ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ಖಚಿತ: ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ
Last Updated 24 ನವೆಂಬರ್ 2022, 2:51 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಬುಧವಾರ ನಡೆಯಿತು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಬಿಜೆಪಿ ಮತ್ತು ಕಾಂಗ್ರೆಸ್ ದುರಾಡಳಿತದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ರಾಜ್ಯವ್ಯಾಪಿ ಪ್ರವಾಸ ಆರಂಭಿಸಿದ್ದಾರೆ. ನಾಡಿನ ಸಮಸ್ತ ಜನತೆಯ ಹಿತದೃಷ್ಟಿಯಿಂದ ಆರೋಗ್ಯ, ಶಿಕ್ಷಣ, ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆ ಸೇರಿದಂತೆ ಹಲವು ಜನಪರ, ರೈತಪರ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ ಎಂದರು.

₹1500 ಕೋಟಿ ಅನುದಾನ: ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಿಂದ ಆಗದ ಅಭಿವೃದ್ಧಿ ಕೇವಲ ನಾಲ್ಕೂವರೆ ವರ್ಷದಲ್ಲಿ ಆಗಿದೆ ಎಂದು ನಿಖಿಲ್ ತಿಳಿಸಿದರು.

ಕುಮಾರಸ್ವಾಮಿ ಇಲ್ಲಿಯ ಶಾಸಕರಾದ ಮೇಲೆ ತಾಲ್ಲೂಕಿಗೆ ₹1500 ಕೋಟಿಗೂ ಹೆಚ್ಚಿನ ಅನುದಾನ ಲಭಿಸಿದೆ. ತಾಲ್ಲೂಕಿನ ರಸ್ತೆ, ಸೇತುವೆ, ನೀರಾವರಿ, ಆಸ್ಪತ್ರೆ, ಶಾಲಾ ಕಾಲೇಜು ಕಟ್ಟಡ ನಿರ್ಮಾಣ, ಮೂಲ ಸೌಲಭ್ಯಗಳು ಸೇರಿದಂತೆ ಅನೇಕ ಕಾಮಗಾರಿಗಳು ಅಭಿವೃದ್ಧಿ ಕಂಡಿದೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ನಗರಸಭಾ ಅಧ್ಯಕ್ಷ ಪಿ. ಪ್ರಶಾಂತ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗಂಗರಾಜು, ಸಿಂ.ಲಿಂ.ನಾಗರಾಜು, ಎಂ.ಸಿ.ಕರಿಯಪ್ಪ, ಹಾಪ್ ಕಾಮ್ಸ್ ದೇವರಾಜು, ಕುಕ್ಕೂರುದೊಡ್ಡಿ ಜಯರಾಂ, ಎಂ.ಜಿ.ಕೆ. ಪ್ರಕಾಶ್, ನರ್ಸರಿ ಲೋಕೇಶ್, ಬಿಳಿಯಪ್ಪ, ಹನುಮಂತಯ್ಯ, ಶಿವು, ಆತ್ಮರಾವ್ ಭಾಗವಹಿಸಿದ್ದರು.

ಇದಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಕೆಂಗಲ್ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ವಂದಾರಗುಪ್ಪೆ, ಮೋಳೆದೊಡ್ಡಿ, ತಗಚಗೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.

ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ

ಚನ್ನಪಟ್ಟಣ ಕ್ಷೇತ್ರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಲು ಪ್ರತಿ ಜಿ. ಪಂ ವ್ಯಾಪ್ತಿಯಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿರುವುದಾಗಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

‘ಪಕ್ಷದ ಹಿರಿಯರು, ಕಿರಿಯರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸುವ ಜೊತೆಗೆ ತಾಲ್ಲೂಕಿನ ಜನರ ಕಷ್ಟ-ಸುಖಗಳು ಮತ್ತು ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇವೆ. ಗ್ರಾಮಗಳ ಸಮಸ್ಯೆಗಳನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಪರಿಹಾರ ದೊರಕಿಸಿ ಕೊಡಲು ಪ್ರಾಮಾಣಿಕ ಶ್ರಮಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT