ಬುಧವಾರ, ಆಗಸ್ಟ್ 10, 2022
23 °C
ಮೊದಲ ಹಂತದ ಚುನಾವಣೆ: ಇಂದು ಬಹಿರಂಗ ಪ್ರಚಾರ ಅಂತ್ಯ

ಗ್ರಾಮ ಪಂಚಾಯಿತಿ ಚುನಾವಣೆ: ಅಭ್ಯರ್ಥಿಗಳಿಂದ ಕಡೆ ಕ್ಷಣದ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿರುವ ರಾಮನಗರ ಹಾಗೂ ಕನಕಪುರ ತಾಲ್ಲೂಕಿನಲ್ಲಿ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ. ಮನೆ ಮನೆ ಪ್ರಚಾರಕ್ಕೆ ಸೋಮವಾರವೂ ಅವಕಾಶ ಇರಲಿದೆ.

ಈ ಎರಡೂ ತಾಲ್ಲೂಕುಗಳಲ್ಲಿನ 56 ಗ್ರಾಮ ಪಂಚಾಯಿತಿಗಳಿಗೆ ಇದೇ 22ರಂದು ಮತದಾನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಶನಿವಾರ ಪ್ರಚಾರ ಬಿರುಸುಗೊಳಿಸಿದ್ದು, ಮನೆ ಮನೆ ಸುತ್ತಿದರು. ಇನ್ನೂ ಸಾಕಷ್ಟು ಅಭ್ಯರ್ಥಿಗಳು ದೇವಾಲಯಗಳನ್ನು ಪ್ರದಕ್ಷಿಣೆ ಹಾಕಿ, ಗೆಲುವಿಗೆ ಹರಕೆ ಕಟ್ಟಿಕೊಂಡರು. ಭಾನುವಾರ ಮುಖಂಡರು ಕೈ ಜೋಡಿಸಲಿದ್ದು, ಸಭೆ ಸಮಾರಂಭಗಳನ್ನು ನಡೆಸಲು ಕಡೆಯ ದಿನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ರಂಗು ಹೆಚ್ಚಿದ್ದು, ನಾಯಕರೂ ಪ್ರಚಾರಕ್ಕೆ ಕೈ ಜೋಡಿಸಿರುವುದು ಅಭ್ಯರ್ಥಿಗಳ ಉತ್ಸಾಹ ಹೆಚ್ಚಿಸಿದೆ.

ಚುನಾವಣಾ ವೀಕ್ಷಕರ ನೇಮಕ: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗವು ರಾಮನಗರ ಜಿಲ್ಲೆಗೆ ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಗಾಯತ್ರಿ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿದೆ. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ನೇರವಾಗಿ ಚುನಾವಣಾ ವೀಕ್ಷಕರ ಮೊಬೈಲ್ ಸಂಖ್ಯೆ 8867608260 ಅಥವಾ ತಾಲ್ಲೂಕು ಕಂಟ್ರೋಲ್ ರೂಮ್‌ಗೆ ಲಿಖಿತವಾಗಿ ದೂರು ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಪರಿಶೀಲನೆ: ಚುನಾವಣಾ ವೀಕ್ಷಕರಾದ ಗಾಯತ್ರಿ ಶನಿವಾರ ತಾಲ್ಲೂಕುಗಳ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೇತನ ಸಹಿತ ರಜೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾವಣೆ ಮಾಡಲಿರುವ ಮತದಾರರಿಗೆ ಕರ್ನಾಟಕ ಪ್ರಂಚಾಯತ್‌ರಾಜ್‌ ನಿಯಮ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿ ಮಂಗಳವಾರ ರಜೆ ನೀಡುವಂತೆ ಸರ್ಕಾರ ಘೋಷಿಸಿದೆ. ಶಿಕ್ಷಣ ಸಂಸ್ಥೆ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಕೈಗಾರಿಕೆಗಳಲ್ಲಿ ದುಡಿಯುವ ನೌಕರರಿಗೆ ರಜೆ ಸಿಗಲಿದೆ.

ಮದ್ಯಕ್ಕಿಲ್ಲ ‘ತೊಂದರೆ’
ಚುನಾವಣೆ ಹಿನ್ನೆಲೆಯಲ್ಲಿ ಎರಡು ತಾಲ್ಲೂಕುಗಳಲ್ಲಿನ ಗ್ರಾಮೀಣ ಪ್ರದೇಶದ ಮದ್ಯ ಮಾರಾಟ ಅಂಗಡಿಗಳು ಭಾನುವಾರ ಸಂಜೆಯಿಂದಲೇ ಬಾಗಿಲು ಮುಚ್ಚಲಿವೆ. ಆದರೆ ನಗರ ಪ್ರದೇಶಗಳಿಗೆ ನೀತಿಸಂಹಿತೆ ಅನ್ವಯ ಆಗದು. ಈ ಹಿನ್ನೆಲೆಯಲ್ಲಿ ಪಟ್ಟಣ ಪ್ರದೇಶದ ಬಾರ್‌ಗಳು ಎಂದಿನಂತೆ ವಹಿವಾಟು ನಡೆಸುವ ಸಾಧ್ಯತೆ ಇದೆ. ಕಡೆಯ ದಿನಕ್ಕೆ ಬೇಕಾದಷ್ಟು ಮದ್ಯ ಸಂಗ್ರಹ ಮಾಡಿಕೊಳ್ಳಲು ಮುಂದಾಗಿದ್ದ ಅಭ್ಯರ್ಥಿಗಳು ಈ ಸುದ್ದಿ ಕೇಳಿ ನಗರ ಪ್ರದೇಶಗಳಿಂದಲೇ ಮದ್ಯ ತರಿಸಿಕೊಳ್ಳಲು ಯೋಜಿಸಿದ್ದಾರೆ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಸಾಗಣೆ ಮಾಡುವುದು ಅಕ್ರಮವಾಗಿದ್ದು, ಸಿಕ್ಕಿಬಿದ್ದಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಎರಡನೇ ಹಂತದಲ್ಲೂ ಉತ್ಸಾಹ
ಎರಡನೇ ಹಂತದಲ್ಲಿ ಚುನಾವಣೆ ನಡೆದಿರುವ ಮಾಗಡಿ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ನಾಮಪತ್ರ ವಾಪಸ್‌ಗೆ ಶನಿವಾರ ಕಡೆಯ ದಿನವಾಗಿದ್ದು, ಹಲವು ಕಡೆ ಅವಿರೋಧ ಆಯ್ಕೆಗಳು ನಡೆದಿವೆ.

ಚನ್ನಪಟ್ಟಣ ತಾಲ್ಲೂಕಿನ 32 ಗ್ರಾ.ಪಂ.ಗಳಿಂದ ಒಟ್ಟು 1724 ಮಂದಿಗಳ ನಾಮಪತ್ರ ಕ್ರಮಬದ್ಧವಾಗಿತ್ತು. ಇದರಲ್ಲಿ ಎಷ್ಟು ಮಂದಿ ಉಮೇದುವಾರಿಕೆ ವಾಪಸ್‌ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅಂತೆಯೇ ಮಾಗಡಿಯ 30 ಗ್ರಾ.ಪಂ.ಗಳಿಂದ 1600ಕ್ಕೂ ಹೆಚ್ಚು ಮಂದಿ ಸ್ಪರ್ಧೆ ಬಯಸಿದ್ದಾರೆ. ಅಂತಿಮವಾಗಿ ಎಷ್ಟು ಮಂದಿ ಕಣದಲ್ಲಿ ಉಳಿದಿದ್ದಾರೆ ಎಂಬ ಮಾಹಿತಿ ಭಾನುವಾರ ಲಭ್ಯ ಆಗಲಿದೆ.

118: ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಒಟ್ಟು ಗ್ರಾಮ ಪಂಚಾಯಿತಿಗಳು
56: ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಗ್ರಾ.ಪಂ.ಗಳು
62: ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಗ್ರಾ.ಪಂ.ಗಳು

ಮುಖ್ಯಾಂಶಗಳು
* ಚುನಾವಣಾ ವೀಕ್ಷಕರಾಗಿ ಗಾಯತ್ರಿ ನೇಮಕ
* ಮತದಾನದ ದಿನ ಕಾರ್ಮಿಕರಿಗೆ ವೇತನಸಹಿತ ರಜೆ
* ಎರಡನೇ ಹಂತ: ಹಲವಡೆ ಅವಿರೋಧ ಆಯ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು