ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ಶಕ್ತಿಗಳಿಗೆ ಅಂಬೇಡ್ಕರ್ ಪರಿಹಾರ

ಸಾವಿತ್ರಿಬಾ ಫುಲೆ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಮೊಮ್ಮಗ ರಾಜರತ್ನ ಅಭಿಪ್ರಾಯ
Published 6 ಜನವರಿ 2024, 15:20 IST
Last Updated 6 ಜನವರಿ 2024, 15:20 IST
ಅಕ್ಷರ ಗಾತ್ರ

ಕನಕಪುರ (ರಾಮನಗರ): ‘ಕೋಮುವಾದ, ಸರ್ವಾಧಿಕಾರ, ಫ್ಯಾಸಿಸಂ ಸೇರಿದಂತೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿರುವ ಶಕ್ತಿಗಳಿಗೆ ಅಂಬೇಡ್ಕರ್ ವಾದವೇ ಪರಿಹಾರ’ ಎಂದು ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಂಬೇಡ್ಕರ್ ಅಭಿಪ್ರಾಯಪಟ್ಟರು.

ಸಾವಿತ್ರಿಬಾ ಫುಲೆ ಅವರ ಜನ್ಮದಿನದ ಅಂಗವಾಗಿ, ಧಮ್ಮ‌ ದೀವಿಗೆ ಚಾರಿಟೇಬಲ್ ಟ್ರಸ್ಟ್ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ‌ ಸಾಕ್ಷರತೆಯ ಶಿಖರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಬಹುಸಂಖ್ಯಾತ ಶೋಷಿತ ಸಮುದಾಯಗಳ ವಿಮೋಚನೆಗಿರುವ ಪ್ರಮುಖ ಕೀ ರಾಜಕೀಯ ಅಧಿಕಾರ. ಅದರಿಂದಲೇ ಅಭಿವೃದ್ಧಿಯ ಬಾಗಿಲುಗಳನ್ನು ತೆರೆಯಲು ಸಾಧ್ಯ. ನಮ್ಮ ಗುರಿ ಸಾಧನೆ ಅಧಿಕಾರ ಪಡೆಯುವುದೇ ಆಗಿರಬೇಕು’ ಎಂದರು.

‘ಫುಲೆ ಅವರು ಅವಮಾನಗಳನ್ನು ಸಹಿಸಿಕೊಂಡು ಶೋಷಿತ ಸಮುದಾಯ ಹಾಗೂ ಮಹಿಳೆಯರಿಗೆ ಅಕ್ಷರ ಕಲಿಸಿದರು. ಅದರ ಪರಿಣಾಮವಾಗಿ ನಾನಿಂದು ಕನಕಪುರದಲ್ಲಿ ಪುಷ್ಪರಾಶಿ ಸುರಿಸಿಕೊಂಡು ಮೆರವಣಿಗೆಯಲ್ಲಿ ಬಂದೆ. ಶಿಕ್ಷಣದ ದೇವಿ ಸಾವಿತ್ರಿಬಾ ಫುಲೆ ಅವರೇ ಹೊರತು ಸರಸ್ವತಿಯಲ್ಲ’ ಎಂದು ಹೇಳಿದರು.

ಕವಿ ಸುಬ್ಬು ಹೊಲೆಯಾರ್ ಮಾತನಾಡಿ, ‘ಅಂಬೇಡ್ಕರ್ ಅವರಿಗೆ ಶಿಕ್ಷಣದ ಅರಿವು ಸಿಕ್ಕಿದ್ದೇ ಫುಲೆ ದಂಪತಿಯಿಂದ. ಅದಕ್ಕಾಗಿಯೇ ಅವರನ್ನು ತನ್ನ ಗುರು ಎಂದು ಹೇಳಿದ್ದರು. ನಾವು ವಿಚಾರಗಳಿಂದ ಹಿಮ್ಮುಖವಾದರೆ ಸಮಾಜ ಸಹ ಹಿಂದಕ್ಕೆ ಹೋಗುತ್ತದೆ. ವಿಚಾರದ ಮೂಲ ಶಿಕ್ಷಣ ಮತ್ತು ಸಂವಿಧಾನದ ಅರಿವಿನಲ್ಲಿದೆ’ ಎಂದು ಹೇಳಿದರು.

‘ಶೂದ್ರ ಮತ್ತು ಶೋಷಿತ ಸಮುದಾಯಗಳು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಬಿಟ್ಟು‌ ಕೊಡಬಾರದು. ಪ್ಲೇಗ್‌ನಿಂದ ಬಳಲುತ್ತಿದ್ದ ಅಸ್ಪೃಶ್ಯ ಸಮುದಾಯದ ಮಗುವನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸಿದ ಸಾವಿತ್ರಿಬಾ ಅವರು ಅವರು, ಅದೇ ರೋಗದಿಂದ ತೀರಿಕೊಂಡರು. ಅವರು ಮಹಾನ್ ತ್ಯಾಗಮಯಿ’ ಎಂದು ಬಣ್ಣಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ‘ಸಾವಿತ್ರಿಬಾ ಫುಲೆ ಅವರ ಜನ್ಮದಿನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದ್ದೂರಿಯಾಗಿ ಆಚರಿಸಬೇಕು. ನಾವು ಸರಸ್ವತಿ ಬದಲು ಸಾವಿತ್ರಿ ಫುಲೆ ಅವರನ್ನು ಪೂಜಿಸಬೇಕಿದೆ’ ಎಂದು ತಿಳಿಸಿದರು.

ಮೈಸೂರಿನ ನಾಗ ಮಾರ್ಷಲ್ ಆರ್ಟ್‌ನ ಕರಾಟೆ ಸಿದ್ದರಾಜು, ತಮಟೆ ಕಲಾವಿದ ಪರಮೇಶ್ ಹಾಗೂ ಸಾವಿತ್ರಿಬಾ ಫುಲೆ ಮಹಿಳಾ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ರತ್ನಮ್ಮ ಅವರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರೂರಲ್ ಕಾಲೇಜಿನ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ರಾಜರತ್ನ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಆರ್‌ಇಎಸ್ ಅಧ್ಯಕ್ಷ ಎಚ್.ಕೆ. ಶ್ರೀಕಂಠ ಅವರು ರಾಜರತ್ನ ಅವರನ್ನು ಸ್ವಾಗತಿಸಿದರು. ಚನ್ನಬಸವ ವೃತದಲ್ಲಿ ಪೌರ ಕಾರ್ಮಿಕರು ರಾಜರತ್ನ ಅವರಿಗೆ ಪುಷ್ಪಮಳೆಗರೆದರು.

ಬೀದರ್‌ನ ಧಮ್ಮ ದರ್ಶನ ಕೇಂದ್ರದ ಭಂತೆ ವರಜ್ಯೋತಿ, ಅಮ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಸಿ‌. ಬೊಮ್ಮಯ್ಯ, ಶಿಕ್ಷಣ ಇಲಾಖೆಯ ಎಂ.ಸಿ. ನಾಗರಾಜ್, ಕರಾಟೆ ಸಿದ್ದರಾಜು, ಗಿರೀಶ್, ಡಾ. ವಿ.ಎಸ್.‌ ತೇಜೋಮತಿ, ಶೋಭಾ, ಮಮತಾ, ವರಲಕ್ಷ್ಮಿ‌‌ ಹಾಗೂ ಇತರರು ಇದ್ದರು.

ಮನುಸ್ಮೃತಿ ಮನಸ್ಸುಳ್ಳ ಪೇಶ್ವೆಗಳ ಆಡಳಿತಾವಧಿಯಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾ ಫುಲೆ ಅವರು ಶಿಕ್ಷಣದಲ್ಲಿ ಮಾಡಿದ ಕ್ರಾಂತಿಯು ಈ ನೆಲದಲ್ಲಿ ನಡೆದ ಮಹಾಕ್ರಾಂತಿಯಾಗಿದೆ
- ಮೂಡ್ನಾಕೂಡು ಚಿನ್ನಸ್ವಾಮಿ ಸಾಹಿತಿ
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮರೆತರೆ ಅಂದಿನಿಂದ ನಮ್ಮ ಅಧೋಗತಿ ಆರಂಭವಾಗುತ್ತದೆ. ಇವೆರಡರ ಕುರಿತ ಪ್ರಜ್ಞೆ ಸದಾ ಜಾಗೃತವಾಗಿರಬೇಕಾದರೆ ನಮಗೆ ಅಂಬೇಡ್ಕರ್ ಅರಿವು ಮುಖ್ಯ
– ಸುಬ್ಬು ಹೊಲೆಯಾರ್ ಕವಿ

‘ಅಧಿಕಾರ ಕೊಟ್ಟ ಸಂವಿಧಾನ ಅವಮಾನ ಮಾಡಿದ ಮನುಸ್ಮೃತಿ’

‘ಅಂಬೇಡ್ಕರ್ ಸಂವಿಧಾನದಿಂದಾಗಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೇರಿದರು. ಮನುಸ್ಮೃತಿ ಕಾರಣಕ್ಕೆ ಮಹಾಭಾರತದ ದ್ರೌಪದಿ ಪಾಂಚಾಲಿಯಾಗಿ ಅವಮಾನಕ್ಕೆ ಒಳಗಾದಳು. ಸಂವಿಧಾನ ಮತ್ತು ಮನುಸ್ಮೃತಿ ನಡುವೆ ಇರುವ ವ್ಯತ್ಯಾಸವಿದು. ಇದನ್ನೇ ಆಧಾರವಾಗಿಟ್ಟಿಕೊಂಡಿದ್ದ ಪುರೋಹಿತಶಾಹಿ ವರ್ಗ ವಿದ್ಯೆ ಮತ್ತು ಆಸ್ತಿಯಿಂದ ನಮ್ಮನ್ನು ವಂಚಿಸಿದರು. ಮನುಸ್ಮೃತಿಯು ಬಹುಸಂಖ್ಯಾತರಿಂದ ಶಿಕ್ಷಣ ಮತ್ತು ಆಸ್ತಿ ಕಿತ್ತುಕೊಂಡು ದೂರವಿಟ್ಟಿತ್ತು. ಅಂಬೇಡ್ಕರ್ ಅದಕ್ಕೆ ಪ್ರತಿಯಾಗಿ ಸಮ ಸಮಾಜದ ಆಶಯದ ಸಂವಿಧಾನವನ್ನು ಕೊಟ್ಟರು’ ಎಂದು ರಾಜರತ್ನ ಅಂಬೇಡ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT