ಸಿಎಂ ಆದವರಿಂದ ಬಿಡದಿಗೆ ಕೊಡುಗೆ ಏನು: ಎಚ್‌ಡಿಕೆ ಹೆಸರು ಹೇಳದೇ ಬಾಲಕೃಷ್ಣ ಟೀಕೆ
ಬಿಡದಿ: ‘ಜಿಲ್ಲೆಯ ನಾಯಕರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವ್ಯಾಮೋಹಕ್ಕೆ ಒಳಗಾಗಿ ಚುನಾವಣೆಯಲ್ಲಿ ಆ ಪಕ್ಷದವರನ್ನು ಬೆಂಬಲಿಸಿದ್ದೀರಿ. ಅವರು ಬಿಡದಿ ಪ್ರದೇಶ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ’ ಎಂದು ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಪ್ರಶ್ನಿಸಿದರು
‘ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಾಯಕರು 14 ತಿಂಗಳು ಮುಖ್ಯಮಂತ್ರಿಯಾಗಿದ್ದವರು ಬಿಡದಿಗಾಗಿ ನೀಡಿರುವ ವಿಶೇಷ ಕೊಡುಗೆ ಏನು’ ಎಂದು ಯಾರನ್ನೂ ಹೆಸರಿಸದೆ, ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದರು.
ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ‘ಚುನಾವಣಾ ಸಮಯದಲ್ಲಿ ವ್ಯಾಮೋಹಕ್ಕೆ ಒಳಗಾಗಿ ಮತನೀಡಿ ಪಶ್ಚಾತ್ತಾಪಪಡುವ ಬದಲು ಅಧಿಕಾರಕ್ಕೆ ಬರುವ ಪಕ್ಷ ಜನರ ಬೆಂಬಲವಾಗಿ ನಿಲ್ಲಬೇಕು. ಇಲ್ಲದಿದ್ದರೆ ಐದು ವರ್ಷಗಳ ಕಾಲ ನೋವು ಅನುಭವಿಸುತ್ತ ಪಶ್ಚಾತ್ತಾಪ ಪಡಬೇಕಾಗುತ್ತದೆ ವ್ಯಾಮೋಹದಿಂದ ಮತ ನೀಡಿದರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ’ ಎಂದು ಎಚ್ಚರಿಸಿದರು.
‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಪಕ್ಷದ ಸಹಕಾರ ಸಿಕ್ಕಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರ ಸಹಕಾರದಿಂದ ಈ ಭಾಗದ ಜನರಿಗೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿಗೆ ಅನುಮೋದನೆ ದೊರಕಿತ್ತು’ ಎಂದರು.
‘ಕೈಗಾರಿಕಾ ಪ್ರದೇಶವಾಗಿರುವ ಬಿಡದಿ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ವಿಶೇಷ ಗಮನಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಕೆಲಸವನ್ನು ಕಾಂಗ್ರೆಸ್ ಹೊರತುಪಡಿಸಿ ಮತ್ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ಎರಡು ವರ್ಷಗಳಿಂದ ಬಿಜೆಪಿಯವರ ದುರಾಡಳಿತ ಕಿತ್ತಾಟದಲ್ಲಿದೆ. ಜೆಡಿಎಸ್ ಪಕ್ಷಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ. ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಾತಾವರಣ ಸ್ಪಷ್ಟವಾಗಿದೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರು ವೃಷಭಾವತಿ ಜಗದೀಶ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜು, ಪುರಸಭೆ ಮಾಜಿ ಸದಸ್ಯ ರಮೇಶ್, ಮಹೀಪತಿ, ರಮೇಶ್, ಹರೀಶ್, ಮುಖಂಡರಾದ ರಾಜಣ್ಣ, ನಾಗೇಶ್, ಶಸಿ, ಸುರೇಶ್ , ಜಯರಾಮು, ದೇವರಾಜು, ಅರಸು, ಕೆಂಪರಾಜು, ಮಹಿಳಾ ನಾಯಕಿಯರಾದ ಬಿಂದಿಯಾ, ಕಾವ್ಯ, ನಾಗಮ್ಮ, ಪೊಲೀಸ್ ಇಲಾಖೆಯ ಮಂಜುನಾಥ್ ಉಪಸ್ಥಿತರಿದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.