ಸೋಮವಾರ, 6 ಅಕ್ಟೋಬರ್ 2025
×
ADVERTISEMENT
ADVERTISEMENT

ರಾಮನಗರ: ವಿಮರ್ಶೆಗೆ ದಲಿತ ಪ್ರಜ್ಞೆ ಸ್ಪರ್ಶ ಕೊಟ್ಟ ಮೊಗಳ್ಳಿ ಗಣೇಶ್...

ಜಿಲ್ಲೆಯ ಹೆಮ್ಮೆಯ ಕಥೆಗಾರನ ಬಗ್ಗೆ ನೆನಪಿನ ಬುತ್ತಿ ಹಂಚಿಕೊಂಡ ಆತ್ಮೀಯರು, ಸಾಹಿತಿಗಳು
Published : 6 ಅಕ್ಟೋಬರ್ 2025, 6:23 IST
Last Updated : 6 ಅಕ್ಟೋಬರ್ 2025, 6:23 IST
ಫಾಲೋ ಮಾಡಿ
Comments
ಕನ್ನಡದ ಎರಡನೇ ತಲೆಮಾರಿನ ದಲಿತ ಬರಹಗಾರರಲ್ಲಿ ಮೊಗಳ್ಳಿ ಗಣೇಶ್ ಅದ್ಭುತ ಕಥೆಗಾರ. ತನ್ನ ಬಾಲ್ಯದ ಅನುಭವಗಳನ್ನು ತಮ್ಮ ಕಥೆಗಳಲ್ಲಿ ಅದ್ಭುತವಾಗಿ ಕಟ್ಟಿ ಕೊಟ್ಟಿರುವ ಅವರು ಭಾರತೀಯ ಸಾಹಿತ್ಯ ಲೋಕದಲ್ಲಿ ಪ್ರಮುಖ ಕಥೆಗಾರರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಕಥೆಗಳು ಮತ್ತು ಚಿಂತನೆಗಳು ಹೊಸ ತಲೆಮಾರಿಗೆ ಮಾರ್ಗದರ್ಶಿಯಾಗಿವೆ. ಅವರ ಬರಹಗಳಲ್ಲಿ ರಮ್ಯಾತ್ಮಕ ವರ್ಣನೆ ಕಂಡುಬಂದರೂ ಅದರೊಳಗೆ ದಲಿತ ಬದುಕಿನ ಕ್ರೌರ್ಯ ಅನಾವರಣ ಇರುತ್ತಿತ್ತು. ಸಾಂಸಾರಿಕ ಕೋಟಲೆಗಳು ತಬ್ಬಲಿತನ ಅಳು ಅವರ ಕೃತಿಗಳಲ್ಲಿ ಸ್ಥಾಯಿಭಾವವಾಗಿ ಮೂಡಿಬಂದಿದೆ. ಅವರ ಬರಹದಲ್ಲಿ ಸಾಮುದಾಯಿಕ ಭಾವನೆಯ ರೂಪಕಗಳಾಗಿಯೂ ಕಾಣುತ್ತವೆ. ದೇವನೂರ ಮಹದೇವ ಅವರ ತಲೆಮಾರಿನ ನಂತರದ ದಲಿತ ಹಿನ್ನೆಲೆಯ ಕಥೆಗಾರರು ಹಾಗೂ ಚಿಂತಕರಲ್ಲಿ ಮೊಗಳ್ಳಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇಸಿ ಚಿಂತನೆಯಲ್ಲೂ ಅವರದ್ದು ಉತ್ತಮವಾದ ಒಳನೋಟ. ಸಾಹಿತ್ಯ ಲೋಕ ಅವರನ್ನು ಸರಿಯಾಗಿ ಗುರುತಿಸಲಿಲ್ಲ. ಪ್ರತಿಭೆಗೆ ಸಲ್ಲಬೇಕಾದ ಮನ್ನಣೆ ಸಿಗಲಿಲ್ಲ. ಸಮಾನ ಮನಸ್ಕರು ಸೇರಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಹಿತ್ಯ ಪ್ರಶಸ್ತಿ ನೀಡುವ ಆಲೋಚನೆ ಇದೆ.
– ಬಂಜಗೆರೆ ಜಯಪ್ರಕಾಶ್ ಲೇಖಕ
ಮೊಗಳ್ಳಿ ಗಣೇಶ್ ಅವರು ಅಪರೂಪವೆನಿಸುವ ಕಥೆಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟವರು. ಇನ್ನೂ ಬೆಳಕಿಗೆ ಬಾರದ ದಲಿತ ಲೋಕದ ನೋವು ಶೋಷಣೆ ಅನ್ಯಾಯಗಳ ಕುರಿತು ಶಿಕ್ಷಣ ಪಡೆದ ಮನಸ್ಸು ಚಿಂತಿಸಿ ಸಮುದಾಯದ ದನಿಯಾಗಿ ಆ ನೋವನ್ನು ಹೇಗೆ ಅಭಿವ್ಯಕ್ತಿಸಬಹುದು ಎಂಬುದನ್ನು ತಮ್ಮ ಬರಹಳಲ್ಲಿ ಕಟ್ಟಿ ಕೊಟ್ಟರು. ಅವರ ಹಿರಿಯ ತಲೆಮಾರಿನ ದೇವನೂರ ಮಹದೇವ ಅವರು ಮಾಡಿದ ಕೆಲಸವನ್ನು ಎರಡನೇ ತಲೆಮಾರಿನ ಮೊಗಳ್ಳಿ ಮಾಡಿದರು. ಅವರದ್ದು ವಿಮರ್ಶಾತ್ಮಕ ದೃಷ್ಟಿಕೋನದ ವ್ಯಕ್ತಿತ್ವ. ಆತ್ಮೀಯರು ಸೇರಿದಂತೆ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡುತ್ತಿದ್ದರು. ತಮ್ಮ ಆಲೋಚನಾ ಲಹರಿ ಸಾತ್ವಿಕ ಸಿಟ್ಟು ವೈಚಾರಿಕ ಜಗಳದ ಕಾರಣಕ್ಕೆ ಕೆಲವರಿಂದ ದೂರಾಗಿದ್ದರು. ಇವರನ್ನು ಬಿಟ್ಟರೆ ಬೇರೆ ದೊಡ್ಡ ಸಾಹಿತಿಯೇ ಇಲ್ಲ ಎಂಬ ಶಿಷ್ಯವರ್ಗದ ಓಲೈಕೆ ಮತ್ತು ವೈಭವೀಕರಣಕ್ಕೆ ತಮ್ಮ ‘ತಕಾರರು’ ಎಂಬ ಅಂಕಣದಲ್ಲಿ ತಿವಿಯುತ್ತಿದ್ದ ಮೊಗಳ್ಳಿ ಸಾಹಿತ್ಯದ ವಾಸ್ತವತೆ ಮತ್ತು ನೈಜತೆಯ ಅನಾವರಣ ಮಾಡುತ್ತಿದ್ದರು. ನಮ್ಮ ಭೇಟಿ ಮತ್ತು ಮಾತುಕತೆ ಜಗಳವಿಲ್ಲದೆ ಮುಗಿಯುತ್ತಿರಲಿಲ್ಲ. ಆ ಪ್ರೀತಿಯ ಜಗಳ ಮತ್ತೆ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದೆ. ಅಷ್ಟರಲ್ಲೇ ಅವರ ಸಾವಿನ ಆಘಾತದ ಸುದ್ದಿ ಬಂತು.
– ಡಾ. ಭೈರಮಂಗಲ ರಾಮೇಗೌಡ ಸಾಹಿತಿ
ದೇಸಿ ಸೊಗಡಿನ ಬಹುದೊಡ್ಡ ಕಥೆಗಾರ ಮೊಗಳ್ಳಿ ಗಣೇಶ್. ಭಾಷೆಯನ್ನು ಅದ್ಭುತವಾಗಿ ದುಡಿಸಿಕೊಂಡವರು. ಎಲ್ಲಿ ತಿಳಿವಳಿಕೆ ಇರುತ್ತಿರಲಿಲ್ಲವೊ ಅಲ್ಲಿ ಮೊಗಳ್ಳಿ ಇರುತ್ತಿರಲಿಲ್ಲ. ಅದು ಅವರ ಚಿಂತನೆ ಹಾಗೂ ಆಲೋಚನಾ ಮಟ್ಟಕ್ಕಿದ್ದ ಸಾಮರ್ಥ್ಯ ಎಂತಹದ್ದು ಎಂದು ತೋರಿಸುತ್ತಿತ್ತು. ಆದರೆ ಇದು ಹೊರಜಗತ್ತಿಗೆ ವ್ಯಕ್ತವಾಗುತ್ತಿದ್ದ ರೀತಿ ಬೇರೆಯದೇ ರೀತಿಯಲ್ಲಿತ್ತು. ಅನ್ಯಾಯಗಳಿಂದ ಬೆಂದು ಬೆಳೆದಿದ್ದ ಅವರು ಅನ್ಯಾಯದ ವಿರುದ್ದ ಸಿಡಿಯುತ್ತಿದ್ದರು. ಇದರಿಂದ ಜನರ ಕೆಂಗಣ್ಣಿಗೂ ಗುರಿಯಾಗಿದ್ದಿದೆ. ಸಾಹಿತ್ಯದಲ್ಲಿ ಯಾರೂ ತಲುಪಲಾಗದ ತುದಿಯನ್ನು ಅವರು ತಲುಪಿದ್ದರು. ದಮನಿತರ ದನಿಯಾಗಿದ್ದ ಮೊಗಳ್ಳಿ ಅವರ ಆಂತರ್ಯವನ್ನು ಸಾಹಿತ್ಯ ಜಗತ್ತು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇದೊಂದು ರೀತಿ ಅವರನ್ನು ಅಂತರ್ಮುಖಿಯನ್ನಾಗಿಸಿತ್ತು. ಅವರ ‘ಆದಿಮ ಜಾನಪದ’ ಎಂಬ ಪುಸ್ತಕವನ್ನು ನನ್ನ ಪ್ರಕಾಶನದಿಂದ ಪ್ರಕಟಿಸಿದಾಗ ಅವರ ಮಾತುಗಳಲ್ಲಿ ಅದು ವ್ಯಕ್ತವಾಗುತ್ತಿತ್ತು. ಸಾಹಿತ್ಯ ಕ್ಷೇತ್ರ ಹಾಗೂ ನಮ್ಮ ಜಿಲ್ಲೆಯಲ್ಲೂ ಅವರನ್ನು ಸರಿಯಾಗಿ ಗುರುತಿಸಲಿಲ್ಲ. ಅದಕ್ಕೆ ಅವರು ಜಿಲ್ಲೆಯ ಜನರಿಗೆ ಸ್ಫಂದಿಸುತ್ತಿರಲಿಲ್ಲ ಎಂಬ ಆರೋಪವನ್ನು ಲೇಪಿಸಲಾಗಿತ್ತು. ಆದರೆ ಮೊಗಳ್ಳಿ ಅವರದ್ದು ಎಲ್ಲವನ್ನೂ ಮೀರಿದ ವ್ಯಕ್ತಿತ್ವವಾಗಿತ್ತು.
– ಡಾ. ಎಂ. ಭೈರೇಗೌಡ, ಸಾಹಿತಿ
ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರು ಒಮ್ಮೆ ಮೊಗಳ್ಳಿ ಅವರ ಕಥೆಗಳನ್ನು ಓದಿ ಮೆಚ್ಚಿ ಪ್ರಭಾವಿತರಾಗಿದ್ದರು. ಒಮ್ಮೆ ಮೊಗಳ್ಳಿ ಅವರಿಗೆ ಪತ್ರ ಬರೆದು ವಿಧಾನಸೌಧಕ್ಕೆ ಬಂದು ಭೇಟಿಯಾಗುವಂತೆ ತಿಳಿಸಿದ್ದರು. ಆಗ ಮೊಗಳ್ಳಿ ಅವರು ನನಗೆ ವಿಧಾನಸೌಧಕ್ಕೆ ಬರಲು ಸಾಧ್ಯವಿಲ್ಲ. ನೀವೇ ಯಾವಾಗಲಾದರೂ ಬಿಡುವಾದಾಗ ನಾನಿರುವ ಮಾದನಾಯಕನಹಳ್ಳಿಗೆ ಬನ್ನಿ ಎಂದು ಪತ್ರ ಬರೆದಿದ್ದರು. ಪ್ರಕಾಶ್ ಅವರು ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಾಗ ಮೊಗಳ್ಳಿ ಮನೆಗೆ ಭೇಟಿ ನೀಡಿದ್ದರು. ಅವರೊಂದಿಗೆ ಇಡೀ ಜಿಲ್ಲಾಡಳಿತವೇ ಆ ಊರಿಗೆ ಬಂದಿತ್ತು. ಮೊಗಳ್ಳಿ ಅವರ ಜೊತೆ ಮಾತನಾಡಿದ್ದ ಪ್ರಕಾಶ್ ಅವರು ಕಷ್ಟದಲ್ಲಿದ್ದ ಮೊಗಳ್ಳಿ ಅವರಿಗೆ ₹50 ಸಾವಿರ ಹಣ ಕೊಟ್ಟಿದ್ದರು. ಈ ವಿಷಯವನ್ನು ಅವರ ಆತ್ಮಕಥೆಯನ್ನೂ ಬರೆದುಕೊಂಡಿದ್ದಾರೆ. ಹಳ್ಳಿಗಾಡಿನ ಸುಡು ವಾಸ್ತವಗಳನ್ನು ಸಾಹಿತ್ಯಿಕವಾಗಿ ಕಟ್ಟಿಕೊಟ್ಟ ಮೊಗಳ್ಳಿ ಆಳವಾದ ಅಧ್ಯಯನದ ಜೊತೆಗೆ ಸೂಕ್ಷ್ಮಮತಿಯಾಗಿ ಚಿಂತಿಸುತ್ತಿದ್ದರು. ತಮ್ಮ ಸಾಹಿತ್ಯದಲ್ಲಿ ಮಾನವೀಯ ವೈಚಾರಿಕ ವಿಚಾರಗಳ ಶೋಧದಲ್ಲಿ ತೊಡಗಿಸಿಕೊಂಡಿದ್ದರು.
– ಡಾ. ಕಾಳೇಗೌಡ, ನಾಗಾವರ ಸಾಹಿತಿ
ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ಭಾರತ ಸಂವಿಧಾನ ಬಳಗವು ಹಮ್ಮಿಕೊಂಡಿದ್ದ ಕುವೆಂಪು ವಿಚಾರ ಉತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಮೊಗಳ್ಳಿ ಗಣೇಶ್
ಚನ್ನಪಟ್ಟಣದ ಶತಮಾನೋತ್ಸವ ಭವನದಲ್ಲಿ ಭಾರತ ಸಂವಿಧಾನ ಬಳಗವು ಹಮ್ಮಿಕೊಂಡಿದ್ದ ಕುವೆಂಪು ವಿಚಾರ ಉತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಮೊಗಳ್ಳಿ ಗಣೇಶ್
ಚನ್ನಪಟ್ಟಣದಲ್ಲಿ 2016ರಲ್ಲಿ ನಡೆದಿದ್ದ ಜಿಲ್ಲೆಯ ಸಾಹಿತಿಗಳ 3ನೇ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಡಾ. ಮೊಗಳ್ಳಿ ಗಣೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿದ್ದ ಸಂದರ್ಭ
ಚನ್ನಪಟ್ಟಣದಲ್ಲಿ 2016ರಲ್ಲಿ ನಡೆದಿದ್ದ ಜಿಲ್ಲೆಯ ಸಾಹಿತಿಗಳ 3ನೇ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಡಾ. ಮೊಗಳ್ಳಿ ಗಣೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿದ್ದ ಸಂದರ್ಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT