ಗುರುವಾರ , ಡಿಸೆಂಬರ್ 1, 2022
20 °C
ಈ ಬಾರಿ ಜೆಡಿಎಸ್‌–ಬಿಜೆಪಿ ನಡುವೆ ಜಟಾಪಟಿ: ಕಾಂಗ್ರೆಸ್‌ ಕಾದು ನೋಡುವ ತಂತ್ರ!

ಚನ್ನಪಟ್ಟಣ| ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಕಿಚ್ಚು!

ಆರ್. ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ವಿಧಾನಸಭೆ ಚುನಾವಣೆಗೆ ಇನ್ನು ಆರೇಳು ತಿಂಗಳಷ್ಟೇ ಬಾಕಿ ಉಳಿದಿದ್ದು, ರಾಜಕೀಯ ಕಿಚ್ಚು ಹೆಚ್ಚುತ್ತಲೇ ಇದೆ. ಸದ್ಯ ಜಿಲ್ಲೆಯಲ್ಲಿ ಚನ್ನಪಟ್ಟಣ ಇದರ ಕೇಂದ್ರ ಬಿಂದುವಾಗಿದೆ.

ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಶಕದಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ (ಹಿಂದಿನ ಜನತಾದಳ) ಸಾಂಪ್ರದಾಯಿಕ ಎದುರಾಳಿಗಳು. ಈ ಎರಡೂ ಪಕ್ಷದ ನಾಯಕರು–ಮುಖಂಡರ ನಡುವಿನ ವಾಕ್ಸಮರ ಕೈ ಮೀರಿದ್ದು ಉಂಟು. ಆದರೆ ಈಚಿನ ವರ್ಷಗಳಲ್ಲಿ ಬಿಜೆಪಿಯೂ ರಂಗ್ರಪ್ರವೇಶ ಮಾಡಿದ್ದು, ಇದರಿಂದ ತ್ರಿಕೋನ ಸ್ಪರ್ಧೆ ನಡೆದಿದೆ.

ಚನ್ನಪಟ್ಟಣದಲ್ಲಿ ಶನಿವಾರ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ನಡುವಿನ ಗದ್ದಲ ಅಲ್ಲಿ ಮುಂದಿನ ರಾಜಕೀಯ ಸಮರವನ್ನು ಸಾರಿ ಹೇಳುವಂತಿದೆ. ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಶಾಸಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್‌ ಇಬ್ಬರೂ ಪೈಪೋಟಿಗೆ ಬಿದ್ದಿದ್ದಾರೆ. ಪರಿಣಾಮವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತ ತಲುಪಿದ್ದು, ರಾಜಕಾರಣ ಇನ್ನಷ್ಟು ತಾರಕಕ್ಕೆ ಏರುವ ಸಾಧ್ಯತೆ ಇದೆ.

ರಾಜ್ಯ ರಾಜಕಾರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿರುದ್ಧ ಸಡ್ಡು ಹೊಡೆದಿದ್ದು, ಅವರ ವಿರುದ್ಧ ಹಗರಣಗಳ ಆರೋಪ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅಶ್ವತ್ಥನಾರಾಯಣ ಎಚ್‌ಡಿಕೆ ಕಾರ್ಯಕ್ಷೇತ್ರದಲ್ಲೇ ಅವರಿಗೆ ತಿರುಗೇಟು ನೀಡುವ ಪ್ರಯತ್ನದಲ್ಲಿ ಇದ್ದಾರೆ. ಚನ್ನಪಟ್ಟಣದ ಘಟನೆಯೂ ಅದರದ್ದೇ ಒಂದು ಭಾಗ ಎಂದೇ ಹೇಳಲಾಗುತ್ತಿದೆ.

ಮಾಗಡಿಯಲ್ಲೂ ಜಟಾಪಟಿ: ಮಾಗಡಿಯಲ್ಲಿ ಎಂದಿನಂತೆ ಹಾಲಿ ಶಾಸಕ ಎ.ಮಂಜುನಾಥ್‌ ಹಾಗೂ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ನಡುವೆ ಜಿದ್ದು ಮುಂದುವರಿದಿದೆ. ಈಚೆಗೆ ಮರೂರು ಬಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಂಬಂಧಿಸಿದಂತೆ ಸಾಕಷ್ಟು ವಾದ–ಪ್ರತಿವಾದ ನಡೆದಿದ್ದು ರಾಜಕೀಯದ ಕಾವು ಹೆಚ್ಚಿಸಿದೆ.

ಕನಕಪುರ, ರಾಮನಗರದಲ್ಲಿ ಆರ್ಭಟ ಕಡಿಮೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣ ರಂಗೇರುವ ಲಕ್ಷಣಗಳೇ ಕಾಣುತ್ತಿಲ್ಲ. ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಸಮರ್ಥ ನಾಯಕರು ಸಿಗದೇ ಕಾರ್ಯಕರ್ತರು ತಣ್ಣಗಾಗಿದ್ದಾರೆ.

ರಾಮನಗರ ಹಾಗೂ ಮಾಗಡಿ ಕ್ಷೇತ್ರದಲ್ಲಿ ಸಚಿವ ಅಶ್ವತ್ಥನಾರಾಯಣ ಹೆಚ್ಚು ಸಕ್ರಿಯರಾಗಿದ್ದಾರೆ. ಇದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಕಿಚ್ಚು ಹೊತ್ತಿಸತೊಡಗಿದೆ.

ಮರೆತಿಲ್ಲ ಸಚಿವ–ಸಂಸದ ಜಟಾಪಟಿ

ಕಳೆದ ಜನವರಿಯಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಅಂಬೇಡ್ಕರ್‌–ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಂಸದ ಡಿ.ಕೆ. ಸುರೇಶ್‌ ಹಾಗೂ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಪರಸ್ಪರ ಕಿತ್ತಾಡಿಕೊಂಡಿದ್ದರು. ಇದು ರಾಜ್ಯಮಟ್ಟದಲ್ಲೂ ದೊಡ್ಡ ಸುದ್ದಿಯಾಗಿತ್ತು.

ಮುಂದಿನ ನವೆಂಬರ್‌ನಲ್ಲಿ ಜಿಲ್ಲಾಸ್ಪತ್ರೆ ಉದ್ಘಾಟನೆ ಹಾಗೂ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ನೀಡಲು ಸರ್ಕಾರ ಯೋಜಿಸಿದೆ. ಇದು ಇನ್ನಷ್ಟು ರಾಜಕೀಯ ಸಮರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು