ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಅಪಘಾತ: ಕೂಲಿ ಕಾರ್ಮಿಕ ಸಾವು

ಉದ್ರಿಕ್ತರಿಂದ ಪೆಟ್ರೋಲಿಂಗ್ ವಾಹನದ ಸಿಬ್ಬಂದಿ ಮೇಲೆ ಹಲ್ಲೆ
Published 26 ಆಗಸ್ಟ್ 2023, 13:21 IST
Last Updated 26 ಆಗಸ್ಟ್ 2023, 13:21 IST
ಅಕ್ಷರ ಗಾತ್ರ

ಕುದೂರು: ರಾಷ್ಟ್ರೀಯ ಹೆದ್ದಾರಿ 75ರ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ಗುರುವಾರ ಸಂಜೆ 7.30ರ ಸಮಯದಲ್ಲಿ, ಕೆಲಸ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದ ಕೂಲಿ ಕಾರ್ಮಿಕರೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್‌ನ ವೆಂಕಟರಾಮ (34) ಮೃತಪಟ್ಟ ವ್ಯಕ್ತಿ. ಅಪಘಾತ ಸಂಭವಿಸಿದ ನಂತರ ವ್ಯಕ್ತಿಯನ್ನು ಕಾರು ಸುಮಾರು ದೂರ ಎಳೆದೊಯ್ದರಿಂದ ಆತ ಸ್ಥಳದಲ್ಲೇ ಅಸುನೀಗಿದ್ದಾನೆ.

‘ಜನದಟ್ಟಣೆಯ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಬೀದಿ ದೀಪಗಳನ್ನು ಅಳವಡಿಸಿಲ್ಲ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ 75ರ ಪ್ರಾಜೆಕ್ಟ್ ಡೈರೆಕ್ಟರ್ ದಿನೇಶ್ ಕುಮಾರ್ ಅನ್ಸಾರಿ, ಉಸ್ತುವಾರಿ ಅಧಿಕಾರಿ ಹರಿಬಾಬು ಹಾಗೂ ಕಾರು ಚಾಲಕನ ಮೇಲೆ ವೆಂಕಟರಾಮ ಅವರ ಪತ್ನಿ ವೆಂಕಟಲಕ್ಷ್ಮಮ್ಮ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲ್ಲೆ: ಅಪಘಾತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡ ಮಾಹಿತಿಯ ಮೇರೆಗೆ ಎನ್‌ಡಿಪಿಎಲ್‌ನ ರೂಟ್ ಪೆಟ್ರೋಲಿಂಗ್ ಅಧಿಕಾರಿ ರಾಜಣ್ಣ, ವಾಹನ ಚಾಲಕ ಮಂಜುನಾಥ್, ಸಹಾಯಕ ಪುಟ್ಟಸ್ವಾಮಿ ಪೆಟ್ರೋಲಿಂಗ್ ವಾಹನದಲ್ಲಿ ಸ್ಥಳಕ್ಕೆ ಧಾವಿಸಿದರು.

‘ಎಷ್ಟು ಬಾರಿ ಹೇಳಿದರೂ; ಸರ್ಕಲ್‌ನಲ್ಲಿ ಲೈಟ್ ವ್ಯವಸ್ಥೆ ಮಾಡದಿದ್ದರಿಂದಲೇ ಅಪಘಾತ ಸಂಭವಿಸಿದೆ’ ಎಂದು ಉದ್ರಿಕ್ತಗೊಂಡ 15-20 ಜನರ ಗುಂಪು ಈ ಮೂವರ ಮೇಲೆ ಹಲ್ಲೆ ನಡೆಸಿ, ವಾಹನದಲ್ಲಿದ್ದ ಟೂಲ್ ಕಿಟ್, ಸೇಫ್ಟಿ ಕೋನ್ಸ್, ಡ್ಯಾಶ್ ಕ್ಯಾಮ್, ಬಾರ್ ಲೈಟ್, ಇಂಡಿಕೇಟರ್, ಪಿಎ ಸಿಸ್ಟಮ್ ನಾಶ ಪಡಿಸಿದ್ದಾರೆ.

ಹಲ್ಲೆಗೊಳಗಾದ ಪೆಟ್ರೋಲಿಂಗ್ ವಾಹನದ ಸಿಬ್ಬಂದಿ ಸೋಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಲ್‌ ವ್ಯವಸ್ಥಾಪಕ ಜಯರಾಮೇಗೌಡ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT