ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣದಲ್ಲಿ ನಟ ದರ್ಶನ್ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ರಾ ಡಿಕೆ ಬ್ರದರ್ಸ್?

ಜೈಲು ಪಾಲಾಗಿರುವ ‘ಕೈ’ ಅಚ್ಚರಿ ಅಭ್ಯರ್ಥಿ: ಸಿ.ಪಿ. ಯೋಗೇಶ್ವರ್ ಅಚ್ಚರಿಯ ಹೇಳಿಕೆ
Published 14 ಜೂನ್ 2024, 10:19 IST
Last Updated 14 ಜೂನ್ 2024, 10:19 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಡಿ.ಕೆ. ಸಹೋದರರು ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದಾಗಿ ಹೇಳಿದ್ದರು. ಆದರೆ, ಆ ಅಚ್ಚರಿ ಅಭ್ಯರ್ಥಿ ಇದೀಗ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು, ನಟ ದರ್ಶನ್ ಕುರಿತು ಪರೋಕ್ಷವಾಗಿ ಅಚ್ಚರಿಯ ಹೇಳಿಕೆ ನೀಡಿದರು.

ಉಪ ಚುನಾವಣೆ ಕುರಿತು ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಟ ದರ್ಶನ್ ಹೆಸರನ್ನು ಪ್ರಸ್ತಾಪಿಸದೆ ಅವರು ಪ್ರತಿಕ್ರಿಯಿಸಿದರು.

‘ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಹಾಕುತ್ತೇವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರೇ ಹೇಳಿದ್ದರು. ಕಾಂಗ್ರೆಸ್ ಪರವಾಗಿ ಚಿತ್ರನಟರೊಬ್ಬರು ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನನಗೆ ಬಂದ ಮಾಹಿತಿ ಪ್ರಕಾರ, ಅವರನ್ನೇ ಕರೆದುಕೊಂಡು ಬಂದು ನಿಲ್ಲಿಸಲು ಸಹೋದರರು ಯೋಜನೆ ಹಾಕಿದ್ದರು. ಈಗ ಬೇರೆಯವರನ್ನು ಕರೆ ತರುತ್ತಾರಾ ನೋಡಬೇಕು’ ಎಂದರು.

‘ಆ ನಟನಿಗೂ ರಾಜಕೀಯಕ್ಕೆ ಬರಬೇಕು ಎಂಬ ಮಹತ್ವಕಾಂಕ್ಷೆ ಇತ್ತು ಎನಿಸುತ್ತದೆ. ಆದರೆ, ಅನಾಹುತ ಮಾಡಿಕೊಂಡು ಜೈಲು ಪಾಲಾಗಿದ್ದಾರೆ. ಈ ಕುರಿತು ನಾನು ಸಹ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಅವರ ಕುರಿತು ಇಷ್ಟು ಮಾಹಿತಿ ನೀಡಿದ್ದೇನೆ. ಯಾರೆಂದು ನೀವೇ ಊಹಿಸಿಕೊಳ್ಳಿ’ ಎಂದು ಮುಂದಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ಜಾರಿಕೊಂಡರು.

ಕ್ಷೇತ್ರ ಬಿಜೆಪಿಗೆ ಪೂರಕ: ‘ಇಡೀ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಬಿಜೆಪಿಗೆ ಅಸ್ತಿತ್ವವಿದ್ದು, ಚುನಾವಣೆ ದೃಷ್ಟಿಯಿಂದಲೂ ಪಕ್ಷಕ್ಕೆ ಪೂರಕವಾಗಿವೆ. ಉಳಿದ ಮೂರು ಕ್ಷೇತ್ರಗಳಾದ ರಾಮನಗರ, ಮಾಗಡಿ ಹಾಗೂ ಕನಕಪುರದಲ್ಲಿ ಜೆಡಿಎಸ್ ಹೆಚ್ಚು ಶಕ್ತಿ ಹೊಂದಿವೆ. ಇದು ಜಿಲ್ಲೆಯ ವಾಸ್ತವ. ನಾನು ಪ್ರಬಲ ಆಕಾಂಕ್ಷಿಯಾದರೂ, ಅಭ್ಯರ್ಥಿ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಎಂಬ ಪ್ರತ್ಯೇಕತೆ ಇಲ್ಲ. ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕಷ್ಟೆ. ಕ್ಷೇತ್ರದಲ್ಲಿರುವ ಪಕ್ಷ ಹೊಂದಿರುವ ಬಲವನ್ನು ನಾನು ಪಕ್ಷದ ವರಿಷ್ಠರ ಗಮನಕ್ಕೇನೂ ತಂದಿಲ್ಲ. ಅದಕ್ಕಿನ್ನೂ ಕಾಲಾವಕಾಶವಿದ್ದು, ಕಾಯಿ ಹಣ್ಣಾಗುವವರೆಗೆ ಕಾಯಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT