ಮಾಗಡಿ: ‘ಹೇಮಾವತಿ ನದಿ ನೀರನ್ನು ಲಿಂಕ್ ಚಾನಲ್ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹರಿಸುವ ಬಗ್ಗೆ ಅ. 2ರೊಳಗೆ ಶಾಸಕ ಎ. ಮಂಜುನಾಥ್ ಸ್ಪಷ್ಟಪಡಿಸದಿದ್ದರೆ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ತಾಲ್ಲೂಕಿನ ಶಿವನಸಂದ್ರ ಮತ್ತು ಮರೂರು ಗ್ರಾಮದ ನಡುವೆ ಹೇಮಾವತಿ ಚಾನಲ್‌ಗೆ ಬಳಸಲು ಸಂಗ್ರಹಿಸಿರುವ ಪೈಪ್‌ಗಳ ಬಳಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೇಮಾವತಿ ನೀರು ಹರಿಸುವುದು ದುಡ್ಡು ಹೊಡೆಯುವ ಯೋಜನೆಯಾಗಿದೆ. ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ 59 ಸಾವಿರ ಮತ ಪಡೆದು ಶಾಸಕರಾಗಿದ್ದು, ಎಷ್ಟು ದಿನ ರೈತರನ್ನು ವಂಚಿಸುತ್ತೀರಿ. ಕೆರೆಗಳಿಗೆ ನೀರು ಹರಿಸುವ ಬಗ್ಗೆ ಟೆಂಡರ್ ಆಗಿದೆ. ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಎಂದು ಟೀಕಿಸಿದರು.
ಸಚಿವ ಮಾಧುಸ್ವಾಮಿ ಲಿಂಕ್ ಚಾನಲ್ ಮೂಲಕ ನೀರು ಹರಿಸುವುದಕ್ಕೆ ತಡೆ ತಂದರು. ಕುಣಿಗಲ್ ಶಾಸಕ ಡಾ.ರಂಗನಾಥ್ ಪ್ರತಿಭಟನೆ ಮಾಡಿದ್ದರು. ನಮ್ಮ ಶಾಸಕರು ಮಾತ್ರ ಉಸಿರೆತ್ತಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಅಂದಿನ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಸುರೇಶ್ ಅವರ ಮನವಿ ಮೇರೆಗೆ ₹ 200 ಕೋಟಿ ಬಿಡುಗಡೆ ಮಾಡಲಾಗಿತ್ತು. ಅಂದಿನ ಡಿಸಿಎಂ ಅಶ್ವತ್ಥನಾರಾಯಣ ಮತ್ತು ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ ಎಂದು ದೂರಿದರು.
ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಗಡಿ ತಾಲ್ಲೂಕಿಗೆ ಮಾತ್ರ ಉಸ್ತುವಾರಿ ಸಚಿವರಾಗಿದ್ದಾರೆ. ಕನಕಪುರ, ಚನ್ನಪಟ್ಟಣ, ರಾಮನಗರದಲ್ಲಿ ಅವರ ಆಟ ನಡೆಯುತ್ತಿಲ್ಲ ಎಂದು ಲೇವಡಿ ಮಾಡಿದರು.
ಎಚ್.ಡಿ. ಕುಮಾರಸ್ವಾಮಿ ಹೆಸರನ್ನು ಭಾವನಾತ್ಮಕವಾಗಿ ಬಳಸಿಕೊಂಡು ಶಾಸಕರಾಗಿರುವ ಮಂಜುನಾಥ್ ತಾಲ್ಲೂಕಿನ ಮಹಿಳೆಯರಿಗೆ ಗಾರ್ಮೆಂಟ್ಸ್ ನಿರ್ಮಿಸಿ ಉದ್ಯೋಗ ಕೊಡುವುದಾಗಿ ನಂಬಿಸಿದ್ದರು. ಮೂರು ವರ್ಷ ಕಳೆದರೂ ಗಾರ್ಮೆಂಟ್ಸ್ ಆರಂಭಿಸಿಲ್ಲ ಎಂದು
ತಿಳಿಸಿದರು.
ಶಾಸಕರಿಂದ ಹೇಮಾವತಿ ನದಿ ನೀರು ತರುವ ಕೆಲಸ ಆಗುವುದಿಲ್ಲ. ರೈತರ ಹಿತರಕ್ಷಣೆ ಉದ್ದೇಶದಿಂದ ನಮಗೆ ಬರಬೇಕಾದ ನೀರಿನ ಪಾಲನ್ನು ಕೊಡಬೇಕು ಎಂದು ಹಕ್ಕೊತ್ತಾಯ ಮಂಡಿಸುತ್ತೇವೆ. ನೀರಾವರಿ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದು ತಿಳಿಸಿದರು.
ತಾಲ್ಲೂಕಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರ ಮನೆಯ ಬಳಿ ಹೋಗಿ ಒಂದು ಗಂಟೆ ಕಾದೆವು. ಅವರು ಅವಕಾಶ ನೀಡಲಿಲ್ಲ. ಅಧಿಕಾರಿಗಳ ಕೈಯಲ್ಲಿ ಮನವಿ ಕೊಟ್ಟು ಹಿಂತಿರುಗುವಾಗ ಸಚಿವರು ಬಂದು ಕಾಟಾಚಾರಕ್ಕೆ ಮಾತನಾಡಿಸಿದರು ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್ ಮಾತನಾಡಿ, ಹೇಮಾವತಿ ನದಿ ನೀರು ಹರಿಸುವ ವಿಚಾರ ರಾಜಕೀಯ ಪ್ರೇರಿತವಾಗುವುದು ಬೇಡ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಚ್. ಶಿವರಾಜ್, ‘ಪೈಪ್ ಅಳವಡಿಸುವುದಕ್ಕೆ ನಾನು ಅಡ್ಡಿಪಡಿಸಿಲ್ಲ’ ಎಂದು ಹೇಳಿದರು.
ಬಿ.ಎಸ್. ಕುಮಾರ್, ಸಿ. ಜಯರಾಮ್, ಗಜೇಂದ್ರ ಮಾತನಾಡಿದರು. ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ಜಿ.ಪಂ. ಮಾಜಿ ಸದಸ್ಯ ಎಂ.ಕೆ. ಧನಂಜಯ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್, ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ಕುದೂರಿನ ಚಂದ್ರಶೇಖರ್, ಲೋಕೇಶ್, ಶಶಾಂಕ್ ಈಡಿಗಗೌಡ, ಕಿಸಾನ್ ಕಾಂಗ್ರೆಸ್‌ನ ಲಕ್ಷ್ಮೀಪತಿರಾಜು, ಪುರುಷೋತ್ತಮ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.