿ, ಬೇರೆ ಬೇರೆ ಊರುಗಳಲ್ಲಿ ಉದ್ಯೋಗದಲ್ಲಿದ್ದೇವೆ. ಬ್ಯಾಚ್‌ನಲ್ಲಿದ್ದ ವಿದ್ಯಾರ್ಥಿನಿಯರು ಈಗ ಗೃಹಿಣಿಯರಾಗಿದ್ದಾರೆ. ಎಲ್ಲರೂ ಗ್ರೂಪ್‌ನಲ್ಲಿ ಸೇರಿದ ಮೇಲೆ ಪದವಿ ದಿನಗಳ ನೆನಪಿನಿಂದ ಹಿಡಿದು, ಮಕ್ಕಳ ಜನ್ಮದಿನಕ್ಕೆ ಶುಭಾಶಯ ಕೋರುವ ಹಂತದವರೆಗೂ ಒಂದಾಗಿದ್ದೇವೆ.

ದಿನದ 24 ಗಂಟೆಯೂ ಸ್ನೇಹದೊಲುಮೆಯನ್ನು ಹಸಿರಾಗಿ ಇಡುವ ಕೆಲಸವನ್ನು ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡುತ್ತಿದೆ. ಮನೆಗಳಲ್ಲಿ ಹೊಸಹೊಸ ಖಾದ್ಯ ತಯಾರಿಸಿದ್ದು, ಪ್ರವಾಸ ಮಾಡಿದ್ದು, ಹಬ್ಬ–ಹರಿದಿನಗಳು, ಕುಟುಂಬದ ಸಮಾರಂಭಗಳ ಚಿತ್ರಗಳು ಹರಿದು ಬರುತ್ತವೆ. ಸ್ನೇಹಿತರಿಂದ ಬರುವ ಕಾಮೆಂಟ್‌ಗಳು ಖುಷಿ ಕೊಡುತ್ತವೆ.

–ಪ್ರಭು ಹಿಡಕಲ್‌, ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಮಾಡಗಿರಿ, ಮಾನ್ವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು