ಒಟ್ಟಾವ: ಭಾರತ ಮತ್ತು ಕೆನಡಾ ಜೊತೆಗಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ನಡುವೆ ಭಾರತದೊಂದಿಗಿನ ಸಂಬಂಧ ಅತ್ಯಂತ ಪ್ರಮುಖ ಎಂದು ಬಣ್ಣಿಸಿರುವ ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್, ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯ ತನಿಖೆ ಮುಂದುವರಿದಿದ್ದು, ಇಂಡೊ-ಪೆಸಿಫಿಕ್ ಕಾರ್ಯತಂತ್ರದಂತಹ ಪಾಲುದಾರಿಕೆಯನ್ನು ತಮ್ಮ ದೇಶವು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ಜೂನ್ 18ರಂದು ತನ್ನ ದೇಶದ ನೆಲದಲ್ಲಿ ಖಾಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ (45) ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸ್ಫೋಟಕ ಆರೋಪದ ನಂತರ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು.
ಕೆನಡಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ಭಾರತವು, ಕೆನಡಾ ಆಪಾದನೆಗಳು ಅಸಂಬದ್ಧ ಮತ್ತು ಉದ್ದೇಶಪೂರ್ವಕ ಎಂದು ಹೇಳಿತ್ತು. ಬಳಿಕ, ರಾಜತಾಂತ್ರಿಕರನ್ನು ವಜಾ ಮಾಡಲಾಗಿತ್ತು.
ನಿಜ್ಜರ್ ಹತ್ಯೆ ಕುರಿತ ವಿಶ್ವಾಸಾರ್ಹ ಗುಪ್ತಚರ ಮಾಹಿತಿಗೂ ಮೊದಲು ಕೆನಡಾವು ಭಾರತದೊಂದಿಗೆ ಆಳವಾದ ವ್ಯಾಪಾರ, ರಕ್ಷಣೆ ಮತ್ತು ವಲಸೆ ಸಂಬಂಧಗಳನ್ನು ಬಯಸುತ್ತಿತ್ತು ಎಂದು ಬ್ಲೇರ್ ಹೇಳಿದ್ದಾರೆ.
ಭಾನುವಾರ ಪ್ರಸಾರವಾದ ಸಂದರ್ಶನವೊಂದರಲ್ಲಿ ಬ್ಲೇರ್ ಅವರು, ‘ಭಾರತದೊಂದಿಗಿನ ಕೆನಡಾ ಸಂಬಂಧವನ್ನು ಅತ್ಯಂತ ಪ್ರಮುಖ ಎಂದು ಕರೆದರು. ನಿಜ್ಜರ್ ಹತ್ಯೆ ಕುರಿತ ಆರೋಪಗಳ ತನಿಖೆ ನಡೆಯುತ್ತಿದ್ದು, ಕೆನಡಾವು ಭಾರತದ ಜೊತೆಗಿನ ಪಾಲುದಾರಿಕೆಗಳನ್ನು ಮುಂದುವರಿಸಲಿದೆ. ಭಾರತದೊಂದಿಗಿನ ನಮ್ಮ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಇದು ಸವಾಲಿನ ಸಮಸ್ಯೆಯಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ’ ಎಂದು ಉಲ್ಲೇಖಿಸಿದ್ದಾರೆ.
‘ಭಾರತದ ಜೊತೆ ಉತ್ತಮ ಬಾಂಧವ್ಯದ ಜೊತೆ ನಾವು ಕಾನೂನು, ನಾಗರಿಕರನ್ನು ರಕ್ಷಿಸುವ ಜವಾಬ್ದಾರಿಯನ್ನೂ ಹೊಂದಿದ್ದೇವೆ. ನಾವು ಸಂಪೂರ್ಣ ತನಿಖೆಯನ್ನು ನಡೆಸಿ ಸತ್ಯವನ್ನು ಖಚಿತಪಡಿಸಿಕೊಳ್ಳುತ್ತೇವೆ. ಆರೋಪಗಳು ನಿಜವೆಂದು ಸಾಬೀತಾದರೆ, ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗುತ್ತದೆ. ಕೆನಡಾವು ಆ ಬಗ್ಗೆ ಬಹಳ ಮಹತ್ವದ ಕಾಳಜಿಯನ್ನು ಹೊಂದಿದೆ’ಎಂದು ಬ್ಲೇರ್ ಹೇಳಿದರು.
ಇಂಡೊ-ಪೆಸಿಫಿಕ್ ಕಾರ್ಯತಂತ್ರವು ಕೆನಡಾಕ್ಕೆ ಇನ್ನೂ ನಿರ್ಣಾಯಕವಾಗಿದೆ ಎಂದು ಬ್ಲೇರ್ ಹೇಳಿದರು.
ಕೆನಡಾ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಮತ್ತು ಭಾರತ-ವಿರೋಧಿ ಶಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಭಾರತವು ಗುರುವಾರ ಕೆನಡಾವನ್ನು ಒತ್ತಾಯಿಸಿತ್ತು. ಕೆನಡಿಯನ್ನರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.