ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆಗಳಿಗೆ ಸಂಯುಕ್ತ ರಸಗೊಬ್ಬರ ಬಳಸಿ

ಡಿಎಪಿಗೆ ಪರ್ಯಾಯವಾಗಿ ಇತರ ಗೊಬ್ಬರ ಬಳಕೆಗೆ ಕೃಷಿ ಸಲಹೆ
Published 28 ಮೇ 2024, 6:20 IST
Last Updated 28 ಮೇ 2024, 6:20 IST
ಅಕ್ಷರ ಗಾತ್ರ

ರಾಮನಗರ: ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರವನ್ನು ತಮ್ಮ ಬೆಳೆಗಳಿಗೆ ರೂಢಿಗತವಾಗಿ ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಅವುಗಳ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ವೊಟ್ಯಾಷ್ ಲಭ್ಯವಿರುವುದಿಲ್ಲ. ಹಾಗಾಗಿ, ಇತರ ಪೋಷಕಾಂಶಗಳಿಗಾಗಿ ಸಂಯುಕ್ತ ರಸಗೊಬ್ಬರ ಬಳಸಬೇಕು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.

ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿದೆ. ಇವುಗಳಲ್ಲಿ ಇಂಗಾಲ, ಜಲಜನಕ ಹಾಗೂ ಆಮ್ಲಜನಕ ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತವೆ. ಉಳಿದ 14 ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದೆ.

ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಕಾಲ್ಸಿಯಂ, ಮ್ಯಾಗ್ನೆಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬ್ಡಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದೆ. ಇವುಗಳನ್ನು ಲಘು ಪೋಷಕಾಂಶಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ.

ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುವುದಿಲ್ಲ. ಹಾಗಾಗಿ, ಬಾಹ್ಯವಾಗಿ ನೀಡುವುದು ಅನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದೆ. ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರವಾಗಿ ದೊರೆಯುವ ರೂಪದಲ್ಲಿದ್ದು, ಅವುಗಳ ಬಳಕೆ ಅತ್ಯಗತ್ಯವಾಗಿದೆ.

ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪಾಟ್ಯಾಷ್‌ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯ ಇವೆ. ಬೆಳೆಗಳಿಗೆ ಶಿಫಾರಸ್ಸಿನ ಮೇರೆಗೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ. ಅದರಂತೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರವನ್ನು 4:2:1ರ ಅನುಪಾತದಲ್ಲಿ ಬಳಸಬೇಕಾಗಿರುತ್ತದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ಬಳಸುತ್ತಿರುವ ರಸಗೊಬ್ಬರಗಳ ಅನುಪಾತವು ರಾಜ್ಯದಲ್ಲಿ 5:3:1 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಲು ಪೊಟ್ಯಾಷ್‌ಯುಕ್ತ ಸಂಯುಕ್ತ ರಸಗೊಬ್ಬರಗಳ ಬಳಕೆಯನ್ನು ಪ್ರೇರೇಪಿಸುವುದು ಮುಖ್ಯವಾಗಿದೆ.

ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿ.ಎ.ಪಿ ರಸಗೊಬ್ಬರಕ್ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಷ್ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:15, 22:22:11, 14:35:14, 17:17:17, 14:28:14, 19:19:19, 20:10:10 ಇತ್ಯಾದಿ ರಸಗೊಬ್ಬರಗಳನ್ನು ಸಹ ಬಳಸಬಹುದಾಗಿದೆ.

ಈ ಬಗ್ಗೆ ಇಲಾಖೆಯ ವಿವಿಧ ಹಂತಗಳಲ್ಲಿ ಜರುಗುವ ತರಬೇತಿಗಳು, ಕಾರ್ಯಾಗಾರಗಳು ಹಾಗೂ ಅಭಿಯಾನಗಳಲ್ಲಿ ಕಡ್ಡಾಯವಾಗಿ ರೈತರಿಗೆ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಮನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT