ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌಡರ ಕುಟುಂಬದ ಆಸ್ತಿ ಶೀಘ್ರ ಬಹಿರಂಗ: ಡಿಕೆಶಿ

ಮೂರನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಜನಾಂದೋಲನ; ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶನ * ರಾಜ್ಯದ ಮೂರು ಬಜೆಟ್‌ನಷ್ಟು ಗೌಡರ ಕುಟುಂಬದ ಆಸ್ತಿ
Published 4 ಆಗಸ್ಟ್ 2024, 16:18 IST
Last Updated 4 ಆಗಸ್ಟ್ 2024, 16:18 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾಡಿರುವ ಆಸ್ತಿ, ಡಿನೋಟಿಫಿಕೇಷನ್, ಗಣಿಗಾರಿಕೆ, ಅವರ ಸಹೋದರರು ಹಾಗೂ ಕುಟುಂಬದವರು ಗಳಿಸಿರುವ ಆಸ್ತಿ ವಿವರಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕುಮಾರಸ್ವಾಮಿ ಮತ್ತು ಅವರ ಕುಟುಂಬ ಮಾಡಿರುವ ಆಸ್ತಿ ಮೊತ್ತವು ರಾಜ್ಯದ ಮೂರು ಬಜೆಟ್‌ ಮಂಡಿಸುವಷ್ಟಿದೆ. ಅಷ್ಟೊಂದು ಭೂಮಿ ಮತ್ತು ಹಣ ಕೊಳ್ಳೆ ಹೊಡೆದಿದ್ದಾರೆ ಎಂದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಆರೋಪ ಮಾಡಿದರು. 

ಚನ್ನಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಮೂರನೇ ದಿನದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಇಬ್ಬರೂ ಭಾಷಣದ ಉದ್ದಕ್ಕೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಅಜ್ಜಯ್ಯನ ಮೇಲೆ ಆಣೆಗೆ ನಾ ರೆಡಿ. ಅದಕ್ಕೆಲ್ಲಾ ಸಾರ್ವಜನಿಕರ ಸಮ್ಮುಖದಲ್ಲಿ ಒಳ್ಳೆಯ ವೇದಿಕೆ ನಿರ್ಮಾಣವಾಗಲಿ. ಇಲ್ಲದಿದ್ದರೆ ಅಧಿವೇಶನಕ್ಕೆ ದಾಖಲೆ ಸಮೇತ ಬರಲಿ. ನಾವು ಚರ್ಚಿಸುವುದು ಮುಂದಿನ ಪೀಳಿಗೆಗೆ ದಾಖಲೆಯಾಗಿ ಉಳಿಯಲಿ’ ಎಂದು
ಶಿವಕುಮಾರ್ ಹೇಳಿದರು.

‘ಹಾಸನದಲ್ಲಿ ಪೆನ್‌ಡ್ರೈವ್ ಹಂಚಿದೆ ಎಂದು ಕುಮಾರಸ್ವಾಮಿ ನನ್ನ ಮೇಲೆ ಗೂಬೆ ಕೂರಿಸೋಕೆ ಬಂದಿದ್ದರು. ನಾನಂತ ನೀಚ ಕೆಲಸ ಮಾಡುವವನಲ್ಲ. ನಾನು ನೇರವಾಗಿ ಬೀದಿಯಲ್ಲಿ ಹೋರಾಡುವವನು. ಈಗಾಗಲೇ ನನ್ನೊಂದಿಗೆ ಒಮ್ಮೆ ಹೋರಾಡಿ ಸೋತಿದ್ದೀರಾ. ತಾಕತ್ತಿದ್ದರೆ ಮತ್ತೊಮ್ಮೆ ಹೋರಾಡೋಣ ಬಾ’ ಎಂದು ಸವಾಲು ಹಾಕಿದರು.

‘ನಾನು ಜೆಡಿಎಸ್‌ನಲ್ಲಿದ್ದಾಗ ದಿನದಲ್ಲಿ 16 ತಾಸು ಅವರೊಂದಿಗೆ ಇರುತ್ತಿದ್ದೆ. ಆದರೆ, ಅವರ ಪ್ಯಾಂಟೊಳಗೆ ಖಾಕಿ ಚಡ್ಡಿ ಇರುವ ವಿಷಯವೇ ಗೊತ್ತಾಗಲಿಲ್ಲ. ಬಿಜೆಪಿಗಿಂತ ಹೆಚ್ಚು ಕೋಮುವಾದಿಯಾಗಿರುವ ಅವರನ್ನು ನಂಬಬಾರದು. ಬರಿ ಡವ್ ಮಾಡಿಕೊಂಡು ಗೆಲ್ಲುತ್ತಾ ಬಂದಿದ್ದಾರೆಯೇ ಹೊರತು ಕೆಲಸ ಮಾಡಿಲ್ಲ. ಮುಡಾ ವಿಷಯದಲ್ಲಿ ಸಿದ್ದರಾಮಯ್ಯ ಅವರು ಎಳ್ಳಷ್ಟೂ ತಪ್ಪೆಸಗಿಲ್ಲ. ಅವರ ಕುರ್ಚಿ ಅಲ್ಲಾಡಿಸಲು ಯಾವ ನನ್ನ ಮಗನಿಂದಲೂ ಸಾಧ್ಯವಿಲ್ಲ’ ಎಂದು ಜಮೀರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದೆ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದ ಬ್ಲ್ಯಾಕ್‌ಮೇಲ್ ಮತ್ತು ಹಿಟ್ ಆ್ಯಂಡ್ ರನ್ ಕುಮಾರಸ್ವಾಮಿ, ಈಗ ಅವರನ್ನೇ ತಬ್ಬಿ ಮುದ್ದಾಡುತ್ತಿದ್ದಾರೆ. ಪಾದಯಾತ್ರೆ ವಿರೋಧಿಸಿದ್ದವರು ಬಿಜೆಪಿಯವರನ್ನು ಸಹ ಬ್ಲ್ಯಾಕ್‌ಮೇಲ್ ಮಾಡಿ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ’ ಎಂದು ಶಿವಕುಮಾರ್‌ ವ್ಯಂಗ್ಯವಾಡಿದರು.

‘ಅಪ್ಪ–ಮಗನನ್ನು ನಂಬಬೇಡಿ ಎಂದು ನನಗೆ ಕಿವಿಮಾತು ಹೇಳಿದ್ದ ಯಡಿಯೂರಪ್ಪನವರೇ, ನೀವ್ಯಾಕೆ ರಾಜೀನಾಮೆ ಕೊಟ್ಟು ಕಣ್ಣೀರು ಹಾಕಿದಿರಿ ಎಂಬುದಕ್ಕೆ ಉತ್ತರ ಕೊಡಿ. ನಿಮ್ಮ ಮತ್ತು ಬಸವರಾಜ ಬೊಮ್ಮಾಯಿ ಅವಧಿಯ ಹಗರಣಗಳ ಪಟ್ಟಿ ನಮ್ಮ ಬಳಿ ಇದೆ. ಅದೆಲ್ಲವನ್ನೂ ಜನರ ಮುಂದಿಡುವೆ. ನೀವು ಟೂರಿಂಗ್ ಟಾಕೀಸ್ ಮಾಡುತ್ತಾ ಇರಿ. ನಿಮ್ಮಿಬ್ಬರ ನವರಂಗಿ ಬಣ್ಣವನ್ನು ಜನರ ಮುಂದೆ ಬಯಲು ಮಾಡುವೆ’ ಎಂದರು.

ಹೆಲ್ಮೆಟ್‌ ಧರಿಸಿ ಕಾರ್ಯಕರ್ತರೊಬ್ಬರ ಬೈಕ್‌ ಏರಿದ ಶಿವಕುಮಾರ್, ಅದರಲ್ಲೇ ವೇದಿಕೆ ಸ್ಥಳಕ್ಕೆ ಬಂದರು. ಹಿಂದಿನ ಎರಡೂ ದಿನವೂ ಬೈಕ್‌ ರ‍್ಯಾಲಿ ಮಾಡಿದ್ದ ಅವರು ಹೆಲ್ಮೆಟ್ ಧರಿಸಿರಲಿಲ್ಲ. 

ಸಚಿವರಾದ ಡಾ. ಎಂ.ಸಿ. ಸುಧಾಕರ್, ಸಂತೋಷ್ ಲಾಡ್, ಮಂಕಾಳ ವೈದ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿ ನಿಕೇತ್‌ರಾಜ್ ಮೌರ್ಯ, ಶಾಸಕರಾದ ಶಿವಲಿಂಗೇಗೌಡ, ಎ.ಸಿ. ಶ್ರೀನಿವಾಸ್, ಎಚ್‌.ಸಿ. ಬಾಲಕೃಷ್ಣ, ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್‌. ರವಿ, ಸುಧಾಮ್‌ ದಾಸ್, ಯು.ಬಿ. ವೆಂಕಟೇಶ್, ಬಸನಗೌಡ ಬಾದರ್ಲಿ, ಮಾಜಿ ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಸೌಮ್ಯಾ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಇದ್ದರು.

ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಸೇರಿದ್ದ ಕಾರ್ಯಕರ್ತರು
ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಸೇರಿದ್ದ ಕಾರ್ಯಕರ್ತರು
ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಸರ್ಕಾರದ ಸಚಿವರ ಭಾಷಣದ ಸಂದರ್ಭದಲ್ಲಿ ಕಾರ್ಯಕರ್ತರು ಬಿಜೆಪಿ ಅವಧಿಯ ಹಗರಣಗಳ ಫಲಕಗಳನ್ನು ಪ್ರದರ್ಶಿಸಿದರು
ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಸರ್ಕಾರದ ಸಚಿವರ ಭಾಷಣದ ಸಂದರ್ಭದಲ್ಲಿ ಕಾರ್ಯಕರ್ತರು ಬಿಜೆಪಿ ಅವಧಿಯ ಹಗರಣಗಳ ಫಲಕಗಳನ್ನು ಪ್ರದರ್ಶಿಸಿದರು
ಜೆಡಿಎಸ್ ಮುಗಿಸುವುದಕ್ಕಾಗಿಯೇ ಬಿಜೆಪಿಯವರು ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದೆಲ್ಲಾ ಗೊತ್ತಿರುವ ಕುಮಾರಸ್ವಾಮಿ ಅವರು ವಿಧಿ ಇಲ್ಲದೆ ಅವರೊಂದಿಗೆ ಕೈ ಜೋಡಿಸಿದ್ದಾರೆ
-ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಬಿಜೆಪಿಯವರು ಕರ್ನಾಟಕಕ್ಕೆ ಭ್ರಷ್ಟಾಚಾರದ ಕುಖ್ಯಾತಿ ತಂದು ಕೊಟ್ಟರು. ಅವರು ತಮ್ಮ ಅಧಿಕಾರಾವಧಿಯಲ್ಲಿ ಹಗರಣಗಳಿಂದಾಗಿ ಗಮನ ಸೆಳೆದಿದ್ದಾರೆಯೇ ಹೊರತು ಅಭಿವೃದ್ಧಿ ವಿಷಯಗಳಿಂದಲ್ಲ
-ಈಶ್ವರ ಖಂಡ್ರೆ ಅರಣ್ಯ ಇಲಾಖೆ ಸಚಿವ
ಬಿಜೆಪಿ ಭ್ರಷ್ಟರ ಪಕ್ಷ. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದವರೆಲ್ಲರೂ ಬಿಜೆಪಿ ಸೇರಿಕೊಂಡು ಕ್ಲೀನ್‌ ಚೀಟ್ ತೆಗೆದುಕೊಂಡಿದ್ದಾರೆ. ಬ್ಲಾಕ್ ಮೇಲ್ ಮತ್ತು ಬೆದರಿಕೆಯೇ ಬಿಜೆಪಿಯವರ ಅಸ್ತ್ರ
-ರಾಮಲಿಂಗ ರೆಡ್ಡಿ ಸಾರಿಗೆ ಸಚಿವ
ಭ್ರಷ್ಟಾಚಾರದಲ್ಲೇ ಹುಟ್ಟಿ ಅದರಲ್ಲೇ ಮುಳುಗಿದವರು ಬಿಜೆಪಿಯವರು. ಜಾತ್ಯತೀತತೆಯ ಬೆಲೆ ಗೊತ್ತಿಲ್ಲದ ಜೆಡಿಎಸ್‌ನವರು ತಮ್ಮ ಪಕ್ಷದ ಹೆಸರನ್ನು ಜಾತ್ಯತೀತ ಬದಲು ಜಾತೀಯತೆ ಪಕ್ಷ ಎಂದು ಬದಲಿಸಿಕೊಳ್ಳಲಿ
-ಕೆ.ಜೆ. ಜಾರ್ಜ್ ಇಂಧನ ಸಚಿವ

ಕ್ಷೇತ್ರದಲ್ಲಿ ಸೇವೆಗೆ ಅವಕಾಶ ಕೊಡಿ

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನು ಮತ್ತು ಸಿದ್ದರಾಮಯ್ಯನವರೇ ಅಭ್ಯರ್ಥಿ ಎಂದು ಭಾವಿಸಿ ಇಲ್ಲಿನ ಜನರು ಹಸ್ತದ ಗುರುತಿಗೆ ಮತ ಹಾಕಬೇಕು. ಉಪ ಮುಖ್ಯಮಂತ್ರಿಯಾಗಿದ್ದರೂ ನಿಮ್ಮ ಶಾಸಕನಂತೆ ಇಲ್ಲಿಗೆ ಬಂದು ಕೆಲಸ ಮಾಡುವೆ. ಕ್ಷೇತ್ರದಲ್ಲಿ ಸೇವೆ ಮಾಡಲು ಅವಕಾಶ ಕೊಡಿ. ಬೆಂಗಳೂರು ದಕ್ಷಿಣ ಜಿಲ್ಲೆಯವರಾದ ನಾವು ಚುನಾವಣೆಯಲ್ಲಿ ಕುಮಾರಸ್ವಾಮಿಗೆ ತಕ್ಕ ಉತ್ತರ ಕೊಡಬೇಕು’ ಎಂದು ಶಿವಕುಮಾರ್ ಹೇಳಿದರು. ‘ರೈತನ ಮಗನಾದ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಎಷ್ಟು ಜನರಿಗೆ ಬಗರ್ ಹುಕುಂ‌ ಸಾಗುವಳಿ ಚೀಟಿ ಕೊಟ್ಟಿದ್ದಾರೆಂದು ಉತ್ತರಿಸಲಿ. ಕ್ಷೇತ್ರದಲ್ಲಿ ನಾನು‌ ಜನಸ್ಪಂದನ‌ ಸಭೆ ಮಾಡಿದಾಗ 22 ಸಾವಿರ ಜನ‌ ವಿವಿಧ ಸಮಸ್ಯೆಗಳ‌ ಕುರಿತು ಅಹವಾಲು ಅರ್ಜಿ ಕೊಟ್ಟಿದ್ದಾರೆ. ಹಾಗಾದರೆ ಇವರು ಇಷ್ಟು ವರ್ಷ ಮಾಡಿದ್ದೇನು? ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ. ಅದೇ ರೀತಿ ಎಲ್ಲರೂ ರೈತನ ಮಗ ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣ ನೋಡಿಕೊಳ್ಳಿ

‘ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುತ್ತಿರುವ ಭ್ರಷ್ಟಾಚಾರಿಗಳು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳುವುದನ್ನು ಬಿಟ್ಟು ನಿಮ್ಮ ತಟ್ಟೆಯಲ್ಲಿ ನೊಣ ಬಿದಿದ್ದೆ ಎನ್ನುತ್ತಿದ್ದಾರೆ. ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ  ಕುಮಾರಸ್ವಾಮಿ ಈಗ ಫೋಟೊದಲ್ಲಿ ಮುಂದಿದ್ದಾರೆ. ಪಟ್ಟು ಹಿಡಿದು ಪಾದಯಾತ್ರೆ ಮಾಡಿದ ಬಿಜೆಪಿಯ ವಿಜಯೇಂದ್ರ ಹಿಂದಿದ್ದಾರೆ. ಅಧಿಕಾರದಲ್ಲಿದ್ದಾಗ ನೀವು ಮಾಡಿದ ಹಗರಣಗಳ ಕುರಿತ ನಮ್ಮ ಪ್ರಶ್ನೆಗೆ ಉತ್ತರಿಸಲಾಗದಿದ್ದರೆ ಕಡೆ ಪಕ್ಷ ನಿಮ್ಮದೇ ಪಕ್ಷದ ಶಾಸಕ ಬಸವರಾಜ ಪಾಟೀಲ ಯತ್ನಾಳ ಪ್ರಶ್ನೆಗಾದರೂ ಉತ್ತರ ಕೊಡಿ ವಿಜಯೇಂದ್ರ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT