ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನಲ್ಲಿ ಹಾಕಿದ್ದು, ಹೊಟ್ಟೆಗೆ ಸೇರುವುದು

ವಿಶ್ವ ಮಣ್ಣಿನ ದಿನಾಚರಣೆ: ಕೃಷಿ ವಿವಿ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ವಿಶ್ಲೇಷಣೆ
Last Updated 5 ಡಿಸೆಂಬರ್ 2019, 12:03 IST
ಅಕ್ಷರ ಗಾತ್ರ

ರಾಯಚೂರು:ಮಣ್ಣು ಗುಣಮಟ್ಟದ್ದಾಗಿದ್ದರೆ ಮನುಷ್ಯರೂ ಆರೋಗ್ಯದಿಂದ ಇರುತ್ತಾರೆ. ತರಕಾರಿ, ಸೊಪ್ಪು ಹಾಗೂ ಇತರೆ ಬೆಳೆಗಳನ್ನು ಬೆಳೆಯುವುದಕ್ಕೆ ಮಣ್ಣಿನಲ್ಲಿ ಹಾಕುವ ರಾಸಾಯನಿಕಗಳೆಲ್ಲ ಮನುಷ್ಯರ ಹೊಟ್ಟೆಗೆ ಸೇರುತ್ತವೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಶ್ವ ಮಣ್ಣಿನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಣ್ಣಿನಿಂದಲೇ ಜೀವ, ಮಣ್ಣಿನಲ್ಲೆ ಮರಣ. ದಿನದ 24 ಗಂಟೆಯೂ ಕೃಷಿ ಬಗ್ಗೆ ಚಿಂತಿಸುವವರು ನಿಜವಾದ ರೈತರು. ಇಂಥವರಿಗೆ ಯಾವುದೇ ಸಲಹೆ, ಸೂಚನೆಗಳನ್ನು ಕೊಡುವ ಅಗತ್ಯ ಇರುವುದಿಲ್ಲ. ರೈತರೇ ವಿಜ್ಞಾನಿಗಳು. ಅನುಭಾವದಿಂದ ರೈತರು ಮಾತನಾಡುತ್ತಾರೆ. ಮಣ್ಣಿನ ಹದವನ್ನು ಬರಿಗಾಲಿನಿಂದ ನಡೆದು ಕಂಡು ಹಿಡಿಯುತ್ತಾರೆ. ಮಣ್ಣು ನೋಡಿ ಬೆಳೆಗಳನ್ನು ನಿರ್ಧರಿಸುವ ರೈತರಿದ್ದಾರೆ ಎಂದು ಹೇಳಿದರು.

ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದ ಮಕ್ಕಳನ್ನು ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈಗ ಕೃಷಿ ಮಾಡುವುದಕ್ಕೆ ಚಾಣಾಕ್ಷತೆ ಬೇಕು ಎನ್ನುವ ಮಾತು ಚಾಲ್ತಿಯಲ್ಲಿದೆ. ಮಳೆ, ಬೆಳೆಗಳನ್ನು ರೈತರು ತಮ್ಮ ಅನುಭವದಿಂದಲೇ ನಿರ್ಧರಿಸುವ ಶಕ್ತಿ ಹೊಂದಬೇಕಿದೆ. ಬುದ್ಧಿವಂತ ಮಕ್ಕಳು ಕೃಷಿ ಮಾಡುವುದಕ್ಕೆ ಬರುತ್ತಿದ್ದು, ಆದಾಯವನ್ನು ದ್ವಿಗುಣ, ತ್ರಿಗುಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

’ನಮ್ಮ ತೋಟ ನಮ್ಮ ಊಟ’ ಎನ್ನುವ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ರೈತರು ತಮ್ಮ ಅಡುಗೆ ಮನೆಗೆ ಬೇಕಾಗುವ ತರಕಾರಿಗಳನ್ನು ತಾವೇ ಬೆಳೆದುಕೊಳ್ಳುವ ಸ್ವಾವಲಂಬಿಗಳಾಗಬೇಕು. ಚಾಣಾಕ್ಷತನದಿಂದ ಕೃಷಿ ಮಾಡಬೇಕು. ಸ್ವಲ್ಪ ಯಾಮಾರಿದರೂ ಬೆಳೆಗಳು ನಷ್ಟವಾಗಿ ಉತ್ತಮ ದರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ರೈತರ ವಿಶ್ವವಿದ್ಯಾಲಯವಾಗಿದ್ದು, ಯಾವುದೇ ದಿನ ಬೆಳೆಗಳ ಸಮಸ್ಯೆಗಳನ್ನು ತೆಗೆದುಕೊಂಡು ವಿಶ್ವವಿದ್ಯಾಲಯಕ್ಕೆ ಬರಬಹುದು. ಕೃಷಿ ವಿಜ್ಞಾನಿಗಳಿಂದ ಸೂಕ್ತ ಸಲಹೆಗಳನ್ನು ಒದಗಿಸಲಾಗುವುದು. ತೋಟಗಾರಿಕೆ, ಹೈನುಗಾರಿಕೆ ಹಾಗೂ ಸಮಗ್ರ ಕೃಷಿಯತ್ತ ರೈತರು ಗಮನಹರಿಸಬೇಕು. ಒಂದು ಬೆಳೆಯಿಂದ ನಷ್ಟವಾದರೂ ಇನ್ನೊಂದು ಬೆಳೆಯಿಂದ ಲಾಭ ಸಿಗುತ್ತದೆ. ಒಂದೇ ರೀತಿಯ ಬೆಳೆ ಬೆಳೆದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಗಳ ಶಿಕ್ಷಣ ನಿರ್ದೇಶಕ ಡಾ.ಎಸ್‌.ಕೆ.ಮೇಟಿ ಮಾತನಾಡಿ, ಮಣ್ಣಿನಿಂದ ಮನುಷ್ಯ, ಮನುಷ್ಯನಿಂದ ಮಹಾಕಾಯಕಲ್ಪ. ಮಣ್ಣಿನ ಜ್ಞಾನ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ.ಚಿತ್ತಾಪುರ ಮಾತನಾಡಿ, ಮಣ್ಣು ಬರೀ ಮಣ್ಣಲ್ಲ, ಅದು ಸಂಪತ್ತು. ಮಣ್ಣಿನ ಜ್ಞಾನ ಪಡೆದಷ್ಟು ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸುಸ್ಥಿರ ಕೃಷಿ ತಜ್ಞ ಪಿ.ಶ್ರೀನಿವಾಸ ವಿಶೇಷ ಉಪನ್ಯಾಸ ನೀಡಿದರು. ಡಾ. ಕೆ.ನಾರಾಯಣರಾವ್‌, ವಿಶ್ವವಿದ್ಯಾಲಯದ ಡೀನ್‌ ಡಾ.ಡಿ.ಎಂ. ಚಂದರಗಿ, ವಿಶ್ವವಿದ್ಯಾಲಯದ ಮಣ್ಣು ಮತ್ತು ನೀರು ಸಂರಕ್ಷಣಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸತೀಶಕುಮಾರ್‌, ರಾಯಚೂರು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ. ಸಂದೀಪ್‌ ಇದ್ದರು.

ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಜಿ.ಎಸ್‌. ಯಡಹಳ್ಳಿ ಸ್ವಾಗತಿಸಿದರು. ಡಾ.ರಾಜೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT