ಗುತ್ತಿಗೆದಾರರು, ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ

7
ರಾಮನಗರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

ಗುತ್ತಿಗೆದಾರರು, ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ

Published:
Updated:
Deccan Herald

ರಾಮನಗರ: ಅಸಮರ್ಥ ವೈದ್ಯರ ಸೇವೆ ವಾಪಸ್‌ ಸೇರಿದಂತೆ ಆರೋಗ್ಯ ಇಲಾಖೆಗೆ ಅಗತ್ಯವಾದ ‘ಚಿಕಿತ್ಸೆ’ ನೀಡಲು ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅರ್ಧ ದಿನ ಆರೋಗ್ಯ ಇಲಾಖೆಯ ಚರ್ಚೆಗಳಿಗೇ ಮೀಸಲಾಯಿತು. ಇಲಾಖೆಯಲ್ಲಿ ಗುತ್ತಿಗೆ ಸಿಬ್ಬಂದಿಗೆ ಆಗುತ್ತಿರುವ ವೇತನದ ಅನ್ಯಾಯದ ಕುರಿತು ಕಳೆದ ಸಭೆಯಲ್ಲಿ ನಡೆದ ಚರ್ಚೆಗೆ ಸೂಕ್ತ ಉತ್ತರ ನೀಡುವಂತೆ ಸದಸ್ಯರು ಪಟ್ಟು ಹಿಡಿದರು. ಕಪ್ಪುಪಟ್ಟಿಗೆ ಸೇರಿದ ಗುತ್ತಿಗೆದಾರರನ್ನು ಈಗಾಗಲೇ ಟೆಂಡರ್‌ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಜನವರಿಯಿಂದ ಕಿಯೋನಿಕ್ಸ್‌ಗೆ ಗುತ್ತಿಗೆ ನೀಡಲಾಗುತ್ತಿದ್ದು, ನೌಕಕರ ಬ್ಯಾಂಕ್‌ ಖಾತೆಗೆ ಜಿ.ಪಂ. ನಿಂದ ವೇತನ ಪಾವತಿ ಆಗಲಿದೆ. ಕೇವಲ ಶೇ 5ರಷ್ಟು ಸೇವಾ ಶುಲ್ಕ ಮಾತ್ರ ಗುತ್ತಿಗೆದಾರರಿಗೆ ಸಿಗಲಿದೆ ಎಂದು ಸಿಇಒ ಮುಲ್ಲೈ ಮುಹಿಲನ್ ಹಾಗೂ ಡಿಎಚ್ಒ ಅಮರ್‌ನಾಥ್‌ ಮಾಹಿತಿ ನೀಡಿದರು.

‘ಸಾತನೂರು ಆಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 3–4 ತಿಂಗಳಿಂದ ವೇತನ ಇಲ್ಲ. ವೈದ್ಯರ ಮೇಲೆ ಇಲಾಖೆಗೆ ನಿಯಂತ್ರಣವೇ ಇಲ್ಲ’ ಎಂದು ಸದಸ್ಯ ಶಂಕರ್ ದೂರಿದರು.

‘ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯಗಳ ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಅದನ್ನು ಮೇಲ್ದರ್ಜೆಗೆ ಏರಿಸಿ’ ಎಂದು ಸದಸ್ಯ ಮಂಜುನಾಥ್ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ರಾಮನಗರ ತಾ.ಪಂ. ಅಧ್ಯಕ್ಷ ಜಿ.ಎನ್. ನಟರಾಜು ‘ ಆಸ್ಪತ್ರೆಯಲ್ಲಿ ₨26 ಲಕ್ಷ ವೆಚ್ಚದಲ್ಲಿ 2011ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರ ಸತ್ತುಹೋದ ಎಂಬ ಕಾರಣಕ್ಕೆ ಅರ್ಧಕ್ಕೇ ಬಿಡಲಾಗಿದೆ’ ಎಂದು ದೂರಿದರು.

‘ರಾಮನಗರ ತಾಲ್ಲೂಕಿನಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಗಳು ಸಮರ್ಪಕವಾಗಿ ನಡೆದಿಲ್ಲ. ಆದರೆ ಸರ್ಕಾರದ ಹಣ ಮಾತ್ರ ಖರ್ಚಾಗಿದೆ’ ಎಂದು ಆರೋಪಿಸಿದರು.

‘ಬಿಡದಿಯಲ್ಲಿ ₹4–5 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಿಸಿಕೊಡಲು ಟೊಯೊಟಾ ಕಂಪನಿಯು ಮುಂದೆ ಬಂದಿದೆ. ಆದರೆ ಅಧಿಕಾರಿಗಳು ಅದಕ್ಕೆ ಏಕೆ ಸ್ಪಂದಿಸುತ್ತಿಲ್ಲ’ ಎಂದು ಶಾಸಕ ಎ,ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು. ‘ಟೊಯೊಟಾ ಜೊತೆ ಸಹಕರಿಸಬೇಕು. ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆಸ್ಪತ್ರೆ ಆವರಣದಲ್ಲಿ ಜಾಗ ನೀಡಬೇಕು’ ಎಂದು ಅವರು ಸೂಚಿಸಿದರು.

ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ತಮ್ಮಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸದಸ್ಯರು ದೂರಿದರು.

ಹಗರಣ ತನಿಖೆಗೆ: ‘ಮಾಗಡಿ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ನಡೆದಿದೆ ಎನ್ನಲಾದ ₨2 ಕೋಟಿ ಮೊತ್ತದ ಪೀಠೋಪಕರಣ ಖರೀದಿ ಹಗರಣವನ್ನು ತನಿಖೆಗೆ ಒಳಪಡಿಸಬೇಕು’ ಎಂದು ಮಾಗಡಿ ತಾ.ಪಂ. ಅಧ್ಯಕ್ಷರು ಒತ್ತಾಯಿಸಿದರು. ಈಗಾಗಲೇ ಈ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಸಿಇಒ ಮಾಹಿತಿ ನೀಡಿದರು.

‘ಅಕ್ರಮ ಅದಿರು ಸಾಗಿಸುವ ಲಾರಿಗಳನ್ನು ಹಿಡಿದು ದಂಡ ಹಾಕುತ್ತೀರಿ. ಆದರೆ ಕ್ರಷರ್‌ಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುತ್ತೀರಿ. ಮರಳು ಮಾಫಿಯಾದಲ್ಲಿ ನೀವು ಶಾಮೀಲಾಗಿದ್ದೀರಿ’ ಎಂದು ಶಾಸಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿ.ಪಂ. ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ, ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.
ಇದೇ ಮೊದಲ ಬಾರಿಗೆ ಸಭೆಯು ನಾಡಗೀತೆಯೊಂದಿಗೆ ಆರಂಭವಾಯಿತು. ಈಚೆಗೆ ನಿಧನರಾದ ಕೇಂದ್ರದ ಸಚಿವ ಅನಂತಕುಮಾರ್, ನಟ ಅಂಬರೀಶ್, ಕಾಂಗ್ರೆಸ್ ಮುಖಂಡ ಜಾಫರ್ ಶರೀಪ್, ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ ಸದಸ್ಯ ಯೋಗೀಶ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಕೋತಿ–ಚಿರತೆ ಸೆರೆಗೆ ಆಗ್ರಹ
‘ಗ್ರಾಮಗಳಲ್ಲಿ ಕೋತಿಗಳ ಕಾಟ ವಿಪರೀತವಾಗಿದೆ. ಕೋತಿಗಳನ್ನು ಹಿಡಿಯುವ ವೆಚ್ಚ ಭರಿಸಲು ಗ್ರಾ,ಪಂ.ಗಳು ಸಿದ್ಧವಿವೆ. ಅವುಗಳ ಸಾಗಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದು ಅಧ್ಯಕ್ಷ ಎಂ.ಎನ್. ನಾಗರಾಜು ತಿಳಿಸಿದರು.

ಸದಸ್ಯ ಅಶೋಕ್ ಪ್ರತಿಕ್ರಿಯಿಸಿ ‘ಹಳ್ಳಿಗಳಲ್ಲಿ ಚಿರತೆಗಳ ಕಾಟವೂ ವಿಪರೀತವಾಗಿದೆ. ಕೆಲವು ಕಡೆ ಬೋನುಗಳ ಕೊರತೆ ಇದೆ. ಇಲ್ಲಿ ಹಿಡಿದಿದ್ದನ್ನು ಪಕ್ಕದಲ್ಲೇ ಬಿಡಲಾಗುತ್ತಿದೆ’ ಎಂದು ದೂರಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಪ್ರತಿಕ್ರಿಯಿಸಿ ‘ಜಿಲ್ಲೆಯಲ್ಲಿ 19 ಬೋನುಗಳಿದ್ದು, ಈವರೆಗೆ ಸುಮಾರು 17 ಚಿರತೆಗಳನ್ನು ಹಿಡಿಯಲಾಗಿದೆ. ಇವುಗಳನ್ನು ಬಿಆರ್‌ಟಿ ಹುಲಿಧಾಮಕ್ಕೆ ಬಿಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಹಳ್ಳಿಗಳಲ್ಲಿ ಬೀದಿನಾಯಿಗಳ ಹಾವಳಿಯೂ ಹೆಚ್ಚಾಗಿದ್ದು, ಅವುಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ನಡೆಸುವುದು ಒಳಿತು’ ಎಂದು ಶಾಸಕ ಮಂಜುನಾಥ್‌ ಸಲಹೆ ನೀಡಿದರು.

*
ಕೋಳಿ ತ್ಯಾಜ್ಯ ನಿರ್ವಹಣೆ: ಪಿಡಿಒಗೆ ಹೊಣೆ
ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ತ್ಯಾಜ್ಯ ನಿರ್ವಹಣೆಯ ಹೊಣೆಯನ್ನು ಪಿಡಿಒಗಳಿಗೆ ವಹಿಸಲು ಸಭೆಯು ತೀರ್ಮಾನಿಸಿತು.

‘ಬಿಡದಿ, ಹಾರೋಹಳ್ಳಿ, ಕುದೂರು, ತಿಪ್ಪಗೊಂಡನಹಳ್ಳಿ ಸೇರಿದಂತೆ ವಿವಿಧೆಡೆ ಕೋಳಿ ಮಾಂಸದ ತ್ಯಾಜ್ಯಗಳನ್ನು ಕೆರೆಗಳಿಗೆ ಸುರಿಯಲಾಗುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಸದಸ್ಯರು ಆಗ್ರಹಿಸಿದರು.

‘ಹಳ್ಳಿಗಳಲ್ಲಿ ತ್ಯಾಜ್ಯ ಸಂಗ್ರಹಣೆಯಿಂದ ಬೀದಿನಾಯಿಗಳ ಸಂಖ್ಯೆ ಹೆಚ್ಚಿದ್ದು, ಮಕ್ಕಳ ಮೇಲಿನ ದಾಳಿ ಪ್ರಕರಣಗಳೂ ಹೆಚ್ಚುತ್ತಿವೆ. ಜೈವಿಕ ತ್ಯಾಜ್ಯ ನಿರ್ವಹಣೆಗೂ ಅಧಿಕಾರಿಗಳು ಗಮನ ನೀಡಬೇಕು’ ಎಂದು ಶಾಸಕರು ಸೂಚಿಸಿದರು.

‘ಕಬ್ಬಾಳು ಸುತ್ತಮುತ್ತ ಹತ್ತಾರು ಕಲ್ಯಾಣಮಂಟಪಗಳಿದ್ದು, ಅಲ್ಲಿನ ಎಲ್ಲ ತ್ಯಾಜ್ಯ ಕೆರೆಯಂಗಳ ಸೇರುತ್ತಿದೆ. ತ್ಯಾಜ್ಯ ನಿರ್ವಹಣಾ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ’ ಎಂದು ಕನಕಪುರ ತಾ.ಪಂ. ಅಧ್ಯಕ್ಷ ಧನಂಜಯ ತಿಳಿಸಿದರು.

*
ಒಬ್ಬರ ವಜಾ; ಮತ್ತೊಬ್ಬರ ಅಮಾನತು
ಬಿಡದಿ, ಸಂಕಿಘಟ್ಟ, ಜಾಲಮಂಗಲ ಆಸ್ಪತ್ರೆಗಳಲ್ಲಿನ ವೈದ್ಯರ ಬಗ್ಗೆ ಸದಸ್ಯರು ಸಭೆಯಲ್ಲಿ ದೂರಿದರು. ‘ಬಿಡದಿ ಆಸ್ಪತ್ರೆ ವೈದ್ಯೆ ಪಂಕಜ ಎಂಬುವರು ಪ್ರತಿ ಹೆರಿಗೆಗೆ ₹5 ಸಾವಿರ ಲಂಚ ಪಡೆಯುತ್ತಾರೆ’ ಎಂದು ತಾ.ಪಂ. ಅಧ್ಯಕ್ಷ ಜಿ.ಎನ್‌. ನಟರಾಜು ಆರೋಪಿಸಿದರು.

‘ಬಿಡದಿ ವೈದ್ಯರ ವಜಾಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ಇನ್ನೇನು ಆದೇಶ ಹೊರಬೀಳಲಿದೆ. ಇನ್ನಿಬ್ಬರ ಮೇಲೂ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !