ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: ಬಾರದ ಫಲಿತಾಂಶ, ವಿದ್ಯಾರ್ಥಿಗಳು ಅತಂತ್ರ

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಕಾದ ಅಭ್ಯರ್ಥಿಗಳು
Last Updated 2 ಜುಲೈ 2019, 19:45 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ವಿಶ್ವವಿದ್ಯಾಲಯದ ಐದನೇ ಸೆಮಿಸ್ಟರ್‌ನ ಮರು ಮೌಲ್ಯಮಾಪನ ಫಲಿತಾಂಶವು ವಿಳಂಬವಾಗುತ್ತಿದ್ದು, ಅನ್ಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಉತ್ಸಾಹದಲ್ಲಿ ಇರುವ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಅದರಲ್ಲೂ ರಾಮನಗರದ 11 ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ 13 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಐದನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿದ್ದರು. ಲಿಖಿತ ಪರೀಕ್ಷೆಯಲ್ಲಿ ಮೌಲ್ಯಮಾಪಕರು ಕೇವಲ ಇಬ್ಬರಿಗೆ ಮಾತ್ರ 25 ಅಂಕ ನೀಡಿ ಉಳಿದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಿದ್ದರು. ಅನುತ್ತೀರ್ಣರಾದವರಿಗೆ ಉತ್ತರ ಪತ್ರಿಕೆಯ ಝೆರಾಕ್ಸ್‌ ಪ್ರತಿಯನ್ನೂ ನೀಡಿರಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅವರ ಪೈಕಿ ಕೆಲವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಜಾತಕ ಪಕ್ಷಿಗಳಂತೆ ಫಲಿತಾಂಶಕ್ಕೆ ಕಾದಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರು ವಿ.ವಿ.ಯ ಐದನೇ ಸೆಮಿಸ್ಟರ್‌ನ ಪರೀಕ್ಷೆಗಳು ನಡೆದಿದ್ದವು. ಏಪ್ರಿಲ್‌ನಲ್ಲಿ ಇದರ ಫಲಿತಾಂಶ ಪ್ರಕಟವಾಗಿತ್ತು. ಆದರೆ ಸಸ್ಯವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪರೀಕ್ಷೆಗಳ ಫಲಿತಾಂಶವನ್ನು ಎರಡು ವಾರ ತಡವಾಗಿ ಪ್ರಕಟಿಸಲಾಗಿತ್ತು.

‘ನಾವು ಚೆನ್ನಾಗಿ ಪರೀಕ್ಷೆ ಬರೆದಿದ್ದಾಗ್ಯೂ ಅನುತ್ತೀರ್ಣ ಫಲಿತಾಂಶ ಬಂದ ಕಾರಣ ಆಘಾತಗೊಂಡು ಉತ್ತರ ಪತ್ರಿಕೆಯ ನಕಲು ಪ್ರತಿ ನೀಡುವಂತೆ ವಿಶ್ವವಿದ್ಯಾಲಯದ ಮೊರೆ ಹೋದೆವು. ಆದರೆ ಇದಕ್ಕೆ ಸ್ಪಂದಿಸದ ಪರೀಕ್ಷಾ ಸಿಬ್ಬಂದಿ, ಈಗಾಗಲೇ ಅದಕ್ಕೆ ಸಮಯ ಮುಗಿದಿದೆ ಎಂದು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದರು. ಕಡೆಗೆ ಕುಲಸಚಿವರಿಗೆ ಮನವಿ ಸಲ್ಲಿಸಿದೆವು. ಅವರು ಇಂದೇ ಶುಲ್ಕ ಕಟ್ಟಿದಲ್ಲಿ ಮಾತ್ರ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡುತ್ತೇನೆ. ಆದರೆ ಉತ್ತರ ಪತ್ರಿಕೆ ನೀಡಲಾಗದು ಎಂದರು. ಹೀಗಾಗಿ ನಾಲ್ಕೈದು ಮಂದಿ ಮಾತ್ರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದೆವು’ ಎಂದು ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಣ್ಣೀರಿಡುತ್ತಾರೆ.

ಪ್ರವೇಶಕ್ಕೆ ತೊಂದರೆ: ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಸ್ನಾತಕೋತ್ತರ ಪದವಿಗೆ ಪ್ರವೇಶ ಆರಂಭಗೊಂಡಿದೆ. ಇಲ್ಲಿನ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಐದನೇ ಸೆಮಿಸ್ಟರ್‌ ಫಲಿತಾಂಶ ಸಿಗದೇ ಹೋದರೆ ಪ್ರವೇಶ ಪಡೆಯಲು ಆಗದು. ಹೀಗಾಗಿ ತ್ರಿಶಂಕು ಸ್ಥಿತಿಯಲ್ಲಿ ಇರುವ ಈ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಫಲಿತಾಂಶವನ್ನೇ ಎದುರು ನೋಡುತ್ತಿದ್ದಾರೆ.

ಕಾಲೇಜು ಸಿಬ್ಬಂದಿ ನಿರ್ಲಕ್ಷ್ಯ: ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕಾದ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂಬುದು ಪೋಷಕರ ಆರೋಪವಾಗಿದೆ.

‘ವಿದ್ಯಾರ್ಥಿಗಳ ಸಮಸ್ಯೆಯನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದೇವೆ. ಅವರು ಯಾವಾಗ ಫಲಿತಾಂಶ ನೀಡುತ್ತಾರೋ ಗೊತ್ತಿಲ್ಲ. ಈ ವಿಷಯದಲ್ಲಿ ನಾವೇನೂ ಮಾಡಲು ಆಗದು’ ಎನ್ನುತ್ತಾರೆ ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಿ. ರಂಗಸ್ವಾಮಿ ಗೌಡ.

**
ನಮ್ಮ ಕಾಲೇಜಿನ ವಿದ್ಯಾರ್ಥಿನಿಗಳ ಸಮಸ್ಯೆಯನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದೇವೆ. ಅವರೇ ಮರು ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಬೇಕು
- ಡಿ. ರಂಗಸ್ವಾಮಿ ಗೌಡ, ಪ್ರಾಚಾರ್ಯ, ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

**
ಮರು ಮೌಲ್ಯಮಾಪನ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು
- ಸಿ. ಶಿವರಾಜು, ಕುಲಸಚಿವ (ಪರೀಕ್ಷಾಂಗ), ಬೆಂಗಳೂರು ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT