ಸೋಮವಾರ, ಆಗಸ್ಟ್ 2, 2021
21 °C
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆ

ರಾಮನಗರ: ಮತ್ತೆ ಇಬ್ಬರಲ್ಲಿ ಕೋವಿಡ್‌ ಸೋಂಕು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ಮತ್ತಿಬ್ಬರಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಕನಕಪುರದಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, 17 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಬಸವೇಶ್ವರ ನಗರದ ನಿವಾಸಿಯಾದ ಈತ ಬೂದಿಕೆರೆ ರಸ್ತೆಯಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ಅಧಿಕಾರಿಗಳು ಈತನ ಪ್ರಯಾಣ ಹಿನ್ನೆಲೆ ಹುಡುಕುತ್ತಿದ್ದಾರೆ. ಈತ ಕೆಲವು ವಾರಗಳ ಹಿಂದೆ ಹಿಂದೆ ತಮಿಳುನಾಡು ಗಡಿಯಲ್ಲಿರುವ ಕಾಡುಶಿವನಹಳ್ಳಿಯಲ್ಲಿ ನಡೆದ ಮದುವೆಯೊಂದರಲ್ಲಿ ಭಾಗಿಯಾಗಿದ್ದ. ಅಲ್ಲಿಂದ ಈವರೆಗೂ ಎಲ್ಲೆಲ್ಲಿ ಓಡಾಡಿದ್ದಾನೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.

ಸೋಂಕಿತ ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯ ನೂರು ಮೀಟರ್ ಸುತ್ತ ಸೀಲ್‌ಡೌನ್ ಮಾಡಲಾಗಿದೆ. ಎಂಜಿ ರಸ್ತೆ-ಪೆಟ್ರೋಲ್ ಬಂಕ್, ಐಡಿಬಿಐ ಬ್ಯಾಂಕ್ ವಿಸ್ತೀರ್ಣದವರೆಗಿನ ಪ್ರದೇಶ ಸೀಲ್‌ ಡೌನ್‌ ಆಗಿದೆ. ಈತನೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ 12 ಮಂದಿಯನ್ನು ಈವರೆಗೆ ಕ್ವಾರಂಟೈ‌ನ್‌ ಮಾಡಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತಾಲ್ಲೂಕಿನಲ್ಲಿ ಮೊದಲ ಪ್ರಕರಣ ವರದಿಯಾಗುತ್ತಿದ್ದಂತೆ ಜನತೆ ಬೆಚ್ಚಿ ಬಿದ್ದಿದ್ದಾರೆ.

ಮಾಗಡಿಯಲ್ಲಿ 25 ವರ್ಷದ ಮಹಿಳೆಗೆ ಮಂಗಳವಾರ ಸೋಂಕು ಧೃಡಪಟ್ಟಿದೆ. ನಾಲ್ಕು ದಿನದ ಹಿಂದೆ ಮುಂಬೈನಿಂದ ಮಾಗಡಿಗೆ ಬಂದಿದ್ದ ಇವರ ಕುಟುಂಬದವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್‌ ಕೇಂದ್ರವೊಂದರಲ್ಲಿ ಇರಿಸಿತ್ತು. ಮಹಿಳೆಯ ಪತಿ ಹಾಗೂ ಮಗುವನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಅವರಿಬ್ಬರ ವರದಿಗಳು ನೆಗೆಟಿವ್ ಆಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಮಾಗಡಿಯಲ್ಲಿ 3, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ತಲಾ ಎರಡು ಹಾಗೂ ಕನಕಪುರದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಈ ಪೈಕಿ ಮಾಗಡಿಯಲ್ಲಿ ಸೋಂಕಿಗೆ ತುತ್ತಾಗಿದ್ದ ಮಗು ಗುಣಮುಖವಾಗಿ ಮನೆಗೆ ಮರಳಿದ್ದು, ಇನ್ನು ಆರು ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು